Advertisement

ಗಾಂಧೀಜಿ ಕನಸು ಸಾಕಾರವಾಗಬೇಕಾದರೆ ಗ್ರಾಮಗಳ ಜೀರ್ಣೋದ್ಧಾರ ಅಗತ್ಯ

05:08 PM Sep 07, 2022 | Team Udayavani |

ಬೀದರ: ಹಳ್ಳಿಗಳು ಈ ದೇಶದ ನಿಜವಾದ ಆತ್ಮಗಳಿದ್ದು, ಇಲ್ಲಿಯ ಕೃಷಿಕ ಈ ಜಗತ್ತಿನ ಎರಡನೇ ನಿಜವಾದ ದೇವರಾಗಿದ್ದಾನೆ. ಇಂಥ ಪವಿತ್ರ ಹಳ್ಳಿಗಳ ಸಂವರ್ಧನೆ ಹಾಗೂ ಸಂರಕ್ಷಣೆಗೆ ಯುವಜನರು ಮುಂದೆ ಬರಬೇಕು ಎಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಡಾ| ಬಸವರಾಜ ಪಾಟೀಲ ಸೇಡಂ ಕರೆ ನೀಡಿದರು.

Advertisement

ನಗರದ ಡಾ| ಚನ್ನಬಸವ ಪಟ್ಟದ್ದೇವರ ರಂಗ ಮಂದಿರದಲ್ಲಿ ಮಂಗಳವಾರ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದಿಂದ ಗ್ರಾಮೀಣ ಯುವಕ-ಯುವತಿಯರಿಗಾಗಿ ಜರುಗಿದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ನಗರ ಹಾಗೂ ಪಟ್ಟಣಗಳ ನಿರ್ಮಾಣದಲ್ಲಿ ದೇಶದ ಸುಮಾರು ಮೂರು ಸಾವಿರ ಹಳ್ಳಿಗಳು ನಾಪತ್ತೆಯಾಗಿವೆ. ಅಲ್ಲಿಯ ಗ್ರಾಮೀಣ ಬದುಕು ಜತೆಗೆ ಅಲ್ಲಿಯ ಹೈನುಗಾರಿಕೆ, ಕುರಿ, ಕೋಳಿ ಸಾಕಾಣಿಕೆ, ಕುಂಬಾರಿಕೆ, ಬಡಿಗೆತನ ಎಲ್ಲವೂ ಮಾಯವಾಗಿದೆ. ಇದಕ್ಕೆಲ್ಲ ಇಂದಿನ ಸರ್ಕಾರದ ನಗರಿಕರಣ ವ್ಯವಸ್ಥೆಯೆ ಮೂಲ ಕಾರಣ ಎಂದರು.

ಗ್ರಾಮೀಣ ಪ್ರದೇಶದ ಜಮೀನುಗಳು ನಿಜವಾದ ಬಂಗಾರದ ಗಣಿ ಇದ್ದಂತೆ. ಅಲ್ಲಿಯ ಜಲ ಅಮೃತಕ್ಕೆ ಸಮಾನ. ಅಲ್ಲಿಯ ಆಹಾರ, ಸಾಮಾಜಿಕ ಬದುಕು ಸ್ವರ್ಗಮಯವಾದದ್ದು. ಅಲ್ಲಿಯ ಹಬ್ಬ ಹರಿದಿನಗಳು ಹಾಗೂ ಜಾತ್ರೆಗಳು ಇಂದಿಗೂ ರಾಷ್ಟ್ರೀಯ ಏಕತೆ ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿವೆ ಎಂದರು.

ನಗರ ಹಾಗೂ ಮಹಾನಗರದಲ್ಲಿನ ಜನ ತಮ್ಮ ಅರ್ಥಹೀನ ನಗರಿಕರಣ ಬದುಕು ಮೊಟಕುಗೊಳಿಸಿ ಪುನಃ ತಮ್ಮ ಹಳ್ಳಿಗಳತ್ತ ಮುಖ ಮಾಡಿ ಕೃಷಿ ಹಾಗೂ ಗುಡಿ ಕೈಗಾರಿಕೆಗಳಿಗೆ ಮತ್ತು ಕೃಷಿಯೇತರ ಚಟುವಟಿಕೆಗಳನ್ನು ಮೈಗೂಡಿಸಿಕೊಂಡು ದೇಶದ ಆರ್ಥಿಕ ಭದ್ರತೆ ಹೆಚ್ಚಿಸಲು ಮುಂದೆ ಬರುವಂತೆ ಡಾ| ಸೇಡಂ ಸಲಹೆ ಮಾಡಿದರು.

Advertisement

ಶಾಸಕ ರಹೀಮ್‌ ಖಾನ್‌ ಮಾತನಾಡಿ, ಇಂದು ಗಾಂಧೀಜಿಯವರ ಕನಸು ಸಾಕಾರವಾಗಬೇಕಾದರೆ ಗ್ರಾಮಗಳ ಜೀರ್ಣೋದ್ಧಾರ ಅನಿವಾರ್ಯ. ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣ ಹಾಗೂ ಉದ್ಯೋಗಕ್ಕೆಂದು ನಗರ ಪ್ರದೇಶಗಳಿಗೆ ಕಳುಹಿಸದೇ ತಮ್ಮಲ್ಲಿರುವ ವ್ಯವಸ್ಥೆಯಲ್ಲಿಯೇ ಅವರಿಗೆ ಉತ್ತಮ ಶಿಕ್ಷಣ ನೀಡಿ, ಸ್ವಾಭಿಮಾನಿಗಳಾಗಿ ಬದುಕುವ ಕಲೆ ಕಲಿಸಿಕೊಡಬೇಕು. ಗ್ರಾಮೀಣ ಕಲೆ, ಸಾಹಿತ್ಯ, ಜನಪದ ಬದುಕು, ಸಂಸ್ಕೃತಿ ಹಾಗೂ ಸಂಪ್ರದಾಯ ಪುನರುಜ್ಜೀವನಗೊಳಿಸಲು ಪ್ರೋತ್ಸಾಹಿಸಬೇಕಿದೆ. ಅಲ್ಲಿಯ ಪಶುಪಾಲನೆ, ಹಾಗೂ ಕೃಷಿ ಚಟುವಟಿಕೆಗಳತ್ತ ಯುವಜನರು ಧಾವಿಸಬೇಕೆಂದು ಕರೆ ಕೊಟ್ಟರು.

ಸಂಘದ ನಿರ್ದೇಶಕ ರೇವಣಸಿದ್ದಪ್ಪ ಜಲಾದೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂಧ ಕ್ರೀಡಾಪಟು ಡಾ| ನ್ಯಾನು ಪಾಟೀಲ ಹಾಗೂ ಕೃಷ್ಣ ಸಂಪಗಾವಂಕರ್‌ ಮಹಾರಾಜ ಅವರು ವಿಶೇಷ ಉಪನ್ಯಾಸ ನೀಡಿದರು. ನಾಟ್ಯ ನೃತ್ಯಶ್ರಯ ಕಲಾ ತಂಡದ ಮಕ್ಕಳಿಂದ ಭರತನಾಟ್ಯ ನೃತ್ಯ ಪ್ರದರ್ಶನ ಜರುಗಿತು. ಕೃಷಿ ಕ್ಷೇತ್ರದಲ್ಲಿ ಗೋವಿಂದ ಮಹಾರಾಜ, ಆದರ್ಶ ಗ್ರಾಮಕ್ಕಾಗಿ ಶ್ರೀನಿವಾಸ ಗಣಪತರಾವ್‌ ಜೊನ್ನಿಕೆರೆ, ಸಂಗೀತ ಕ್ಷೇತ್ರದಲ್ಲಿ ವೀರ ಸಮರ್ಥ, ಗ್ರಾಮ ಅಭಿವೃದ್ಧಿಗಾಗಿ ಪಿಡಿಒ ಶರತ್‌ ಅಭಿಮಾನ, ಕೈಯಿಂದ ಉತ್ತಮ ಗೊಂಬೆಗಳು ಸೇರಿದಂತೆ ಅನೇಕ ಮೂರ್ತಿಗಳ ನಿರ್ಮಾತೃ ಮಣಿಭದ್ರ ಭಾಗವತಗಿರಿ ಅವರನ್ನು ಸನ್ಮಾನಿಸಲಾಯಿತು. ಜನಸೇವಾ ಶಾಲೆ ಹಿರಿಯ ಸದಸ್ಯ ಬಿ.ಎಸ್‌. ಕುದುರೆ, ಗ್ಲೋಬಲ್‌ ಸೈನಿಕ ಅಕಾಡೆಮಿ ಅಧ್ಯಕ್ಷ ಕರ್ನಲ್‌ ಶರಣಪ್ಪ ಸಿಕೆನಪುರೆ, ಪುನಿತ್‌ ಸಾಳೆ ವೇದಿಕೆಯಲ್ಲಿದ್ದರು. ಸಂಘದ ಪ್ರಮುಖ ರೇವಣಸಿದ್ದ ಜಾಡರ್‌ ನಿರೂಪಿಸಿದರು. ಸಚಿನ್‌ ನಾಗುರೆ ವಂದಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next