ಮಂಗಳೂರು: ಕಾಂಗ್ರೆಸ್ ಪಕ್ಷ ಘೋಷಿಸಿರುವ ಗ್ಯಾರಂಟಿಗಳನ್ನು ಷರತ್ತು ರಹಿತವಾಗಿ ಜಾರಿಗೊಳಿಸದೆ ಹೋದರೆ ಬಿಜೆಪಿ ಬೀದಿಗಳಿದು ಜನರ ಪರವಾಗಿ ಹೋರಾಟ ಕೈಗೆತ್ತಿಕೊಳ್ಳಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರಸ್ ಮುಖಂಡ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಇವರೆಲ್ಲರೂ ಚುನಾವಣೆಗೆ ಮುನ್ನವೇ ಗ್ಯಾರಂಟಿಗಳನ್ನು ಪ್ರಕಟಿಸಿದ್ದಲ್ಲದೆ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಅವುಗಳೆಲ್ಲವೂ ಜಾರಿಯಾಗಲಿವೆ ಎಂದು ಬಹಿರಂಗವಾಗಿ ಘೋಷಿಸಿದ್ದಾರೆ, ಆದರೆ ಈಗ ಅಧಿಕಾರಕ್ಕೆ ಬಂದು 20 ದಿನಗಳಾದರೂ ಇನ್ನೂ ಯಾವುದೇ ಗ್ಯಾರಂಟಿಯೂ ಜಾರಿಗೊಂಡಿಲ್ಲ, ಕಾಂಗ್ರೆಸ್ ಜನರನ್ನು ವಂಚಿಸಿದೆ, ಸುಳ್ಳುಗಾರ ಪಾರ್ಟಿ ಎನ್ನುವುದು ಜನರಿಗೆ ಸ್ಪಷ್ಟವಾಗಿದೆ ಎಂದರು.
ಇದನ್ನೂ ಓದಿ:Karnataka-Tamilnadu ನೀರಿಗಾಗಿ ಕಚ್ಚಾಟ ಸಾಕು,ನಾವು ಬ್ರದರ್ಸ್: ಡಿಸಿಎಂ ಡಿಕೆಶಿ
ಕ್ಯಾಬಿನೆಟ್ ಸಭೆ ನಡೆದಿದೆ, ಸಮಾಲೋಚನೆ ನಡೆಸಿದ್ದಾರೆ, ಆದರೆ ಇನ್ನೂ ಗ್ಯಾರಂಟಿಗಳಿಗೆ ಮಾರ್ಗಸೂಚಿಯೇ ಆಗಿಲ್ಲ. ಗ್ಯಾರಂಟಿಗಳನ್ನು ಜಾರಿಗೊಳಿಸುವುದು ಅಸಾಧ್ಯ ಎನ್ನುವುದು ಈಗ ಸಿದ್ದರಾಮಯ್ಯರಿಗೆ ಗೊತ್ತಾಗಿದೆ, ಅವರು ಹಣಕಾಸು ಬಗ್ಗೆ ಗೊತ್ತಿದ್ದವರು, ಗೊತ್ತಿದ್ದರೂ ಸುಳ್ಳು ಹೇಳಿದ್ದಾರೆ, ಬೀದಿಗಳಲ್ಲಿ ಗ್ಯಾರಂಟಿಗಾಗಿ ಗಲಾಟೆ ಆಗುತ್ತಿದೆ, ಒಬ್ಬೊಬ್ಬ ಸಚಿವರು ಒಂದೊಂದು ರೀತಿ ಹೇಳಿಕೆ ಕೊಡುತ್ತಿದ್ದಾರೆ, ಆಗುತ್ತಿರುವ ಗಲಾಟೆಗೆ ಕಾಂಗ್ರೆಸ್ ಕ್ಷಮೆಯಾಚಿಸಬೇಕು. ನಾವು ಜನರ ಪರವಾಗಿದ್ದೇವೆ, ಹೋರಾಟ ಮಾಡುವುದು ಖಚಿತ ಎಂದರು.