Advertisement

ಅಂಗವಿಕಲ ಮತದಾರರ ಗುರುತಿಸಿ

09:20 AM Mar 15, 2019 | |

ವಿಜಯಪುರ: ಜಿಲ್ಲೆಯ ವಿವಿಧ ಗ್ರಾಮಗಳಲ್ಲಿರುವ ಅರ್ಹ ವಿಕಲಚೇತನ ಮತದಾರರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡಿಸುವ ಜೊತೆಗೆ ಮತದಾನ ದಿನದಂದು ತಪ್ಪದೇ ಮತದಾನ ಮಾಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷರಾದ ವಿಕಾಸ ಕಿಶೋರ ಸುರಳಕರ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

Advertisement

ಗುರುವಾರ ನಗರದ ಜಿಪಂ ಸಭಾಂಗಣದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಗ್ರಾಮ ಮಟ್ಟದ ಸಂಪನ್ಮೂಲ ವ್ಯಕ್ತಿಗಳು, ಗ್ರಾಮೀಣ ವಿವಿಧೊದ್ದೇಶ ಪುನರ್‌ವಸತಿ ಕಾರ್ಯಕರ್ತರು ಹಾಗೂ ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಜಿಲ್ಲಾದ್ಯಂತ ಸ್ವೀಪ್‌ ಚಟುವಟಿಕೆ ಹಮ್ಮಿಕೊಳ್ಳುವ ಕುರಿತು ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಜಿಲ್ಲೆಯ 648 ಗ್ರಾಮಗಳಲ್ಲಿ 170 ಗ್ರಾಮ ಮಟ್ಟದ ಸಂಪನ್ಮೂಲ ವ್ಯಕ್ತಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದ 470 ಗ್ರಾಮಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು
ಆಯಾ ಗ್ರಾಮಗಳ ಅರ್ಹ ವಿಕಲಚೇತನ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೆ ಮುಂದಾಗಬೇಕು. ಅಲ್ಲದೇ ಅಂತ ಮತದಾರರನ್ನು ಮತದಾನ ದಿನದಂದು ತಪ್ಪದೇ ಮತಗಟ್ಟೆಗೆ ಕರೆ ತಂದು ಮತದಾನ ಮಾಡಿಸುವ ವ್ಯವಸ್ಥೆ
ಮಾಡಿಸಬೇಕು ಎಂದು ಸೂಚಿಸಿದರು.

ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಸುಮಾರು 16,097 ವಿಕಲಚೇತನ ಮತದಾರರಿದ್ದು, ಈ ಮತದಾರರು ಇರುವ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರದ 903 ಮತಗಟ್ಟೆ ವ್ಯಾಪ್ತಿಯ ಸ್ಥಳಗಳಲ್ಲಿ ವಿಕಲಚೇತನ ಮತದಾರರನ್ನು ಮತದಾನಕ್ಕೆ ಕರೆ ತರುವಂತಹ ಕಾರ್ಯವನ್ನು ವಿಆರ್‌ಡಬ್ಲೂ ಹಾಗೂ ಎಂಆರ್‌ ಡಬ್ಲೂಗಳು ಮಾಡಬೇಕು. ಈ ಮತದಾರರು ಮತದಾನಕ್ಕೆ ಕರೆದುಕೊಂಡು ಹೋಗಲು ಪ್ರತಿ ಸ್ಥಳಕ್ಕೆ ತಲಾ ಒಂದರಂತೆ ಆಟೋ ವ್ಯವಸ್ಥೆಯನ್ನು ಸಹ ಜಿಲ್ಲಾ ಸ್ವೀಪ್‌ ಸಮಿತಿ ಮೂಲಕ ಮಾಡಲಾಗುತ್ತಿದೆ. 

ಮತಗಟ್ಟೆಗೆ ಕರೆತರುವುದು ಹಾಗೂ ಮತದಾನದ ನಂತರ ಆಯಾ ಮತದಾರರಿಗೆ ಅವರ ಸ್ವಸ್ಥಳಗಳಿಗೆ ಬಿಡುವಂತಹ ಕಾರ್ಯವನ್ನು ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಲೋಕಸಭಾ ಚುನಾವಣೆಯಲ್ಲಿ ಶೇಕಡಾವಾರು ಮತದಾನ ಹೆಚ್ಚಿಸಲು ಅನುಕೂಲವಾಗುವಂತೆ ಈವರೆಗೆ ನೋಂದಣಿಯಾಗಿರುವ ಮತದಾರರ ಮಾಹಿತಿ, ನೂತನವಾಗಿ ನೋಂದಣಿಯಾಗಿರುವ ಮತದಾರರ ಮಾಹಿತಿ ಹಾಗೂ 18 ವರ್ಷ ಪೂರೈಸಿರುವ ಅರ್ಹ ವಿಕಲಚೇತನ ಮತದಾರರ ಮಾಹಿತಿಯನ್ನು ಸಿದ್ಧಪಡಿಸಿಕೊಳ್ಳುವಂತೆ ಸೂಚಿಸಿದರು. 

Advertisement

ಈಗ ನೇಮಕ ಮಾಡಿರುವ ವಿಆರ್‌ ಡಬ್ಲೂ, ಎಂಆರ್‌ಡಬ್ಲೂ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮುಂಚಿತವಾಗಿ ಆಯಾ ವಿಕಲಚೇತನ ಮತದಾರರೊಂದಿಗೆ ಸಂಪರ್ಕ ಸಾಧಿಸಬೇಕು. ಆಯಾ ಮತಗಟ್ಟೆಗಳಲ್ಲಿ ವ್ಹೀಲ್‌ಚೇರ್‌ ಗಳ ಸುಸ್ಥಿತಿ ಬಗ್ಗೆ ಹಾಗೂ ರ್‍ಯಾಂಪ್‌ಗ್ಳ ವ್ಯವಸ್ಥೆ ಕುರಿತಂತೆ ಯಾವುದೇ ರೀತಿಯ ದೂರು ಅಥವಾ ಮಾಹಿತಿ ಬೇಕಾದಲ್ಲಿ ಆಯಾ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳನ್ನು ಸಂಪರ್ಕಿಸುವಂತೆ ತಿಳಿಸಿದ ಅವರು, ಚುನಾವಣಾ ಸಂದರ್ಭದಲ್ಲಿ ಅರ್ಹ ವಿಕಲಚೇತನ ಮತದಾರರನ್ನು ಮತಗಟ್ಟೆಗೆ ಕರೆತರುವ ಚಟುವಟಿಕೆಯಲ್ಲಿ ತೊಡಗುವವರಿಗೆ ಗುರುತಿನ ಚೀಟಿ ಸಹ ನೀಡಲಾಗುವುದೆಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್‌ ಉಪ ಕಾರ್ಯದರ್ಶಿ ಅಮರೇಶ ನಾಯಕ, ಜಿಲ್ಲಾ ಪಂಚಾಯತ್‌ ಮುಖ್ಯ ಯೋಜನಾಧಿಕಾರಿ ಸಿ.ಬಿ.ಕುಂಬಾರ, ಜಿಲ್ಲೆಯ ಗ್ರಾಮ ಮಟ್ಟದ ಸಂಪನ್ಮೂಲ ವ್ಯಕ್ತಿಗಳು (ವಿಆರ್‌ಡಬ್ಲೂ) ಹಾಗೂ ಗ್ರಾಮೀಣ ವಿವಿಧೊದ್ದೇಶ ಪುನರ್‌ವಸತಿ ಕಾರ್ಯಕರ್ತರು (ಎಂಆರ್‌ಡಬ್ಲೂ), ಶಿಶು ಅಭಿವೃದ್ಧಿ ಯೋಜನಾ ಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ಕೃಷ್ಣಮೂರ್ತಿ ಟಿ. ಉಪಸ್ಥಿತರಿದ್ದರು. ಅಶೋಕ ಕೆಲವಡಿ ಸ್ವಾಗತಿಸಿ, ವಂದಿಸಿದರು.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾ.23ರವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅವಕಾಶವಿದ್ದು, ಅರ್ಹ ಮತದಾರರನ್ನು ಗುರುತಿಸಿ, ನೋಂದಾಯಿಸಬೇಕು. ಅದರಂತೆ ಬರುವ ಏಪ್ರಿಲ್‌ 23ರಂದು ನಡೆಯುವ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ತಪ್ಪದೇ ಮತದಾನ ಮಾಡಿಸಲು ಅವಶ್ಯಕ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.
 ವಿಕಾಸ ಕಿಶೋರ ಸುರಳಕರ, ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next