ದಿಸ್ಪುರ್: ”ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ನನ್ನ ಮಾತನ್ನು ವಾಪಸ್ ತೆಗೆದುಕೊಳ್ಳುತ್ತೇನೆ. ಯಾರ ಭಾವನೆಗಳಿಗೂ ಧಕ್ಕೆ ತರುವ ಉದ್ದೇಶ ನನಗಿರಲಿಲ್ಲ” ಎಂದು ವಿವಾದಾತ್ಮಕ ಹೇಳಿಕೆಗಳ ಕುರಿತು ಎಐಯುಡಿಎಫ್ ಅಧ್ಯಕ್ಷ ಮತ್ತು ಅಸ್ಸಾಂ ಸಂಸದ ಬದ್ರುದ್ದೀನ್ ಅಜ್ಮಲ್ ಕ್ಷಮೆ ಯಾಚಿಸಿದ್ದಾರೆ.
”ಸರಕಾರವು ಅಲ್ಪಸಂಖ್ಯಾತರಿಗೆ ನ್ಯಾಯ ನೀಡಬೇಕು ಮತ್ತು ಅವರಿಗೆ ಶಿಕ್ಷಣ ಮತ್ತು ಉದ್ಯೋಗ ನೀಡಬೇಕು ಎಂದು ನಾನು ಬಯಸುತ್ತೇನೆ” ಎಂದು ಹೇಳಿಕೆ ಕುರಿತು ಸ್ಪಷ್ಟನೆ ನೀಡಿ ತೇಪೆ ಹಚ್ಚುವ ಪ್ರಯತ್ನ ಮಾಡಿದ್ದರು.
”ಜನಸಂಖ್ಯೆ ಬೆಳವಣಿಗೆಯ ಮುಸ್ಲಿಂ ಸೂತ್ರವನ್ನು ಅನುಸರಿಸಲು ಹಿಂದೂಗಳು ತಮ್ಮ ಹೆಣ್ಣುಮಕ್ಕಳಿಗೆ 18-20 ವರ್ಷ ವಯಸ್ಸಿನಲ್ಲೇ ವಿವಾಹ ಮಾಡಬೇಕು. ಹಿಂದೂಗಳಿಗೆ ಸಮಸ್ಯೆ ಇದೆ. ಹಿಂದೂಗಳು ಸರಿಯಾದ ವಯಸ್ಸಿನಲ್ಲಿ ಮದುವೆಯಾಗುವುದಿಲ್ಲ, ಅವರು 2-3 ವ್ಯವಹಾರಗಳನ್ನು ಇಟ್ಟುಕೊಳ್ಳುತ್ತಾರೆ. ಅವರ ಜನಸಂಖ್ಯೆಯು ಮುಸ್ಲಿಮರ ವೇಗದಲ್ಲಿ ಬೆಳೆಯುತ್ತಿಲ್ಲ.ಅವರು 40 ನೇ ವಯಸ್ಸಿನಲ್ಲಿ ಮದುವೆಯಾಗುತ್ತಾರೆ, ಅದೂ ಒತ್ತಡದಲ್ಲಿ, ಅವರು ಹೇಗೆ ಸಂತಾನೋತ್ಪತ್ತಿ ಮಾಡುತ್ತಾರೆ? ಹೇಳಿ ” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
“ನಮ್ಮ ಸಮುದಾಯದಲ್ಲಿ, ಹುಡುಗಿಯರು 18 ವರ್ಷ ತುಂಬಿದ ತಕ್ಷಣ ಮದುವೆಯಾಗುತ್ತಾರೆ. ಭಾರತ ಸರಕಾರ ಇದಕ್ಕೆ ಅನುಮತಿ ನೀಡಿದೆ. ಹುಡುಗರು 22 ವರ್ಷವಾದ ತಕ್ಷಣ ಮದುವೆಯಾಗುತ್ತಾರೆ. ಆದ್ದರಿಂದ ನಮ್ಮ ಜನಸಂಖ್ಯೆಯು ಹೆಚ್ಚುತ್ತಿದೆ” ಎಂದು ಹೇಳಿದ್ದರು. ಈ ಕುರಿತು ಬಿಜೆಪಿ ಸೇರಿ ಹಿಂದೂ ಪರ ಸಂಘಟನೆಗಳು ವ್ಯಾಪಕ ಆಕ್ರೋಶ ಹೊರ ಹಾಕಿದ್ದವು.