Advertisement

ದಿನಸಿ ದರ ಏರಿಸಿದರೆ ಕಠಿನ ಕ್ರಮ: ಜಿಲ್ಲಾಧಿಕಾರಿ ಜಿ. ಜಗದೀಶ್‌

11:40 PM Mar 24, 2020 | mahesh |

ಉಡುಪಿ: ವ್ಯಾಪಾರಿಗಳು ಪರಿಸ್ಥಿತಿಯ ಲಾಭ ಪಡೆದುಕೊಂಡು ತರಕಾರಿ ಹಾಗೂ ದಿನಸಿ ವಸ್ತುಗಳ ಕೃತಕ ಅಭಾವ ಸೃಷ್ಟಿಸಿ ದರ ಏರಿಸಿದರೆ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ಎಚ್ಚರಿಸಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅಗತ್ಯ ದಿನಸಿ ವಸ್ತುಗಳು ದೊರೆಯಲಿದ್ದು, ಸಾರ್ವಜನಿಕರು ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಮನೆಯಿಂದ ಹೊರಬರಲು ಅವಕಾಶವಿದೆ. ಹೊರ ಜಿಲ್ಲೆಗಳಿಂದ ಆಗಮಿಸುವ ತರಕಾರಿ ಮತ್ತು ದಿನಸಿ ಹೊತ್ತ ಲಾರಿಗಳಿಗೆ ಮಾತ್ರ ಗಡಿ ದಾಟಲು ಅವಕಾಶ ಕಲ್ಪಿಸಲಾಗಿದೆ. ಈ ಸಂದರ್ಭ ವಾಹನ ಸವಾರರ ಆರೋಗ್ಯ ತಪಾಸಣೆ ನಡೆಸಲಾಗುವುದು ಎಂದರು.

ಬಸ್‌ ನಿಲ್ದಾಣದಲ್ಲಿ ತರಕಾರಿ ವಿತರಣೆ
ಹೊರ ಜಿಲ್ಲೆಯಿಂದ ಪ್ರತಿನಿತ್ಯ ಭಾರೀ ಪ್ರಮಾಣದಲ್ಲಿ ತರಕಾರಿ ಬರುತ್ತಿದ್ದು ಅದನ್ನು ಖರೀದಿ ಸಲು ವ್ಯಾಪಾರಿಗಳು ಉಡುಪಿ ಕೆಎಸ್‌ಆರ್‌ಟಿಸಿ ನಿಲ್ದಾಣದ ಸಮೀಪ ಮುಗಿಬೀಳುತ್ತಿದ್ದಾರೆ. ಇದೀಗ ತರಕಾರಿಯನ್ನು ವಿಶಾಲವಾದ ಸರ್ವೀಸ್‌ ಬಸ್‌ ನಿಲ್ದಾಣದಲ್ಲಿ ವಿತರಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ವೈನ್‌ಶಾಪ್‌ ಬಂದ್‌
ಜಿಲ್ಲೆಯಲ್ಲಿ ಆಹಾರ, ವೈದ್ಯಕೀಯ ಉಪಕರಣ, ಮೆಡಿಕಲ್‌, ಇಂಧನ, ಕೃಷಿ ಉಪಕರಣ, ದಿನಸಿ ಅಂಗಡಿ, ತರಕಾರಿ ಅಂಗಡಿಗಳು ಕಾರ್ಯಾಚರಿಸು ತ್ತಿವೆ. ಖರೀದಿ ಸಂದರ್ಭ ಮಾಲಕರು – ಗ್ರಾಹಕರು ಅಂತರ ಕಾಯ್ದುಕೊಳ್ಳಬೇಕು.ಬಾರ್‌ ಹಾಗೂ ವೈನ್‌ಶಾಪ್‌ ಗಳನ್ನು ಸಂಪೂರ್ಣವಾಗಿ ಬಂದ್‌ ಮಾಡಲಾಗಿದೆ ಎಂದರು.

ತುರ್ತು ಸೇವೆ
ಸರಕಾರಿ ಕಚೇರಿಗಳಲ್ಲಿ ತುರ್ತು ಸೇವೆ ಮಾತ್ರ ಲಭ್ಯ. ಬಿ, ಸಿ, ಡಿ ಗ್ರೂಪ್‌ ನೌಕರರಿಗೆ ರಜೆ ನೀಡಲಾಗಿದೆ. ಆದರೆ ಅವರು ಕೇಂದ್ರ ಸ್ಥಾನದಲ್ಲಿದ್ದು, ಆಹ್ವಾನಿಸಿದಾಗ ಕರ್ತವ್ಯಕ್ಕೆ ಹಾಜರಾಗಬೇಕು ಎಂದರು.

Advertisement

ಕ್ಲಿನಿಕ್‌ ಮುಚ್ಚದಿರಿ
ಖಾಸಗಿ ಕ್ಲಿನಿಕ್‌ ಮತ್ತು ಆಸ್ಪತ್ರೆಗಳನ್ನು ಮುಚ್ಚಬಾರದು. ಎಲ್ಲ ರೋಗಿಗಳನ್ನು ಸ್ಕ್ರೀನಿಂಗ್‌ ಮಾಡ
ಬೇಕು. ಕೊರೊನಾ ಲಕ್ಷಣಗಳಿದ್ದರೆ ಆರೋಗ್ಯ ಇಲಾಖೆಗೆ ತಿಳಿಸಬೇಕು ಎಂದರು.

ಕೋವಿಡ್‌-19 ಆಸ್ಪತ್ರೆ
ಮುನ್ನೆಚ್ಚರಿಕೆ ಕ್ರಮವಾಗಿ ಕೊರೊನಾ ಶಂಕಿತರನ್ನು ಇರಿಸಿಕೊಳ್ಳಲು ಉದ್ಯಾವರದ ಎಸ್‌ಡಿಎಂ ಆಸ್ಪತ್ರೆಯಲ್ಲಿ 150 ಬೆಡ್‌ಗಳ ವ್ಯವಸ್ಥೆ ಕಲ್ಪಿಸಲಾಗುವುದು. ಒಂದು ವೇಳೆ ಜಿಲ್ಲೆಯಲ್ಲಿ ಕೊರೊನಾ ಸೋಂಕು ಪ್ರಕರಣ ಪತ್ತೆಯಾದರೆ ತತ್‌ಕ್ಷಣ ಜಿಲ್ಲಾಸ್ಪತ್ರೆಯನ್ನು ಕೋವಿಡ್‌ ಆಸ್ಪತ್ರೆಯಾಗಿ ಪರಿವರ್ತಿಸಿ ಎಲ್ಲ ಬೆಡ್‌ಗಳನ್ನು ಕೊರೊನಾ ಪೀಡಿತರಿಗೆ ಮೀಸಲಿಡಲು ನಿರ್ಧರಿಸಲಾಗಿದೆ. ಎರಡನೇ ಹಂತದಲ್ಲಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ 100 ಬೆಡ್‌ ಹಾಗೂ ಇನ್ನೂ ಅಧಿಕ ಸಂಖ್ಯೆಯಲ್ಲಿ ಪ್ರಕರಣ ಪತ್ತೆಯಾದರೆ ಜಿಲ್ಲಾ ಗ್ರಂಥಾಲಯದಲ್ಲಿ 100 ಬೆಡ್‌ಗಳ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ಕ್ವಾರಂಟೈನ್‌ಗಳಿಗೆ ಅಗತ್ಯ ವಸ್ತು ಪೂರೈಕೆ
ಜಿಲ್ಲೆಯಲ್ಲಿ 900 ಮಂದಿ ವಿದೇಶದಿಂದ ಆಗಮಿಸಿದವರ ಮಾಹಿತಿ ಜಿಲ್ಲಾಡಳಿತಕ್ಕೆ ಲಭ್ಯವಾಗಿದೆ. ಕುಟುಂಬ ಸಮೇತರಾಗಿ 28 ದಿನಗಳ ಹೋಂ ಕ್ವಾರಂಟೈನ್‌ಗೆ ಒಳಗಾಗುವುದು ಅವಶ್ಯ. ವಿದೇಶದಿಂದ ಆಗಮಿಸಿದ ಎಲ್ಲರ ಮನೆಗೂ ಸ್ಟಿಕ್ಕರ್‌ ಅಳವಡಿಸಲಾಗುತ್ತದೆ. ಪೊಲೀಸ್‌ ಮತ್ತು ಆರೋಗ್ಯ ಇಲಾಖೆ ಸಿಬಂದಿ ಅವರ‌ ಮೇಲೆ ನಿಗಾ ಇಡಲಿದ್ದಾರೆ.

21 ಸಹಪ್ರಯಾಣಿಕರಿಗೆ ಹೋಂ ಕ್ವಾರಂಟೈನ್‌
ದುಬಾೖಯಿಂದ ಮಂಗಳೂರಿಗೆ ಆಗಮಿಸಿದ ಯುವಕನಿಗೆ ಕೋವಿಡ್-19 ದೃಢಪಟ್ಟಿರುವ ಹಿನ್ನೆಲೆಯಲ್ಲಿ ಆತನೊಂದಿಗೆ ಪ್ರಯಾಣಿಸಿದ ಜಿಲ್ಲೆಯ 21 ಮಂದಿಯನ್ನು ಗುರುತಿಸಲಾಗಿದೆ. ಒಬ್ಬರು ಸುರತ್ಕಲ್‌ನಲ್ಲಿ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಉಳಿದ 20 ಮಂದಿಗೆ ಹೋಂ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಿ ಆರೋಗ್ಯ ತಪಾಸಣೆ ನಡೆಸಲಾಗಿದೆ. ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಗಂಟಲಿನ ದ್ರವ ಪರೀಕ್ಷಾ ಕೇಂದ್ರ ತೆರೆಯುವಂತೆ ಸರಕಾರಕ್ಕೆ ಮನವಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next