Advertisement

ಸಂಘಟಿತರಾಗದಿದ್ರೆ ಬೇಡಿಕೆ ಈಡೇರಲ್ಲ; ಮಂಜುನಾಥ್‌

06:29 PM Jul 05, 2022 | Team Udayavani |

ಚಿತ್ರದುರ್ಗ: ಟೆಂಡರ್‌ ಪದ್ಧತಿಯಡಿ ಕೆಲಸ ಮಾಡುವ ಎಲ್ಲ ಕಾರ್ಮಿಕರೂ ಸಂಘಟನೆಯೊಳಗೆ ಬರದಿದ್ದರೆ ಎಷ್ಟು ಹೋರಾಟ ಮಾಡಿದರೂ ನಿಮ್ಮ ಬೇಡಿಕೆಗಳನ್ನು ಯಾವ ಸರ್ಕಾರಗಳು ಈಡೇರಿಸುವುದಿಲ್ಲ ಎಂದು ಕೆಪಿಸಿಸಿ ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಜಿ.ಎಸ್‌. ಮಂಜುನಾಥ್‌, ಪೌರ ಕಾರ್ಮಿಕರಿಗೆ ಸಲಹೆ ನೀಡಿದರು.

Advertisement

ಸೇವೆ ಕಾಯಂ ಹಾಗೂ ಇತರೆ ಬೇಡಿಕೆಗಳ ಈಡೇರಿಕೆಗಾಗಿ ದಿನಗೂಲಿ ಹಾಗೂ ಹೊರಗುತ್ತಿಗೆ ಪೌರ ಕಾರ್ಮಿಕರು ಜಿಲ್ಲಾ ಕಾರಿ ಕಚೇರಿ ವೃತ್ತದಲ್ಲಿ ನಡೆಸುತ್ತಿರುವ ಧರಣಿಗೆ ಕಾಂಗ್ರೆಸ್‌ನಿಂದ ಬೆಂಬಲ ವ್ಯಕ್ತಪಡಿಸಿ ಅವರು ಮಾತನಾಡಿದರು. ಇದು ರಾಜ್ಯ ಮಟ್ಟದ ಸಮಸ್ಯೆಯಾಗಿದ್ದು ಅಷ್ಟು ಸುಲಭವಾಗಿ ಬಗೆಹರಿಯುವುದಿಲ್ಲ.

1994ರಲ್ಲಿ ಪ್ರಥಮವಾಗಿ ಮುಷ್ಕರ ನಡೆಸಿದಾಗ ಅಂದಿನ ಮುಖ್ಯಮಂತ್ರಿಯಾಗಿದ್ದ ಎಚ್‌ .ಡಿ.ದೇವೇಗೌಡರು ಹತ್ತು ಸಾವಿರ ದಿನಗೂಲಿ ನೌಕರರನ್ನು ಕಾಯಂ ಮಾಡಿದ್ದರು. 1998ರಲ್ಲಿ ಮುಷ್ಕರ ಆರಂಭಿಸಿದಾಗ ಆಗಿನ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಮತ್ತೆ ಹತ್ತು ಸಾವಿರ ಪೌರ ಕಾರ್ಮಿಕರನ್ನು ಕಾಯಂಗೊಳಿಸಿದರು. ನಮ್ಮ ಹೋರಾಟಗಳಿಂದ ಕೆಲವು ದಿನಗೂಲಿಗಳು ಈಗ ಕಮಿಷನರ್‌ಗಳಾಗಿದ್ದಾರೆ. ಸಂಘಟನೆಗೆ ಅಂತಹ ಶಕ್ತಿಯಿದೆ. ಅದಕ್ಕಾಗಿ ದಿನಗೂಲಿ ಹಾಗೂ
ಹೊರಗುತ್ತಿಗೆ ಪೌರ ಕಾರ್ಮಿಕರು, ವಾಹನ ಚಾಲಕರು, ಲೋಡರ್, ವಾಲ್‌ಮಾನ್‌ಗಳು ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯಬಾರದು ಎಂದರು.ಮುಷ್ಕರ ಎಂದಾಕ್ಷಣ ಎಲ್ಲಾ ಬೇಡಿಕೆಗಳು ಈಡೇರುವುದಿಲ್ಲ. ಕಾನೂನು ತೊಡಕುಗಳಿರುತ್ತವೆ.

ಎಸ್ಸೆಸ್ಸೆಲ್ಸಿ ಪಾಸಾದ 27 ಪೌರ ಕಾರ್ಮಿಕರು ನಮ್ಮ ಹೋರಾಟದ ಫಲವಾಗಿ ಚೀಫ್‌ ಆಫೀಸರ್‌ ಗಳಾಗಿದ್ದಾರೆ. 27 ಸಾವಿರ ಪೌರ ಕಾರ್ಮಿಕರು ಟೆಂಡರ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರು ನಗರ ಒಂದರಲ್ಲಿಯೇ ಹನ್ನೊಂದು ಸಾವಿರ ಪೌರ ಕಾರ್ಮಿಕರು ದಿನಗೂಲಿಗಳಾಗಿದ್ದಾರೆ. ಟೆಂಡರ್‌ ಬೇಡವೇ ಬೇಡ ಎನ್ನುವ ಹೋರಾಟ ಮೊದಲಿನಿಂದಲೂ ಇದೆ. ಅದಕ್ಕೆ ನೀವು ಬೆಂಬಲಿಸಲಿಲ್ಲ. ಕಾಯಂ ಕೆಲಸಕ್ಕೆ ಟೆಂಡರ್‌ ಕರೆಯಬಾರದು ಎಂದು ಸುಪ್ರೀಂ ಕೋರ್ಟ್‌ ಆದೇಶವಿದೆ. ಆದರೂ ಟೆಂಡರ್‌ ಮೂಲಕವೇ ಪೌರ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಂ.ಕೆ. ತಾಜ್‌ಪೀರ್‌ ಮಾತನಾಡಿ, ಪೌರ ಕಾರ್ಮಿಕರು ಹಾಗೂ ಹೊರಗುತ್ತಿಗೆ ನೌಕರರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ನಾಲ್ಕು ದಿನಗಳಿಂದಲೂ ಧರಣಿ ನಡೆಸುತ್ತಿದ್ದಾರೆ. ಸರ್ಕಾರ ಗಮನ ಹರಿಸಿ ಕಾಯಂಗೊಳಿಸಬೇಕು. ಒಂದು ವೇಳೆ ಬೇಡಿಕೆ ಈಡೇರಿಸದಿದ್ದರೆ ನಮ್ಮ ಪಕ್ಷ ರಾಜ್ಯದಲ್ಲಿ ಅ ಧಿಕಾರಕ್ಕೆ ಬಂದರೆ ದಿನಗೂಲಿ ಹಾಗೂ ಹೊರಗುತ್ತಿಗೆ ಪೌರ ಕಾರ್ಮಿಕರು, ವಾಹನ ಚಾಲಕರು, ಲೋಡರ್ಗಳನ್ನು ಕಾಯಂ ಮಾಡುತ್ತೇವೆ. ಈ ವಿಚಾರವನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಬೇಕು ಎಂದು ಜಿ.ಎಚ್‌. ಮಂಜುನಾಥ್‌ ಅವರಿಗೆ ಮನವಿ ಮಾಡಿದರು.

Advertisement

ಕಾಂಗ್ರೆಸ್‌ ಮುಖಂಡರಾದ ಹಾಲಸ್ವಾಮಿ, ಕೆ.ಪಿ. ಸಂಪತ್‌ಕುಮಾರ್‌, ಡಿ.ಎನ್‌. ಮೈಲಾರಪ್ಪ, ಎಸ್‌.ಎನ್‌. ರವಿಕುಮಾರ್‌, ಎನ್‌.ಡಿ. ಕುಮಾರ್‌, ಮೋಹನ್‌ ಪೂಜಾರಿ, ಗೀತಾನಂದಿನಿ ಗೌಡ, ಜಿಪಂ ಮಾಜಿ ಸದಸ್ಯ ಶಿವಮೂರ್ತಿ ಮತ್ತಿತರರು ಇದ್ದರು.

ಪೌರ ಕಾರ್ಮಿಕರು ಹಾಗೂ ಕಮೀಷನರ್‌ಗಳು ನಿರಂತರವಾಗಿ ಹೋರಾಟದಲ್ಲಿದ್ದುಕೊಂಡು ಸಂಘಟನೆಯೊಳಗೆ ಬಂದರೆ ನೀವು ಕಾಯಂ ನೌಕರರಾಗುತ್ತೀರಿ. ಇಲ್ಲವಾದರೆ ಎಷ್ಟು ಹೋರಾಟ ಮಾಡಿದರೂ ಪ್ರಯೋಜನವಿಲ್ಲ. ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಎಲ್ಲಾ ಸರ್ಕಾರಗಳಲ್ಲಿಯೂ ಪೌರ ಕಾರ್ಮಿಕರ ಸೇವೆ ಕಾಯಂಗೆ ಹೋರಾಟ ಮಾಡಿಕೊಂಡು ಬಂದಿದ್ದೇನೆ.
ಜಿ.ಎಸ್‌. ಮಂಜುನಾಥ್‌,ಕೆಪಿಸಿಸಿ ಅಸಂಘಟಿತ ಕಾರ್ಮಿಕರ ವಿಭಾಗದ ಅಧ್ಯಕ್ಷ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next