ಬೆಂಗಳೂರು: ಕೈಗಾರಿಕೆಗಳಿಗೆ ನಿರಂತರವಾಗಿ ವಿದ್ಯುತ್ ಪೂರೈಕೆ, ಸಮರ್ಪಕ ಮೂಲ ಸೌಕರ್ಯ ಕಲ್ಪಿಸುವುದು ನಮ್ಮ ಆದ್ಯತೆಯಾಗಲಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ರಾಜ್ಯ ಸಣ್ಣ ಕೈಗಾರಿಕೆಗಳ ಸಂಘದಲ್ಲಿ ನಡೆದ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜೆಡಿಎಸ್ ಅಧಿಕಾರಕ್ಕೆ ಬಂದರೆ ಕೈಗಾರಿಕಾ ವಸಹಾತು ರಾಜ್ಯದ ನಾಲ್ಕೂ ಭಾಗಗಳಲ್ಲಿ ಮಾಡುವುದು ಸೇರಿದಂತೆ ಕರ್ನಾಟಕ ಕೈಗಾರಿಕೆಯಲ್ಲಿ ಮಾದರಿ ರಾಜ್ಯವಾಗಿಸಲಾಗುವುದು ಎಂದು ಹೇಳಿದರು.
ಕೈಗಾರಿಕೆ ಅಭಿವೃದ್ಧಿ ಬಗ್ಗೆ ನನ್ನದೇ ಆದ ಕಲ್ಪನೆ ಇಟ್ಟುಕೊಂಡಿದ್ದೇನೆ. ಇತ್ತೀಚೆಗೆ ಕೆಲವು ರಾಜಕಾರಣಗಳು ಮಿಷನ್, ಕಮೀಷನ್ ಸರ್ಕಾರ ಎಂದು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿಕೊಳ್ಳುತ್ತಿದ್ದಾರೆ ಆದರೆ, ನನ್ನದು ವಿಷನ್ ಸರ್ಕಾರ ಎಂದು ತಿಳಿಸಿದರು.
ಸೋಲಾರ್ ವಿದ್ಯುತ್‌ಗೆ ನಾನು ಹೆಚ್ಚಿನ ಒತ್ತು ಕೊಡುತ್ತೇನೆ. ಆ ವಿಚಾರದಲ್ಲಿ ನನಗೇನೂ ಕಮೀಷನ್ ಬೇಕಿಲ್ಲ. ಏಳು ತಿಂಗಳಲ್ಲಿ ರಾಜ್ಯದ ವಿದ್ಯುತ್ ಪರಿಸ್ಥಿತಿ ಸುಧಾರಿಸಿ ಅತ್ಯಂತ ಕಡಿಮೆ ದರದಲ್ಲಿ ಕೈಗಾರಿಕೆ ಸೇರಿ ಗೃಹೋಪಯೋಗಿ ಬಳಕೆಗೂ ವಿದ್ಯುತ್ ಪೂರೈಸುವುದು ನನ್ನ ಗುರಿ ಎಂದು ಹೇಳಿದರು.
ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿಗೆ 500 ಕೋಟಿ ರೂ. ವಿಶೇಷ ಪ್ಯಾಕೇಜ್, ಲಕ್ಷಾಂತರ ಕುಟುಂಬಗಳಿಗೆ ಉದ್ಯೋಗ ಕೊಡುತ್ತಿರುವ ಉದ್ಯಮಿಗಳು ಸಂಕಷ್ಟಕ್ಕೆ ಈಡಾದಾಗ ವಿಮಾ ರಕ್ಷಣೆ ಯೋಜನೆ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಕಾಸಿಯಾ ಅಧ್ಯಕ್ಷ ಹನುಮಂತೇಗೌಡ ಹಾಗೂ ವಾಣಿಜ್ಯೋಮ ಸಂಘಟನೆಯ ಸುಧಾಕರಶೆಟ್ಟಿ, ಅರಸಪ್ಪ ಮತ್ತಿತರರು ಉಪಸ್ಥಿತರಿದ್ದರು.