Advertisement

ಭೂದಾನದಿಂದ ಅಕ್ಷರಸ್ಥರಿಗೂ ಆದರ್ಶ ರತ್ನಜ್ಜಿ

04:09 PM Mar 29, 2019 | pallavi |

ಹುಮನಾಬಾದ: ತಾಲೂಕಿನ ಚಂದನಹಳ್ಳಿ ಗ್ರಾಮದ ಅನಕ್ಷರಸ್ಥ ಅಜ್ಜಿಯೊಬ್ಬಳು ಸರ್ಕಾರಿ ಶಾಲೆಗೆ ಭೂದಾನ ನೀಡಿ, ಮಾನವೀಯತೆ ಮೆರೆಯುವ ಮೂಲಕ ಅಕ್ಷರಸ್ಥರೂ ಒಳಗೊಂಡಂತೆ ಸಮಾಜದ ಸರ್ವರಿಗೂ ಆದರ್ಶರಾಗಿದ್ದಾರೆ.

Advertisement

ಮಕ್ಕಳಿಲ್ಲದ ಕೊರಗೂ ಈ ಮಧ್ಯೆ ಪತಿ ಅಗಲಿಕೆಯ ನೋವನ್ನು ಅಜ್ಜಿ ಲಿಂ| ರತ್ನಮ್ಮ ಸುಣಗಾರ ಮರೆತದ್ದು ಕೇಳಿದರೆ ನಿಜಕ್ಕೂ ಎಂಥವರನ್ನೂ ಬೆರಗುಗೊಳಿಸದೇ ಇರದು. ಊರಲ್ಲಿ (ಔಟಗಿ) ಯಾವುದೇ ಶುಭ ಸಮಾರಂಭ ಇದ್ದರೆ ಊರಿನಲ್ಲಿರುವ ಮನೆ-ಮನೆಗೆ ಅಲೆದಾಡಿ ಊಟಕ್ಕೆ ಹೇಳುವ ಜವಾಬ್ದಾರಿ. ಊರಿನುದ್ದಕ್ಕೂ ಕಾಲ್ನಡಿಗೆಯಲ್ಲೇ ಸಂಚರಿಸಿ, ಅಚ್ಚುಕಟ್ಟಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಈ ರತ್ನಜ್ಜಿ.

3.20 ಎಕರೆ ಜಮೀನು ಕಾಣಿಕೆ: ಗ್ರಾಮದ ದೇವಿದಾಸರಾವ್‌, ಗುಂಡೇರಾವ್‌ ಮತ್ತು ಗೋವಿಂದರಾವ್‌ ಕುಲಕರ್ಣಿ ಪರಿವಾರದೊಂದಿಗೆ ಅಜ್ಜಿ ಉತ್ತಮ ಬಾಂಧವ್ಯ ಹೊಂದಿದ್ದರು. ಅಜ್ಜಿಯ ನಿಸ್ವಾರ್ಥ ಸೇವೆ ಪರಿಗಣಿಸಿದ ಈ ಮೂವರು ಊರಿನ ಸಮೀಪದಲ್ಲಿನ 3.20ಎಕರೆ ಖಾಸಗಿ ಜಮೀನನ್ನು 1960ರ ವೇಳೆಗೆ ಖರೀದಿಸಿ, ರತ್ನಜ್ಜಿಗೆ ಕಾಣಿಕೆಯಾಗಿ ನೀಡಿದ್ದರು.

ವ್ಯಾಸಂಗಕ್ಕಾಗಿ ಬೇರೆ ಊರಿಗೆ: ಒಂಟಿ ಜೀವ ದಿನವಿಡೀ ಹೊಲದಲ್ಲೇ ಕೆಲಸ ಮಾಡುತ್ತಿತ್ತು. ಅಷ್ಟರ ಹೊತ್ತಿಗೆ ಊರಿನಲ್ಲಿ ಪೂರ್ವ ಪ್ರಾಥಮಿಕ ಸರ್ಕಾರಿ ಶಾಲೆ ಮಾತ್ರ ಇತ್ತು. ಹಿರಿಯ ಪ್ರಾಥಮಿಕ ಶಾಲೆ ನಂತರ ಪ್ರೌಢ ಶಾಲೆಗಾಗಿ ಗ್ರಾಮದ ವಿದ್ಯಾರ್ಥಿಗಳು ವ್ಯಾಸಂಗಕ್ಕಾಗಿ ದೂರದ ಊರಿಗೆ ಹೋಗಬೇಕಾದ ಅನಿವಾರ್ಯತೆ ಇತ್ತು.

ನಿವೇಶನ ಸಮಸ್ಯೆ: ಆ ವೇಳೆಗೆ ಶಾಲೆಯಲ್ಲಿ 8ನೇ ವರ್ಗದ ಪ್ರವೇಶಕ್ಕಾಗಿ ಮಂಜೂರಾತಿ ದೊರೆತಿತ್ತು. ಸರ್ಕಾರದಲ್ಲಿ ಲಕ್ಷಾಂತರ ಅನುದಾನವಿದ್ದರೂ ನಿವೇಶನದ ಕೊರತೆಯಿಂದ ಕಟ್ಟಡವಿಲ್ಲದೇ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದರು. ನಿವೇಶನ ಲಭ್ಯ ಇರುವುದಾದರೆ ನಿರ್ಮಾಣಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡುತ್ತೇವೆ. ಇಲ್ಲದಿದ್ದರೆ ಈ ಹಣ ತಾಲೂಕಿನ ಅನ್ಯ ಶಾಲೆಗೆ ವರ್ಗಾಯಿಸುವುದಾಗಿ ಶಿಕ್ಷಣ ಇಲಾಖೆ ಅಧಿಕಾರಿಗಳು ಎಚ್ಚರಿಕೆ ಪತ್ರ ಕೂಡ ಬರೆದಿದ್ದರು.

Advertisement

ದೇವರ ಸ್ವರೂಪದಲ್ಲಿ ಬಂದ ಅಜ್ಜಿ: ಆ ಸಂದರ್ಭದಲ್ಲಿ ಚಿಂತೆಯಲ್ಲಿದ್ದ ಶಿಕ್ಷಕರ ಪಾಲಿಗೆ ದೇವರಾಗಿ ಬಂದವಳೇ ಅಜ್ಜಿ ರತ್ನಮ್ಮ ಸುಣಗಾರ. ಈಕೆಗೆ ಪತಿ, ಮಕ್ಕಳ್ಯಾರೂ
ಇಲ್ಲ. ನೀವು ಪಡುತ್ತಿರುವ ಸಂಕಟ ನನ್ನಿಂದ ನೋಡಲಾಗುತ್ತಿಲ್ಲ. ನನ್ನ ಬಳಿ ಇರುವ 3.20 ಎಕರೆ ಜಮೀನಿನ ಪೈಕಿ ನಿಮಗೆಷ್ಟು ಅವಶ್ಯವಿದೆಯೋ ಅಷ್ಟನ್ನು ತೆಗೆದುಕೊಳ್ಳಿ ಎಂದಾಗ ಶಿಕ್ಷಕರಿಗೆ ನಂಬಲಾಗಲಿಲ್ಲ. ಹಾಗೆ ಹೇಳಿದ ಅಜ್ಜಿ 15 ದಿನಗಳಲ್ಲೇ 1997ರಲ್ಲಿ 1ಎಕರೆ ಜಮೀನು ಕಾಣಿಕೆಯಾಗಿ ನೀಡಿದಳು. ಅವರ ಕಾಣಿಕೆಯಿಂದ ಗ್ರಾಮದಲ್ಲೀಗ ಪ್ರಾಥಮಿಕ ಮತ್ತು ಪ್ರೌಢಶಾಲೆ ನಡೆಯುತ್ತಿದೆ.

ಸಲಹೆ ನೀಡುತ್ತಿದ್ದ ಅಜ್ಜಿ: ಶಾಲೆಗೆ ಭೂಮಿ ನೀಡಿದ ರತ್ನಜ್ಜಿ ನಿತ್ಯ ಪಾಠ, ಪ್ರವಚನ ಆಲಿಸುತ್ತಿದ್ದರು. ಮಕ್ಕಳೇ ಈ ದೇಶದ ಭವಿಷ್ಯ. ಅವರ ಭವಿಷ್ಯದಲ್ಲೇ ನಿಮ್ಮ ಜನ್ಮ ಸಾರ್ಥಕಗೊಳ್ಳುತ್ತದೆಂದು ನಮಗೂ ಕೂಡ ಆಗಾಗ ಹೇಳುತ್ತಿದ್ದರು. ಸ್ವಾತಂತ್ರ್ಯ ದಿನಾಚರಣೆ ಒಳಗೊಂಡಂತೆ ಇಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಿಗೂ ಅಜ್ಜಿಯನ್ನು ಆಹ್ವಾನಿಸಲು ಮರೆಯುತ್ತಿರಲಿಲ್ಲ ಎಂದು ಶಾಲೆ ಮುಖ್ಯ ಶಿಕ್ಷಕ ಆನಂದರಾವ್‌ ವರನಾಳ, ಸಹ ಶಿಕ್ಷಕ ಕೆ. ವೀರಾರೆಡ್ಡಿ ಭಾವುಕರಾಗುತ್ತಾರೆ.

ನಾನು ತಹಶೀಲ್ದಾರ್‌ ಹುದ್ದೆಗೆ ಬರುವುದಕ್ಕೂ ಮುನ್ನ ಆರೂವರೆ ವರ್ಷ ಚಂದನಹಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸಹ ಶಿಕ್ಷಕನಾಗಿ, 2 ವರ್ಷ ಮುಖ್ಯ ಶಿಕ್ಷಕನಾಗಿ ಸೇವೆ ಸಲ್ಲಿಸಿದ್ದೇನೆ. ಗ್ರಾಮದ ಸರ್ಕಾರಿ ಶಾಲೆ ಅಭಿವೃದ್ಧಿಯಲ್ಲಿ ಲಿಂ. ರತ್ನಮ್ಮ ಸುಣಗಾರ ಕೊಡುಗೆ ಅನನ್ಯ. ಭೂದಾನ ಮಾಡಿದ್ದಲ್ಲದೇ ಪ್ರತಿಯೊಂದು ಚಟುವಟಿಕೆ ಅವಲೋಕಿಸಿ, ಮಾರ್ಗದರ್ಶನ ನೀಡುತ್ತಿದ್ದರು. ಅವರ ಸೇವೆ ಗ್ರಾಮಕ್ಕೆ ಮಾತ್ರವಲ್ಲ ಇಡೀ ಜಿಲ್ಲೆಗೆ ಆದರ್ಶ. ಇಂದು ಅವರು ನಮ್ಮನ್ನಗಲಿರುವುದು ನೋವು ತಂದಿದೆ.
ನಾಗಯ್ಯಸ್ವಾಮಿ ಹಿರೇಮಠ, ತಹಶೀಲ್ದಾರ್‌ ಹುಮನಾಬಾದ

„ಶಶಿಕಾಂತ ಕೆ.ಭಗೋಜಿ

Advertisement

Udayavani is now on Telegram. Click here to join our channel and stay updated with the latest news.

Next