ಬೆಂಗಳೂರು: ರೈತಪರ ಯೋಜನೆಗಳ ಮುಂದುವರಿಕೆ ಮತ್ತು ಸಮರ್ಪಕ ವಿದ್ಯುತ್ ಕೊಡಲು ಆಗ್ರಹಿಸಿ ರಾಜ್ಯಾದ್ಯಂತ ತಹಸೀಲ್ದಾರ್ ಕಚೇರಿಗಳ ಮುಂದೆ ಸೆ.8ರಂದು ರೈತ ಮೋರ್ಚಾದಿಂದ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಹೇಳಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿಯ ಉದ್ದೇಶಿಸಿ ಮಾತನಾಡಿದ ಅವರು, ರೈತರಿಗೆ ಸಾಕಷ್ಟು ಪ್ರಮಾಣದಲ್ಲಿ ವಿದ್ಯುತ್ ಕೊಡಬೇಕು. ಬರ ನಿರ್ವಹಣೆಗೆ ಯುದ್ಧೋಪಾದಿಯಲ್ಲಿ ಸಮರ್ಪಕವಾಗಿ ಕ್ರಮ ಕೈಗೊಳ್ಳಬೇಕು. ಗ್ಯಾರಂಟಿ ಕಾರಣಕ್ಕಾಗಿ ರೈತಪರ ಯೋಜನೆಗಳನ್ನು ನಿಲ್ಲಿಸಬಾರದು ಎಂದು ಆಗ್ರಹಿಸಿದರು.
ರೈತರ ಮೇಲೆ ಈ ಸರ್ಕಾರಕ್ಕೆ ಏಕಿಷ್ಟು ದ್ವೇಷ? ರಾಜ್ಯದಲ್ಲಿ ಮಳೆ ಕೊರತೆ ಹಿನ್ನೆಲೆಯಲ್ಲಿ ಬೆಳೆ ನಷ್ಟವಾಗುತ್ತಿದೆ. ರಾಜ್ಯದ ಎಲ್ಲ ಜಲಾಶಯಗಳಲ್ಲಿ ಕಳೆದ ವರ್ಷದ ಸಂಗ್ರಹ ಗಮನಿಸಿದರೆ ಕಡಿಮೆ ಇದೆ. ನೀರಿನ ಹರಿವು ಕೂಡ ಅತ್ಯಂತ ಕಡಿಮೆ ಇದೆ. ಇದರ ಜೊತೆಗೆ ರೈತರ ಪಂಪ್‌ಸೆಟ್‌ಗಳಿಗೆ ಹಗಲು 7 ಗಂಟೆ ವಿದ್ಯುತ್ ಕೊಡಲಾಗುತ್ತಿತ್ತು. ಈಗ ಒಂದು ತಿಂಗಳಿನಿಂದ 4 ಗಂಟೆಯೂ ಸರಿಯಾಗಿ ವಿದ್ಯುತ್ ಸಿಗುತ್ತಿಲ್ಲ. ರಾತ್ರಿ ಹೊತ್ತಿನಲ್ಲಿ ಉಪಯೋಗ ಕಷ್ಟಸಾಧ್ಯ ಪರಿಸ್ಥಿತಿ ಇದೆ.
ಅಣೆಕಟ್ಟಿನ ನೀರು ಉಪಯೋಗ ಸಾಧ್ಯವಾಗಿಲ್ಲ. ಇದೆಲ್ಲದರ ಜೊತೆಗೆ ರೈತರಿಗೆ ಧೈರ್ಯ ತುಂಬಬೇಕಾದ ಸರ್ಕಾರವು ಬಿಜೆಪಿ ಮೇಲಿನ ದ್ವೇಷದ ಕಾರಣಕ್ಕೆ ಪರೋಕ್ಷವಾಗಿ ರೈತರನ್ನು ದ್ವೇಷಿಸುತ್ತಿದೆ. ಕೇಂದ್ರ ಘೋಷಿಸಿದ ಕಿಸಾನ್ ಸಮ್ಮಾನ್ ನಿಧಿಯಡಿ ರಾಜ್ಯ ಸರ್ಕಾರ ಕೊಡುವ 4 ಸಾವಿರ ಮೊತ್ತವನ್ನು ಸ್ಥಗಿತಗೊಳಿಸಿದ್ದಾರೆ. ಇದರಿಂದ 50 ಲಕ್ಷ ರೈತ ಕುಟುಂಬಗಳಿಗೆ ಹೊಡೆತ ಬಿದ್ದಿದೆ.
11 ಲಕ್ಷ ವಿದ್ಯಾರ್ಥಿಗಳಿಗೆ ರೈತ ವಿದ್ಯಾನಿಧಿ 438 ಕೋಟಿ ರೂ. ಗಳನ್ನು ನೀಡಿದ್ದು, ಅದು ಸ್ಥಗಿತವಾಗಿದೆ. ಭೂಸಿರಿ ಯೋಜನೆ ನಿಲ್ಲಿಸಿದ್ದಾರೆ. ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಶ್ರಮಶಕ್ತಿ ಯೋಜನೆಯಡಿ 500 ರೂ ಕೊಡುತ್ತಿದ್ದು, ಅದನ್ನು ನಿಲ್ಲಿಸಲಾಗಿದೆ. ರೈತಸಂಪದ ಯೋಜನೆ ಮೊತ್ತವನ್ನು ಗ್ಯಾರಂಟಿ ಯೋಜನೆಗೆ ಬಳಸಲಾಗುತ್ತಿದೆ. ಜಿಲ್ಲಾ ಗೋಶಾಲೆ ಯೋಜನೆಯನ್ನು ಸ್ಥಗಿತಗೊಳಿಸಿದ್ದಾರೆ. ಯಾರದೋ ತುಷ್ಟೀಕರಣಕ್ಕಾಗಿ ಹೀಗೆ ಮಾಡಿದ್ದಾರೆ.
ಎಪಿಎಂಸಿ ಮಾತ್ರವಲ್ಲದೆ ಮುಕ್ತ ಮಾರುಕಟ್ಟೆಯಲ್ಲಿ ರೈತರ ಉತ್ಪನ್ನಗಳನ್ನು ಮಾರಾಟ ಮಾಡಲು ನಾವು ಅವಕಾಶ ಕಲ್ಪಿಸಿದ್ದೆವು. ಈ ಪದ್ಧತಿಯನ್ನು ತೆಗೆದುಹಾಕಿ ದಲ್ಲಾಳಿಗಳ ಹಿತರಕ್ಷಣೆಗೆ ಈ ಸರ್ಕಾರ ಮುಂದಾಗಿದೆ. 25 ಲಕ್ಷ ಕುಟುಂಬದವರು ಹೈನುಗಾರಿಕೆ ಉಪಕಸುಬಿನಲ್ಲಿ ತೊಡಗಿದ್ದರು. ಅವರಿಗಾಗಿ ಆರಂಭಿಸಲು ಉದ್ದೇಶಿಸಿದ ಕ್ಷೀರ ಸಮೃದ್ಧಿ ಬ್ಯಾಂಕ್ ಕೂಡ ತಡೆಹಿಡಿಯಲಾಗಿದೆ. ಈ ಬ್ಯಾಂಕಿಗೆ ಸಾವಿರ ಕೋಟಿ ನೀಡಲು ಉದ್ದೇಶಿಸಲಾಗಿತ್ತು. ಈ ಮೂಲಕ ಕಾಂಗ್ರೆಸ್ ಸರಕಾರ ರೈತವಿರೋಧಿ ಎನಿಸಿದೆ. ಯಾಕೆ ನೀವು ರಾಜಕಾರಣ ಮಾಡಲು ರೈತ ದ್ವೇಷಿ ಆಗಿದ್ದೀರಿ ಎಂದು ಸಿಎಂ ಸಿದ್ದರಾಮಯ್ಯರನ್ನು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷದ ರಾಜ್ಯ ಸರ್ಕಾರದ ಕಳೆದ 100 ದಿನಗಳ ಆಡಳಿತಾವಧಿಯಲ್ಲಿ 42ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೂ ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್, ರಾಜ್ಯ ಉಪಾಧ್ಯಕ್ಷರಾದ ಲೋಕೇಶ್ ಗೌಡ, ಮಂಜುಳಾ, ಕಾರ್ಯಾಲಯ ಕಾರ್ಯದರ್ಶಿ ಶಶಿಕುಮಾರ್ ಗುತ್ತನವರ್ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.