Advertisement

“ಒನ್‌’ಕೇಂದ್ರಗಳಲ್ಲಿ ಹಿರಿಯರಿಗೆ ಗುರುತಿನ ಚೀಟಿ

11:49 AM May 19, 2018 | Team Udayavani |

ಬೆಂಗಳೂರು: ಜೀವನದ ಮುಸ್ಸಂಜೆಯಲ್ಲಿರುವ ಹಿರಿಯ ಜೀವಿಗಳು ಇನ್ನುಮುಂದೆ ಹಿರಿಯ ನಾಗರಿಕರ ಗುರುತಿನ ಚೀಟಿ, ಗ್ರಂಥಾಲಯ ಗುರುತಿನ ಚೀಟಿ ಪಡೆಯಲು ಕಚೇರಿಯಿಂದ ಕಚೇರಿಗೆ ಅಲೆದಾಡಬೇಕಾಗಿಲ್ಲ. ಬೆಂಗಳೂರು ಒನ್‌ ಮತ್ತು ಕರ್ನಾಟಕ ಒನ್‌ ಕೇಂದ್ರಗಳಿಗೆ ಹೋದರೆ ಸಾಕು.

Advertisement

ಹೌದು. ವಿದ್ಯುತ್‌ ಬಿಲ್‌, ನೀರಿನ ಬಿಲ್‌ ಸೇರಿದಂತೆ ವಿವಿಧ ಸೇವೆಗಳನ್ನು ನೀಡುತ್ತಿರುವ ಈ ಕೇಂದ್ರಗಳಲ್ಲೇ ಹಿರಿಯರಿಗೆ ನಾಗರಿಕರಿಗೆ ಗುರಿತಿನ ಚೀಟಿ ವಿತರಿಸುವ ಕೆಲಸವೂ ಶುರುವಾಗುತ್ತಿದೆ. ಸೇವಾ ಸಿಂಧು ಯೋಜನೆಯ ಸುಮಾರು 500 ಸೇವೆಗಳನ್ನು ಒದಗಿಸಲು ಇ-ಅಡಳಿತ ಇಲಾಖೆಯ ನಾಗರಿಕ ಸೇವೆಗಳ ವಿದ್ಯುನ್ಮಾನ ವಿತರಣಾ ನಿರ್ದೇಶನಾಲಯ (ಇಡಿಸಿಎಸ್‌) ವಿಭಾಗ ಎಲ್ಲ ರೀತಿಯ ಸಿದ್ಧತೆ ನಡೆಸಿದೆ.

ಹಿರಿಯ ನಾಗರಿಕರ ಗುರುತಿನ ಚೀಟಿ ಸೇರಿದಂತೆ ನಾಲ್ಕು ಹೆಚ್ಚುವರಿ ಸೇವೆಗಳನ್ನು ಒದಗಿಸುವ ಪ್ರಾಯೋಗಿಕ ಕಾರ್ಯ ಶನಿವಾರದಿಂದ ಬೆಂಗಳೂರು ಒನ್‌ ಮತ್ತು ಕರ್ನಾಟಕ ಒನ್‌ ಕೇಂದ್ರಗಳಲ್ಲಿ ಆರಂಭವಾಗಲಿದೆ. ಆರಂಭದಲ್ಲಿ ಬೆಂಗಳೂರು ಒನ್‌ ಮತ್ತು ಕರ್ನಾಟಕ ಒನ್‌ ಕೇಂದ್ರಗಳಲ್ಲಿ ಹಿರಿಯ ನಾಗರಿಕರ ಗುರುತಿನ ಚೀಟಿ ಮತ್ತು ಅವರಿಗೆ ಗ್ರಂಥಾಲಯ ಚೀಟಿಗಳನ್ನು ಒದಗಿಸಲಾಗುವುದು.

ನಂತರದಲ್ಲಿ ಸಾರ್ವಜನಿಕರ ಹಿತ ದೃಷ್ಟಿಯಿಂದ ಅಟಲ್‌ ಸೇವಾ ಕೇಂದ್ರ ಸೇರಿದಂತೆ ರಾಜ್ಯದಲ್ಲಿರುವ ಆರು ಸಾವಿರ ಖಾಸಗಿ ಮತ್ತು ಸಾರ್ವಜನಿಕ ಸೇವಾ ಕೇಂದ್ರಗಳ ಮೂಲಕ ಈ ಸೇವೆಗಳನ್ನು ನೀಡಲು ತಿರ್ಮಾನಿಸಲಾಗಿದೆ ಎಂದು ಇ-ಅಡಳಿತ ಇಲಾಖೆಯ ನಾಗರಿಕ ಸೇವೆಗಳ ವಿದ್ಯುನ್ಮಾನ ವಿತರಣಾ ನಿರ್ದೇಶನಾಲಯದ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

ಹಿರಿಯ ನಾಗರಿಕರು ಗುರುತಿನ ಚೀಟಿಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಅನೇಕ ಸಂದರ್ಭಗಳಲ್ಲಿ ನಾಲ್ಕಾರು ಬಾರಿ ಓಡಾಡಿದರೂ ಗುರುತಿನ ಚೀಟಿ ಸಿಗುವುದಿಲ್ಲ. ಈ ಪ್ರಕ್ರಿಯೆ ಅವರಿಗೆ ತ್ರಾಸದಾಯಕ. ಈ ತೊಂದರೆ ತಪ್ಪಿಸುವ ಉದ್ದೇಶದಿಂದ ಶನಿವಾರದಿಂದ ಪ್ರಾಯೋಗಿಕವಾಗಿ “ಒನ್‌’ ಕೇಂದ್ರಗಳಲ್ಲಿ ಹಿರಿಯ ನಾಗರಿಕರ ಗುರುತಿನ ಚೀಟಿ ಒದಗಿಸುವ ಕೆಲಸಕ್ಕೆ ಆದ್ಯತೆ ನೀಡಲಾಗಿದೆ ಎಂದೂ ಅವರು ಹೇಳಿದ್ದಾರೆ.

Advertisement

ಮತ್ತಷ್ಟು ಸೇವೆಗಳು ಆನ್‌ಲೈನ್‌ ವ್ಯಾಪ್ತಿಗೆ: ಕಳೆದ ವರ್ಷ ಸೇವಾ ಸಿಂಧು ಯೋಜನೆ ಆರಂಭವಾಗಿದ್ದು, ಆರಂಭದಲ್ಲಿ 60 ಕೇಂದ್ರಗಳನ್ನು ಹೊಂದಿತ್ತು. ಇದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಸ್ತುತ ಸುಮಾರು ಆರು ಸಾವಿರ ಕೇಂದ್ರಗಳು ಸೇವಾ ಸಿಂಧು ಯೋಜನೆಯಡಿ ಕಾರ್ಯನಿರ್ವಹಿಸುತ್ತಿವೆ.

ಕಂದಾಯ ಆರೋಗ್ಯ, ಕುಟುಂಬ ಕಲ್ಯಾಣ, ವಾಣಿಜ್ಯ ತೆರಿಗೆ, ಸಾರಿಗೆ, ಆಹಾರ ಮತ್ತು ನಾಗರಿಕ ಪೊರೈಕೆ ಇಲಾಖೆ ಸೇರಿದಂತೆ ಹಲವು ಇಲಾಖೆಗಳ 40 ಸೇವೆಗಳು ಇದರಲ್ಲಿ ಲಭ್ಯವಿದೆ. ಒಂದು ವರ್ಷದಲ್ಲಿ 3.19 ಲಕ್ಷ ಜನರಿಗೆ ಸೇವೆ ಒದಗಿಸಲಾಗಿದೆ. ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದರ ಜತೆಗೆ ಆನ್‌ಲೈನ್‌ಗೆ ಒಳಪಡಿಸಬಹುದಾದ ಹಲವು ಇಲಾಖೆಗಳ ಸೇವೆಗಳನ್ನೂ ಗುರುತಿಸಲಾಗಿದೆ.

ಸರ್ಕಾರಿ ಸೇವೆಯಲ್ಲಿ ಪಾರದರ್ಶಕತೆ ತರುವಲ್ಲಿಯೂ ಇದು ಸಹಕಾರಿಯಾಗಲಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಮತ್ತಷ್ಟು ಸೇವೆಗಳು ಆನ್‌ಲೈನ್‌ ಮೂಲಕ ಸಿಗಲಿವೆ. ಈಗಾಗಲೇ ಕೇಂದ್ರಗಳಲ್ಲಿ ಸಾಮಾನ್ಯ ಜನನ ಮತ್ತು ಮರಣ ಪ್ರಮಾಣ ಪತ್ರ ನೀಡಲಾಗುತ್ತಿದೆ. ಇದೀಗ ಅಂತಾರಾಷ್ಟ್ರೀಯ ಜನನ ಮತ್ತು ಮರಣ ಪ್ರಮಾಣಪತ್ರ ಸೇವೆಗಳು ಸಾರ್ವಜನಿಕರಿಗೆ ದೊರೆಯಲಿವೆ ಎಂದಿದ್ದಾರೆ. 

ಹಿರಿಯರು ಸೇರಿದಂತೆ ಇನ್ನಿತರಿಗೆ ಅನುಕೂಲವಾಗಲಿ ಅನ್ನುವ ಉದ್ದೇಶದಿಂದ ನಾಲ್ಕು ಹೆಚ್ಚುವರಿ ಸೇವೆಗಳನ್ನು ಆರಂಭಿಸಿದ್ದು, ಪ್ರಯೋಗಿಕವಾಗಿ ಶನಿವಾರದಿಂದ ಈ ಸೇವೆಗಳು ಸಾರ್ವಜನಿಕರಿಗೆ ಲಭ್ಯವಾಗಲಿವೆ. 
-ಸುನೀಲ್‌ ಪನ್ವಾರ್‌, ಇಡಿಸಿಎಸ್‌ ನಿರ್ದೇಶಕ

* ದೇವೇಶ ಸೂರಗುಪ್ಪ 

Advertisement

Udayavani is now on Telegram. Click here to join our channel and stay updated with the latest news.

Next