Advertisement

Belthangady:ಕಲಿಕೆ, ಕಲೆ, ಕೌಶಲ ಜತೆಯಾದರೆ ಮಕಳು ಎಲ್ಲದರಲ್ಲೂ ಗೆಲ್ಲುತ್ಲಾರೆ;ವಿ.ಕೆ. ವಿಟ್ಲ

11:38 AM Sep 06, 2024 | Team Udayavani |

ಬೆಳ್ತಂಗಡಿ: ಮಕ್ಕಳನ್ನು ಕೇವಲ ಅಂಕಕ್ಕೆ ಸೀಮಿತಗೊಳಿಸದೆ ಅವರಲ್ಲಿ ಕಲೆ, ಕೌಶಲಗಳನ್ನು ತುಂಬಿದಾಗ ಅವರು ಮುಂದೆ ಆತ್ಮವಿಶ್ವಾಸದ ಖನಿಯಾಗಿ ಬೆಳಗುತ್ತಾರೆ, ಎಲ್ಲದರಲ್ಲೂ ಗೆಲ್ಲುತ್ತಾರೆ ಎನ್ನುತ್ತಾರೆ ಈ ಬಾರಿಯ ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾ ಶಿಕ್ಷಕ ವಿ.ಕೆ. ವಿಟ್ಲ ಅವರು. ಗುರುವಾಯನಕೆರೆ ಸರಕಾರಿ ಪ್ರೌಢ ಶಾಲೆಯ ಚಿತ್ರಕಲಾ ಶಿಕ್ಷಕರಾಗಿರುವ ವಿ.ಕೆ. ವಿಟ್ಲ ಅವರು ತಮ್ಮ ಶಾಲೆ ಯನ್ನು ಕಲಾಮಯಗೊಳಿಸಿದ್ದಾರೆ. ವಿಶ್ವ ವಿಖ್ಯಾತ ಕಲಾವಿದ ವಿಲಾಸ್‌ ನಾಯಕ್‌ ಅವರು ಇವರ ಶಿಷ್ಯ.

  1. ನಿಮ್ಮ ಕಲಾ ಶಿಕ್ಷಣ ಮತ್ತು ಶಿಕ್ಷಕರಾಗಲು ಪ್ರೇರಣೆ ಎಲ್ಲಿಂದ?
    ಚಂದಳಿಕೆ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ವಿಠಲ ಪ.ಪೂ.ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪೂರೈಸಿದ ನಾನು ಸುರೇಶ್‌ ಹಂದಾಡಿ ಅವರ ಚಿತ್ರಕಲಾ ಗರಡಿಯಲ್ಲಿ ಪಳಗಿದ ಬಳಿಕ ನೇರವಾಗಿ ಕಾಲಿಟ್ಟದ್ದು ಕಲಾ ಲೋಕಕ್ಕೆ. ಮುಂದೆ ಮಂಗಳೂರಿನ ಮಹಾಲಸ ಕಲಾ ವಿದ್ಯಾಲಯ ಸೃಜನಶೀಲ ಕಲ್ಪನೆಗಳನ್ನು ತಿದ್ದಿ ತೀಡಿತು. ಬಿಳಿನೆಲೆ ಸುಬ್ರಹ್ಮಣ್ಯೇಶ್ವರ ಪ್ರೌಢ ಶಾಲೆಯಿಂದ ಆರಂಭಗೊಂಡ ವೃತ್ತಿ ಬದುಕು, ಉಜಿರೆ ಎಸ್‌ಡಿಎಂ, ಬಳಿಕ ಗುರುವಾಯನಕೆರೆಯಲ್ಲಿ ಮುಂದುವರಿ ದಿದೆ. ಕಲೆ ಮಕ್ಕಳ ಮೂಲಕ ಹೆಮ್ಮರವಾಗಲಿ ಎನ್ನುವ ಆಸೆಯಿಂದ ಶಿಕ್ಷಕನಾದೆ.
  2. ಮಕ್ಕಳಿಗೆ ಕಲಾ ಶಿಕ್ಷಣದ ಅಗತ್ಯತೆ ಎಷ್ಟಿದೆ?
    ಮಕ್ಕಳಿಗೆ ಪುಸ್ತಕದ ಪಾಠ ಅಗತ್ಯವೇ ಹೌದು. ಆದರೆ ಕೇವಲ ಪಾಠ ಮತ್ತು ಅಂಕಕ್ಕಷ್ಟೇ ಸೀಮಿತಗೊಳಿಸಬಾರದು. ಅವರನ್ನು ಕಲೆಗೆ ತೆರೆದುಕೊಳ್ಳುವಂತೆ ಮಾಡಬೇಕು, ಕೌಶಲಗಳನ್ನು ಕಲಿಸಬೇಕು. ಆಗ ಅವರಲ್ಲಿ ಆತ್ಮವಿಶ್ವಾಸ ಬೆಳೆಯುತ್ತದೆ. ಇದರಿಂದ ಎಲ್ಲೇ ಹೋದರೂ ಗೆಲ್ಲುವ ತಾಕತ್ತು ಅವರಿಗೆ ಬರುತ್ತದೆ. ಪಠ್ಯದ ಜತೆಗೆ ಕಲೆ, ಕೌಶಲ, ಸಂಸ್ಕಾರ ಮತ್ತು ಜೀವನ ಪಾಠ ಬೇಕು ಎನ್ನುವುದು ನನ್ನ ಅಭಿಮತ.
  3. ವೃತ್ತಿಯಲ್ಲಿ ನಿಮಗೆ ಮರೆಯಲಾಗದ ಕ್ಷಣ ಯಾವುದು?
    2016ರಲ್ಲಿ ನಮ್ಮ ಶಾಲೆಗೆ ದ.ಕ. ಜಿಲ್ಲಾ ಉತ್ತಮ ಶಾಲೆ ಪ್ರಶಸ್ತಿ ಜತೆಗೆ 15 ಲಕ್ಷ ರೂ. ಬಹುಮಾನ ಬಂತು. ಅದಕ್ಕೆ ಕಾರಣೀಭೂತವಾಗಿದ್ದು ಮರೆಯಲಾಗದ ಕ್ಷಣ. ಜತೆಗೆ ಗುರುವಾಯನಕೆರೆ ಶಾಲೆಯನ್ನು ನನ್ನ ಕಲ್ಪನೆಯಂತೆ ಕಲಾಮ ಯಗೊಳಿಸಿದ್ದು ಆನಂದ ತಂದಿದೆ. 100ಕ್ಕೂ ಅಧಿಕ ಕಲಾ ಶಿಬಿರ ನಡೆಸಿಕೊಟ್ಟಿದ್ದೇನೆ. ಧರ್ಮಸ್ಥಳದ ಧರ್ಮಾಧಿಕಾರಿಯವರ ಮಾರ್ಗದರ್ಶನದಲ್ಲಿ ಶಿಕ್ಷಣ ಸಂಸ್ಥೆಗೆ ಒಳಪಟ್ಟ ಅನೇಕ ಕಡೆ ಚಿತ್ತಾರಗಳು ರಚಿಸಿದ್ದೇನೆ. ಪ್ರಾಕೃತಿಕವಾಗಿ ಸಿಗುವ ಮಣ್ಣು ಮತ್ತು ಬಣ್ಣಗಳಿಂದಲೇ ಕಲಾಕೃತಿ ರಚಿಸಿ ಪರಿಸರ ಉಳಿಸುವ ಸಂದೇಶ ನೀಡುತ್ತಿರುವುದು ನನಗೆ ಹೆಮ್ಮೆ ತಂದಿದೆ.
  4. ಸರಕಾರಿ ಶಾಲೆಗಳ ಅಭಿವೃದ್ಧಿ ಪರಿಕಲ್ಪನೆಗೆ ನಿಮ್ಮ ಸಲಹೆ ಏನು?
    ಸರಕಾರಿ ಶಾಲೆಗಳ ಉಳಿವು ಎಲ್ಲರಿಂದಲೂ ಆಗಬೇಕಿದೆ. ಶಿಕ್ಷಣ ವ್ಯವಸ್ಥೆ, ಪೋಷಕರು, ಎಲ್ಲರೂ ನಮ್ಮದು ಎಂದು ಪ್ರೀತಿಸಿ ಉಳಿಸಿ ಬೆಳೆಸಿದರೆ ಕನ್ನಡ ಮಾಧ್ಯಮ ಶಾಲೆಗಳು ಬೆಳೆಯಲು ಸಾಧ್ಯವಿದೆ.
Advertisement

-ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next