ಯಾದಗಿರಿ: ಮೊದಲು ಮಹಾರಾಷ್ಟ್ರದಲ್ಲಿ ತಮ್ಮ ಸರ್ಕಾರ ಉಳಿಸಿಕೊಳ್ಳಲಿ, ಅಲ್ಲಿ ಏನು ಕಡೆದು ಹಾಕಿಲ್ಲ, ಆದರೆ ಕರ್ನಾಟಕಕ್ಕೆ ಬಂದು ಏನು ಕಡೆದು ಹಾಕುತ್ತಾರೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆ ವಿರುದ್ಧ ಯಾದಗಿರಿ ಉಸ್ತುವಾರಿ ಮಂತ್ರಿ ಶರಣಬಸಪ್ಪ ದರ್ಶನಾಪುರ ಆಕ್ರೋಶಗೊಂಡರು.
ಆಪರೇಷನ್ ನಾಥ ಅನುಭವದ ಮಾತು ಮಾತನಾಡಿ, ರಾಜ್ಯ ಸರಕಾರದ ಪತನ ಬಗ್ಗೆ ಮಾತನಾಡಿದ್ದ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆಗೆ ಸಚಿವ ದರ್ಶನಾಪುರ ಅವರು ‘ಶಿಂಧೆ ನಿನಗೆ ತಾಕತ್ ಇದ್ದರೆ ಕರ್ನಾಟಕಕ್ಕೆ ಬಾ’ ಎಂದು ಸವಾಲು ಹಾಕಿದರು.
ನಗರದ ಖಾಸಗಿ ಹೋಟೆಲ್ ನಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ, ಮುಖಂಡರೊಡನೆ ನಡೆದ ಸಭೆಯಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಸಚಿವ ದರ್ಶನಾಪುರ ಮಹಾರಾಷ್ಟ್ರದ ಸಿಎಂ ಶಿಂಧೆ ವಿರುದ್ಧ ಏಕವಚನದಲ್ಲಿಯೇ ಮಾತನಾಡಿದರು.
ಏಕನಾಥ ಶಿಂಧೆ ಗಂಡಸ್ಸೆಯಾಗಿದ್ದರೆ ನಮ್ಮ ರಾಜ್ಯಕ್ಕೆ ಬಂದು ನಾಲ್ಕೆ ನಾಲ್ಕು ಶಾಸಕರನ್ನು ಕರೆದುಕೊಂಡು ಹೋಗಲಿ ನೋಡೋಣ, ಮಹಾರಾಷ್ಟ್ರದಲ್ಲಿ ತಮ್ಮ ಶಾಸಕರ ಕಾಲು ಬೀಳುವ ಪರಿಸ್ಥಿತಿ ಎದುರಾಗಿದೆ ಅದನ್ನು ಸರಿ ಮಾಡಿಕೊಳ್ಳಲಿ ಎಂದು ಎಚ್ಚರಿಕೆ ನೀಡಿದರು.
ಮಹಾರಾಷ್ಟ್ರದಲ್ಲಿ ಶಿಂಧೆ ಪರಿಸ್ಥಿತಿ ನಾಯಿಪಾಡಾಗಿದೆ. ಒಂದು ಕಡೆ ಬಿಜೆಪಿ ಪಕ್ಷ, ಮತ್ತೊಂದೆಡೆ ಸ್ವತಃ ಅವರ ಶಾಸಕರೆ ಗುಮ್ಮುತ್ತಿದ್ದಾರೆ. ಮೊದಲು ತಮ್ಮ ಸೀಟು ಉಳಿಸಿಕೊಳ್ಳಲಿ ಎಂದ ಸಚಿವ ದರ್ಶನಾಪುರ ವ್ಯಂಗ್ಯವಾಡಿದರು.