“ಎದೆಯೊಳಗಿನ ತಮತಮತಮಟೆ ಯಾರೋ ಬಡ್ದಂಗ್ ಆಯ್ತಾ ಐತೆ…’ ಬಹುಶಃ ಈ ಹಾಡು ಕೇಳದವರೇ ಇಲ್ಲ ಬಿಡಿ. ಅದರಲ್ಲೂ ಪಡ್ಡೆಗಳ ಬಾಯಲ್ಲಂತೂ ಆಗಾಗ ಈ ಹಾಡು ಗುನುಗುತ್ತಲೇ ಇರುತ್ತೆ. ಪವನ್ ಕುಮಾರ್ ನಿರ್ದೇಶನದ ಸತೀಶ್ ನೀನಾಸಂ ಅಭಿನಯದ “ಲೂಸಿಯಾ’ ಚಿತ್ರದಲ್ಲಿ ಮೂಡಿಬಂದ ಈ ಹಾಡಿಗೆ ಧ್ವನಿಯಾಗಿದ್ದ ಗಾಯಕ ನವೀನ್ ಸಜ್ಜು. ಈ ಹಾಡು ಬಹುತೇಕರ ಫೇವರೇಟ್ ಎಂಬುದನ್ನು ಅಲ್ಲಗಳೆಯುವಂತಿಲ್ಲ.
ಎಲ್ಲಾ ಸರಿ, ಇಷ್ಟಕ್ಕೂ ಈ ಹಾಡಿನ ವಿಷಯ ಈಗೇಕೆ ಎಂಬ ಪ್ರಶ್ನೆ ಎದುರಾಗಬಹುದು. ವಿಷಯ ಇದೆ. ಅದಕ್ಕೆ ಕಾರಣ, ಪುನಃ ನವೀನ್ ಸಜ್ಜು ಅದೇ ರೀತಿಯ ಹಾಡನ್ನು ಹಾಡಿರುವುದು. ಅಂದಹಾಗೆ, “ಎದೆಯೊಳಗಿನ ತಮತಮತಮಟೆ …’ ಹಾಡು ಪಕ್ಕಾ ಮಂಡ್ಯ ಭಾಷೆಯ ಸೊಗಡಿನಲ್ಲೇ ಮೂಡಿಬಂದಿತ್ತು. ಅದರಲ್ಲೂ ಸತೀಶ್ ನೀನಾಸಂ ಅವರು ಸಹ ಆ ಚಿತ್ರದಲ್ಲಿ ಮಂಡ್ಯ ಭಾಷೆಯಲ್ಲೇ ನೋಡುಗರನ್ನು ಸೆಳೆದಿದ್ದರು.
ಈಗ ಪುನಃ, ನವೀನ್ ಸಜ್ಜು ಅವರು ಸತೀಶ್ ನೀನಾಸಂ ಅಭಿನಯದ “ಬ್ರಹ್ಮಚಾರಿ’ ಚಿತ್ರದಲ್ಲಿ ಹಾಡಿದ್ದಾರೆ. ಹೌದು, ಉದಯ್ ಕೆ. ಮೆಹ್ತಾ ನಿರ್ಮಾಣದ ಈ ಚಿತ್ರವನ್ನು ಚಂದ್ರಮೋಹನ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ನವೀನ್ ಸಜ್ಜು “ಇಡ್ಕ ಇಡ್ಕ, ವಸಿ ತಡ್ಕ ತಡ್ಕ..’ ಎಂಬ ದೇಸಿ ಸೊಗಡಿರುವ ಹಾಡನ್ನು ಹಾಡಿದ್ದಾರೆ. ಈ ಹಿಂದೆ “ಲೂಸಿಯಾ’ ಚಿತ್ರದಲ್ಲಿ ನವೀನ್ ಸಜ್ಜು ಹಾಡಿದ್ದ ಹಾಡುಗಳು ಹಿಟ್ ಆಗಿದ್ದವು.
ಈಗ ಪುನಃ, ಸತೀಶ್ ನೀನಾಸಂ ಅಭಿನಯದ “ಬ್ರಹ್ಮಚಾರಿ’ ಚಿತ್ರಕ್ಕೆ ಹಾಡಿದ್ದಾರೆ. ಅಂದಹಾಗೆ, ಈ ಚಿತ್ರಕೆಕ ಧರ್ಮ ವಿಶ್ ಸಂಗೀತ ನೀಡಿದ್ದಾರೆ. ರವಿ ಛಾಯಾಗ್ರಹಣವಿದೆ. ಅರ್ಜುನ್ ಕಿಟ್ಟು ಸಂಕಲನವಿದೆ. “ಬ್ರಹ್ಮಚಾರಿ’ ಚಿತ್ರಕ್ಕೆ “ಹಂಡ್ರೆಡ್ ಪರ್ಸೆಂಟ್ ವರ್ಜಿನ್’ ಎಂಬ ಅಡಿಬರಹ ಹೈಲೆಟ್ ಆಗಿದ್ದು, ಇಡೀ ಚಿತ್ರದ ಕಥೆ ಒಂದು ಟ್ಯಾಗ್‌ಲೈನ್ ಹೇಳುವಂತಿದೆ.
ಈ ಹಿಂದೆ ನಿರ್ದೇಶಕ ಚಂದ್ರಮೋಹನ್ ಕೂಡ “ಬಾಂಬೆ ಮಿಠಾಯಿ’ ಹಾಗು “ಡಬ್ಬಲ್ ಇಂಜಿನ್’ ಚಿತ್ರ ನಿರ್ದೇಶಿಸಿದ್ದರು. ಈ ಎರಡು ಚಿತ್ರಗಳು ಸಹ ಪಕ್ಕಾ ಹಾಸ್ಯಮಯ ಚಿತ್ರಗಳಾಗಿ ಮೂಡಿಬಂದಿದ್ದವು. ಈಗ “ಬ್ರಹ್ಮಚಾರಿ’ ಕೂಡ ಅದೇ ಸಾಲಿಗೆ ಸೇರುವ ಚಿತ್ರ ಎಂಬುದು ಚಿತ್ರತಂಡದ ಮಾತು. ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಇಷ್ಟರಲ್ಲೇ ನಡೆಸಲು ಚಿತ್ರತಂಡ ತಯಾರಿ ನಡೆಸುತ್ತಿದೆ.