ನವದೆಹಲಿ: ಒಂದು ವೇಳೆ ಮಾಜಿ ಪ್ರಧಾನಿಯಾಗಿದ್ದ ಐಕೆ ಗುಜ್ರಾಲ್ ಅವರ ಸಲಹೆಯನ್ನು ಅಂದು ಗೃಹ ಸಚಿವರಾಗಿದ್ದ ಪಿವಿ ನರಸಿಂಹ ರಾವ್ ಅವರು ಪರಿಗಣಿಸಿ ಶೀಘ್ರವೇ ಸೇನಾಪಡೆಯನ್ನು ನಿಯೋಜಿಸಲು ಲಕ್ಷ್ಮ ವಹಿಸಿದ್ದರೆ 1984ರ ಸಿಖ್ಖ್ ಹತ್ಯಾಕಾಂಡವನ್ನು ತಡೆಯಬಹುದಾಗಿತ್ತು ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಮಾಜಿ ಪ್ರಧಾನಿ ಐಕೆ ಗುಜ್ರಾಲ್ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಂಗ್, 1984ರಲ್ಲಿ ಘಟನೆ ನಡೆಯುತ್ತಿದ್ದಾಗ ತೀವ್ರ ಕಳವಳಗೊಂಡಿದ್ದ ಗುಜ್ರಾಲ್ ಅವರು ಗೃಹ ಸಚಿವರಾಗಿದ್ದ ಪಿವಿ ನರಸಿಂಹ ರಾವ್ ಅವರನ್ನು ಭೇಟಿಯಾಗಿದ್ದು, ಪರಿಸ್ಥಿತಿ ತುಂಬಾ ಹದಗೆಟ್ಟಿದ್ದು, ಸರ್ಕಾರ ಕೂಡಲೇ ಸೇನಾಪಡೆಯನ್ನು ನಿಯೋಜಿಸಬೇಕು ಎಂದು ಮನವಿ ಮಾಡಿಕೊಂಡಿದ್ದರು. ಒಂದು ವೇಳೆ ಅವರ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ್ದರೆ 1984ರ ಸಿಖ್ಖ್ ಹತ್ಯಾಕಾಂಡ ತಪ್ಪಿಸಬಹುದಾಗಿತ್ತು ಎಂದು ಹೇಳಿದರು.
ಐಕೆ ಗುಜ್ರಾಲ್ ಅವರು 1997ರಿಂದ 98ರವರೆಗೆ ಪ್ರಧಾನಿಯಾಗಿದ್ದರು. 1984ರಲ್ಲಿ ದೇಶದ ಪ್ರಧಾನಿಯಾಗಿದ್ದವರು ರಾಜೀವ್ ಗಾಂಧಿ, ಪಿವಿ ನರಸಿಂಹ ರಾವ್ ಗೃಹ ಸಚಿವರಾಗಿದ್ದರು ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.
ಇಂದಿರಾ ಗಾಂಧಿ ಹತ್ಯೆ ನಂತರ ನಡೆದ 1984ರ ಸಿಖ್ಖ್ ವಿರೋಧಿ ಗಲಭೆಯಲ್ಲಿ ದೇಶಾದ್ಯಂತ ಸುಮಾರು ಮೂರು ಸಾವಿರ ಮಂದಿ ಸಿಖ್ಖ್ ರ ಮಾರಣಹೋಮ ನಡೆಸಲಾಗಿತ್ತು.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದ್ದು, ಅಂದು ಪ್ರಧಾನಿಯಾಗಿದ್ದು ರಾಜೀವ್ ಗಾಂಧಿ. ಸೇನಾಪಡೆಯನ್ನು ಕರೆಯಿಸುವ ಅಧಿಕಾರ ಪ್ರಧಾನಿಗಿತ್ತು. ರಾಜೀವ್ ಗಾಂಧಿ ಸೇನಾಪಡೆಯನ್ನು ಯಾಕೆ ಕರೆಯಿಸಿಲ್ಲ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಪ್ರಶ್ನಿಸಿದ್ದಾರೆ. ದೊಡ್ಡ ಮರವೊಂದು ಬೀಳುವಾಗ, ಭೂಮಿ ಅಲುಗಾಡುವುದು ಸಹಜ ಎಂದು ರಾಜೀವ್ ಗಾಂಧಿ ಅಂದು ನಡೆದ ಹತ್ಯಾಕಾಂಡವನ್ನು ಸಮರ್ಥಿಸಿಕೊಂಡಿದ್ದರು ಎಂದು ರವಿಶಂಕರ್ ಪ್ರಸಾದ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.