ಬೆಂಗಳೂರು: ಪೌರ ಕಾರ್ಮಿಕರ ರಕ್ಷಣೆ ನಮ್ಮ ಹೊಣೆ. ಯಾವುದೇ ತೊಂದರೆಯಾದರೆ ಸಮೀಪದ ಪೊಲೀಸ್ ಠಾಣೆಗೆ ತೆರಳಿ ದೂರು ನೀಡುವಂತೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.
ಸಂಜಯನಗರದ ಎಕ್ಸೈಸ್ ಬಡಾವಣೆಯ ಊರ್ವಿ ಕನ್ವೆನÒನ್ ಸೆಂಟರ್‌ನಲ್ಲಿ ಶನಿವಾರ ನಡೆದ ಉತ್ತರ ವಿಭಾಗದ ಮಾಸಿಕ ಜನಸಂಪರ್ಕ ಸಭೆಯಲ್ಲಿ ಕೆಲ ಮುಖಂಡರು ಇತ್ತೀಚೆಗೆ ನಗರದಲ್ಲಿ ಪೌರಕಾರ್ಮಿಕರ ಮೇಲೆ ನಡೆದ ಹಲ್ಲೆಗಳ ಬಗ್ಗೆ ಪ್ರಸ್ತಾಪಿಸಿದರು. ಆಗ ಪೌರ ಕಾರ್ಮಿಕರಿಗೆ ರಕ್ಷಣೆ ನೀಡುವುದು ನಮ್ಮ ಕರ್ತವ್ಯ. ಸಮಸ್ಯೆಗಳಾದರೆ ಸಮೀಪದ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರೆ, ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತರು ಹೇಳಿದರು.
ಠಾಣೆಗಳಲ್ಲಿ ಮಹಿಳಾ ಕೌನ್ಸಿಲರ್ ನೇಮಿಸಿ:
ಮಹಿಳೆಯರು ಎಲ್ಲಾ ವಿಚಾರಗಳನ್ನು ಪುರುಷ ಅಧಿಕಾರಿಗಳೊಂದಿಗೆ ಹೇಳಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಪೊಲೀಸ್ ಠಾಣೆಗಳಲ್ಲಿ ಮಹಿಳಾ ಆಪ್ತಸಮಾಲೋಚಕರನ್ನು ನೇಮಿಸುವಂತೆ ಮಹಿಳೆಯೊಬ್ಬರು ಮನವಿ ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ನಗರ ಪೊಲೀಸ್ ಆಯುಕ್ತರು, ಸೆಫ್ ಸಿಟಿ ಯೋಜನೆಯಡಿ ನಗರದ ಎಲ್ಲಾ ಪೊಲೀಸ್ ಠಾಣೆಗಳಿಗೆ ತಲಾ ಇಬ್ಬರು ಮಹಿಳಾ ಆಪ್ತ ಸಮಾಲೋಚಕರನ್ನು ನಿಯೋಜಿಸಲಾಗಿತ್ತು. ಇದೀಗ ಆ ಯೋಜನೆ ಅಂತ್ಯವಾಗಿದೆ. ಇತ್ತೀಚೆಗೆ ಪೊಲೀಸ್ ಠಾಣೆಗಳಲ್ಲಿ ಮಹಿಳಾ ಸಿಬ್ಬಂದಿ ಹಾಗೂ ಅಧಿಕಾರಿಗಳೂ ಇದ್ದಾರೆ. ಅವರ ಬಳಿಯೂ ಮಹಿಳೆಯರು ಅಹವಾಲು ಹೇಳಿಕೊಳ್ಳಬಹುದು. ಅಂತೆಯೆ ಪ್ರತಿ ವಿಭಾಗಕ್ಕೆ ಒಂದೊಂದು ಮಹಿಳಾ ಠಾಣೆ ತೆರೆಯಲಾಗಿದೆ ಎಂದರು.
ಮಾದಕವಸ್ತು ಮಾರಾಟದ ಬಗ್ಗೆಯೂ ಸಭೆಯಲ್ಲಿ ದೂರುಗಳು ಕೇಳಿ ಬಂದವು. ಮಾದಕವಸ್ತು ನಿರ್ಮೂಲನೆ ನಿಟ್ಟಿನಲ್ಲಿ ಪೊಲೀಸರಿಗೆ ಸಾರ್ವಜನಿಕರ ಸಹಾಕರವೂ ಬೇಕಿದೆ.ಡ್ರಗ್ಸ್ ಮಾರಾಟ ಕಂಡು ಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಬಿ.ದಯಾನಂದ ತಿಳಿಸಿದರು. ಸಭೆಯಲ್ಲಿ ಉತ್ತರ ವಿಭಾಗದ ಡಿಸಿಪಿ ಸೈದುಲ್ ಅದವಾತ್, ಉತ್ತರ ಸಂಚಾರ ವಿಭಾಗದ ಡಿಸಿಪಿ ಸಿರಿಗೌರಿ ಸೇರಿದಂತೆ ಮತ್ತಿತರರು ಇದ್ದರು.