Advertisement

ಈದಿ ಅಮಿನ್ ಎಂಬ ಉಗಾಂಡದ ನರಭಕ್ಷಕ ಸರ್ವಾಧಿಕಾರಿ ಬಗ್ಗೆ ಗೊತ್ತಾ?

08:32 PM May 08, 2020 | Nagendra Trasi |

ವಾಷಿಂಗ್ಟನ್:ನಾಯಿ, ಹಲ್ಲಿ, ಚೇಳು, ಹಾವಿನ ಮಾಂಸ ತಿನ್ನುತ್ತಾರೆ ಎಂದರೆ ಎಷ್ಟು ಅಸಹ್ಯ ಭಾವ ಹುಟ್ಟುತ್ತದೆ. ಜತೆಗೆ ಅಚ್ಚರಿ ಕೂಡಾ ಆದರೆ ಈದಿ ಅಮಿನ್ ಎಂಬ ನರಭಕ್ಷಕನ ಬಹು ಪ್ರಿಯವಾದ ಆಹಾರ ಯಾವುದಾಗಿತ್ತು ಗೊತ್ತಾ…ಅದು ಉಪ್ಪು ಬೆರೆಸಿದ ಮನುಷ್ಯನ ಮಾಂಸವಂತೆ!ಈದಿ ಅಮೀನ್ ಸಾಮಾನ್ಯ ಮನುಷ್ಯನಲ್ಲ..ಬರೋಬ್ಬರಿ ಒಂಬತ್ತು ವರ್ಷಗಳ ಕಾಲ ದಕ್ಷಿಣ ಆಫ್ರಿಕಾದ ಉಗಾಂಡದ ರಾಷ್ಟ್ರಪತಿಯಾಗಿ ಆಡಳಿತ ನಡೆಸಿದ್ದ ಸರ್ವಾಧಿಕಾರಿ!

Advertisement

ಬ್ರಿಟಿಷ್ ಅಧಿಕಾರಿಯೊಬ್ಬ ಅಮೀನ್ ನನ್ನು ಸೇನೆಗೆ ಆಯ್ಕೆ ಮಾಡಿಕೊಂಡಿದ್ದ. ಹೀಗೆ ಹಂತ, ಹಂತವಾಗಿ ಬೆಳೆದ ಈತ 1971ರಲ್ಲಿ ಮಿಲ್ಟನ್ ಒಬೋಟೆಯನ್ನು ಪದಚ್ಯುತಗೊಳಿಸಿ ಉಗಾಂಡದ ಚುಕ್ಕಾಣಿ ಕೈಗೆತ್ತಿಕೊಂಡಿದ್ದ. ನಂತರ ಈದಿ ಅಮಿನ್ ಎಂಬ ಸರ್ವಾಧಿಕಾರಿ ದೇಶದ ಎಲ್ಲಾ ನಾಗರಿಕ ಕಾಯ್ದೆಗಳನ್ನು ಕಿತ್ತೊಗೆದು ಮಿಲಿಟರಿ ಕಾಯ್ದೆ ಜಾರಿಗೆ ತಂದುಬಿಟ್ಟಿದ್ದ. ಅಷ್ಟೇ ಅಲ್ಲ ಒಬೋಟೆಗೆ ನಿಷ್ಠಾವಂತರಾಗಿದ್ದರು ಎಂದು ಆರೋಪಿಸಿ ಆರು ಸಾವಿರ ಸೈನಿಕರನ್ನೇ ಹತ್ಯೆಗೈದುಬಿಟ್ಟಿದ್ದ ಅಮಿನ್!

ಈತ ಅದೆಷ್ಟು ಸಂಶಯ ಪಿಶಾಚಿಯಾಗಿದ್ದ ಎಂಬುದಕ್ಕೆ ಸಾಕ್ಷಿ…ಆತನಿಗೆ ಯಾರ ಮೇಲಾದರು ಅನುಮಾನ ಬಂದರೆ ಅವರು ನಿಗೂಢವಾಗಿ ಕಣ್ಮರೆಯಾಗುತ್ತಿದ್ದರಂತೆ. ಎಂಟು-ಒಂಬತ್ತು ವರ್ಷಗಳ ಕಾಲ ನಡೆದ ಅವ್ಯಾಹತ ಮಾರಣಹೋಮಕ್ಕೆ ಆಹುತಿಯಾದವರು ಎಷ್ಟು ಮಂದಿ ಎಂಬ ಬಗ್ಗೆ ನಿಖರ ಲೆಕ್ಕವಿಲ್ಲ. ಕನಿಷ್ಠ ಐದು ಲಕ್ಷ ಮಂದಿಯಾದರು ಬಲಿಯಾಗಿದ್ದರು ಎಂದು ಅಮ್ನೆಸ್ಟಿ ಇಂಟರ್ ನ್ಯಾಷನಲ್ ತಿಳಿಸಿತ್ತು.

ಉಗಾಂಡದಲ್ಲಿ ನೆಲೆಸಿದ್ದ 80ಸಾವಿರಕ್ಕೂ ಅಧಿಕ ಏಷ್ಯನ್ನರನ್ನು ಹೊರದಬ್ಬುವ ನಿರ್ಧಾರ ತಳೆದ ಪರಿಣಾಮ ತಮ್ಮ ವಸಾಹತುಗಳಲ್ಲಿ ಕೆಲಸ ಮಾಡಲು ಬ್ರಿಟಿಷರು ಭಾರತ, ಪಾಕಿಸ್ತಾನಗಳಿಂದ ಕರೆತಂದಿದ್ದ ಕೂಲಿಯಾಳುಗಳು ತಮ್ಮ ಸ್ಥಿರ, ಚರಾಸ್ತಿಗಳನ್ನು 90 ದಿನದೊಳಗೆ ಬಿಟ್ಟು ಉಗಾಂಡದಿಂದ ತೊಲಗಬೇಕು ಎಂದು ಫರ್ಮಾನು ಹೊರಡಿಸಿಬಿಟ್ಟಿದ್ದ. ಇದರಿಂದಾಗಿ ವೈದ್ಯರು, ವಕೀಲರು, ಶಿಕ್ಷಕರು, ಉದ್ಯಮಿಗಳು ಇಂಗ್ಲೆಂಡ್, ಕೆನಡಾ, ಭಾರತ ಸೇರಿದಂತೆ ಇತರ ದೇಶಗಳಿಗೆ ವಲಸೆ ಹೋಗಿದ್ದರು.

Advertisement

ಒಮ್ಮೆ ಈದಿ ಅಮಿನ್ ಮೂವತ್ತೆರಡು ಹಿರಿಯ ಸೇನಾಧಿಕಾರಿಗಳನ್ನು ಒಟ್ಟಿಗೆ ಬಿಗಿದುಕಟ್ಟಿ, ಒಂದು ಕೋಣೆಯೊಳಗೆ ಕೂಡಿಹಾಕಿದ್ದ. ನಂತರ ಕೋಣೆಯ ತುಂಬಾ ಸಿಡಿಮದ್ದುಗಳನ್ನು ಚೆಲ್ಲಿ ಬೆಂಕಿಹಚ್ಚಿ ಬಿಟ್ಟಿದ್ದ. ಹಳತಾದ ಬಾಂಬುಗಳನ್ನು ಸುಟ್ಟುಬಿಟ್ಟೆ ಅಂತ ಅಮಿನ್ ಅದಕ್ಕೆ ಸಮಜಾಯಿಷಿ ನೀಡಿಬಿಟ್ಟಿದ್ದ!

ಜಗತ್ತಿನ ಕ್ರೂರಿ ಸರ್ವಾಧಿಕಾರಿ ಎನ್ನಿಸಿಕೊಂಡಿದ್ದ ಅಮಿನ್ ಒಮ್ಮೆ ತನ್ನ ಸಹೋದ್ಯೋಗಿಗಳಿಗೆ ಮನುಷ್ಯ ಮಾಂಸದ ರುಚಿಯ ಬಗ್ಗೆ ವರ್ಣಿಸಿದ್ದ. ಅದರ ವಿವರಣೆ ಕೇಳಿದವರು ನಡುಗಿ ಹೋಗಿದ್ದರು. ಆ ಪೈಕಿ ಒಬ್ಬನನ್ನು ಬಿಟ್ಟು ಉಳಿದವರನ್ನೆಲ್ಲಾ ಅಮಿನ್ ಮುಂದೆ ಹಂತ, ಹಂತವಾಗಿ ಕೊಂದು ಬಿಟ್ಟಿದ್ದು, ಅವರ ಮಾಂಸದ ರುಚಿಯನ್ನೂ ನೋಡಿದ್ದ ಎಂದು ಹೇಳಲಾಗುತ್ತಿದೆ!

ಹೆಂಡತಿ ಮಕ್ಕಳೊಂದಿಗೆ ಪರಾರಿಯಾಗಿಬಿಟ್ಟಿದ್ದ!
1979ರಲ್ಲಿ ಈದಿ ಅಮಿನ್ ಕೈಯಿಂದ ಅಧಿಕಾರ ಕೈತಪ್ಪಿದ ಕೂಡಲೇ ಲಿಬಿಯಾದ ಗಢಾಪಿ ಸಹಾಯದಿಂದ ಹೆಲಿಕಾಪ್ಟರ್ ನಲ್ಲಿ ತನ್ನ ನಾಲ್ವರು ಹೆಂಡತಿ ಹಾಗೂ 30ಕ್ಕೂ ಅಧಿಕ ಮಕ್ಕಳೊಂದಿಗೆ ಲಿಬಿಯಾಕ್ಕೆ ಪರಾರಿಯಾಗಿಬಿಟ್ಟಿದ್ದ. 1980ರವರೆಗೆ ಲಿಬಿಯಾದಲ್ಲಿಯೇ ಠಿಕಾಣಿ ಹೂಡಿದ್ದ ಅಮಿನ್ ನಂತರ ಸೌದಿ ಅರೇಬಿಯಾದ ಜೆಡ್ಡಾದಲ್ಲಿನ ಪ್ಯಾಲೆಸ್ತೀನ್ ರಸ್ತೆಯಲ್ಲಿರುವ ನೋವೊಟೆಲ್ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದ.

2003ರಲ್ಲಿ ಈದಿ ಅಮಿನ್ ಬಹುಅಂಗಾಂಗ ವೈಫಲ್ಯದಿಂದ ಕೋಮಾಕ್ಕೆ ಜಾರಿದ್ದ. ಆತನ ನಾಲ್ಕನೇ ಹೆಂಡತಿ ನಾಲೋಂಗೊ ಕೊನೆಯ ಬಾರಿಗೆ ಗಂಡ ಈದಿ ಅಮಿನ್ ನನ್ನು ಉಗಾಂಡಕ್ಕೆ ಕರೆತರಲು ಅವಕಾಶ ಮಾಡಿಕೊಡಿ ಎಂದು ಅಧ್ಯಕ್ಷ ಯೋವೆರಿ ಮ್ಯುಸೆವೆನಿ ಅವರಲ್ಲಿ ವಿನಂತಿಸಿಕೊಂಡಿದ್ದಳು. ಉಗಾಂಡಕ್ಕೆ ಬಂದ ಮೇಲೆ ಈದಿ ಅಮಿನ್ ತನ್ನ ಆಡಳಿತಾವಧಿಯಲ್ಲಿ ಮಾಡಿದ್ದ ಎಲ್ಲಾ ಪಾಪಕೃತ್ಯಗಳಿಗೆ ಉತ್ತರ ನೀಡಬೇಕು ಎಂದು ಪ್ರತಿಕ್ರಿಯಿಸಿದ್ದರು. ಕೊನೆಗೆ ಅಮಿನ್ ಕುಟುಂಬ ವೆಂಟಿಲೇಟರ್ ನ ಸಂಪರ್ಕ ಕಡಿತಗೊಳಿಸುವ ಮೂಲಕ ಈದಿ ಅಮಿನ್ ಎಂಬ ನರಭಕ್ಷಕನ(2003ರ ಆಗಸ್ಟ್ 16) ಉಸಿರು ಹೊರಟು ಹೋಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next