Advertisement

ಹೋಳಿ ಹಬ್ಬಕ್ಕೆ ಅನುಮತಿ ನಿರಾಕರಿಸಿದರೆ ಚುನಾವಣೆ ಬಹಿಷ್ಕಾರ

01:00 AM Mar 20, 2019 | Team Udayavani |

ಕುಂದಾಪುರ: ಪ್ರತಿ ವರ್ಷ ಆಚರಿಸಿಕೊಂಡು ಬರುತ್ತಿರುವ ಹೋಳಿ ಹಬ್ಬದ ಮೆರವಣಿಗೆಗೆ ಈ ಬಾರಿ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗುವ ಸಂಭವವಿದ್ದು, ಮಾ. 20ರಿಂದ ಮಾ. 22ರ ವರೆಗೆ ನಡೆಯುವ ಆಚರಣೆಗೆ ಅನುಮತಿ ನಿರಾಕರಿಸಿದರೆ ಮತದಾನ ಬಹಿಷ್ಕರಿಸುವುದಾಗಿ ಖಾರ್ವಿ ಸಮುದಾಯದ ಮುಖಂಡರು ಹಾಗೂ ಸಮಾಜದವರು ಎಚ್ಚರಿಸಿದ್ದಾರೆ. 

Advertisement

ಇಲ್ಲಿನ ಖಾರ್ವಿಕೇರಿಯ ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ಸೋಮವಾರ ಸಂಜೆ ನಡೆದ ಸಮಾಲೋಚನ ಸಭೆಯಲ್ಲಿ ಈ ಒಕ್ಕೊರಲ ನಿರ್ಧಾರ ಕೈಗೊಂಡಿದ್ದಾರೆ.

ಕರಾವಳಿಯಲ್ಲಿ ಖಾರ್ವಿ ಸಮಾಜದ ಯುವಕರು, ಯುವತಿಯರು ಹಾಗೂ ಸಮಾಜದ ಎಲ್ಲರೂ ಒಟ್ಟಾಗಿ ಸೇರಿ ಆಚರಿಸುವ ವಿಶಿಷ್ಟ ಕಾಮನ ಹಬ್ಬ “ಹೋಳಿ’ ಆಚರಣೆಗೆ ಅನುಮತಿ ನೀಡಲು ಹಿಂದೇಟು ಹಾಕುತ್ತಿರುವ ಅಧಿಕಾರಿಗಳ ವಿರುದ್ಧ ಆಕ್ರೋಶ ಕೂಡ ವ್ಯಕ್ತವಾಯಿತು. 

ಸಮುದಾಯದ ಹಬ್ಬ
ಖಾರ್ವಿ ಸಮಾಜದ ಮುಖಂಡ ಜಯಾನಂದ ಖಾರ್ವಿ ಮಾತನಾಡಿ, ಚುನಾವಣೆಗೂ ಹೋಳಿಗೂ ಸಂಬಂಧವಿಲ್ಲ.  ಸಾಂಪ್ರದಾಯಿಕವಾಗಿ ಖಾರ್ವಿ ಸಮಾಜಕ್ಕೆ ಇರುವ ಒಂದೇ ಹಬ್ಬ ಇದಾಗಿರುವುದರಿಂದ ಸಂಪ್ರದಾಯದ ಆಚರಣೆ ಅಡ್ಡಿಪಡಿಸುವುದು ಸರಿಯಲ್ಲ. ಕುಂದಾಪುರದಲ್ಲಿಯೇ ಸುಮಾರು 6 ಸಾವಿರಕ್ಕೂ ಹೆಚ್ಚು ಮಂದಿ ಸೇರಿ ಆಚರಿಸುವ ಹಬ್ಬ. ಈ ಬಗ್ಗೆ ಮತ್ತೆ ಮತ್ತೆ ಅಧಿಕಾರಿಗಳ ಮನವೊಲಿಸುವ ಪ್ರಯತ್ನ ನಡೆಸಲಾಗುತ್ತದೆ ಎಂದು ಅವರು ಹೇಳಿದರು.
ಸಮಾಲೋಚನಾ ಸಭೆಯಲ್ಲಿ ವಿದ್ಯಾರಂಗ ಮಿತ್ರ ಮಂಡಳಿ ಅಧ್ಯಕ್ಷ ದಿನಕರ ಪಠೇಲ, ಮಹಾಕಾಳಿ ದೇವಸ್ಥಾನದ ಅಧ್ಯಕ್ಷ ಪ್ರಕಾಶ್‌ ಖಾರ್ವಿ, 3 ಮೊಕ್ತೇಸರರು, ಖಾರ್ವಿಕೇರಿ ಹಾಗೂ ಕುಂದಾಪುರ ಭಾಗದ ಖಾರ್ವಿ ಸಮಾಜ ಬಾಂಧವರು ಪಾಲ್ಗೊಂಡಿದ್ದರು. 

ಸಂಪ್ರದಾಯಕ್ಕೆ ಅಡ್ಡಿ ಮಾಡದಿರಿ
ಹಬ್ಬದ ಆಚರಣೆಗೆ ನೀತಿ ಸಂಹಿತೆ ಅಡ್ಡಿಯಾಗುತ್ತದೆ ಎಂದಾದರೆ ಅಂತಹ ಚುನಾವಣೆಯನ್ನೇ ನಮ್ಮ ಸಮಾಜ ಬಹಿಷ್ಕರಿಸುತ್ತದೆ. ಪ್ರಜಾಪ್ರಭುತ್ವದಡಿಯಲ್ಲಿ ಸಂವಿಧಾನ ಬದ್ಧವಾಗಿ ಒಂದು ಸಮಾಜದ, ಸಂಪ್ರದಾಯದ ಆಚರಣೆಗೆ ತಡೆ ತರುವ ಯಾವ ಹಕ್ಕೂ ಯಾರಿಗೂ ಇಲ್ಲ. ಒಂದು ವೇಳೆ ಜನರಿಗಾಗಿ ಇರಬೇಕಾದ ಕಾನೂನು ಕಟ್ಟಳೆಗಳಿಂದ ಒಂದು ಸಮಾಜಕ್ಕೆ ಅನ್ಯಾಯವಾಗುತ್ತದೆಯಾದರೆ ಅದರ ವಿರುದ್ಧ ಚುನಾವಣಾ ಬಹಿಷ್ಕಾರದ ಮೂಲಕ ಹೋರಾಡಬೇಕಾಗುತ್ತದೆ ಎಂದು ಚಂದ್ರಶೇಖರ ಖಾರ್ವಿ ಎಚ್ಚರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next