ಮಲ್ಲಿಕಟ್ಟೆ: ನಗರದಲ್ಲಿ 250ಕ್ಕೂ ಹೆಚ್ಚು ಹಮಾಲಿ ಕಾರ್ಮಿಕರಿದ್ದು ಅವರಿಗೆ ಗುರುತಿನ ಕಾರ್ಡ್ ಕೊಡುವ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆ ಮತ್ತು ಎಪಿಎಂಸಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಶಾಸಕ ಜೆ.ಆರ್. ಲೋಬೋ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅವರು ಶುಕ್ರವಾರ ತಮ್ಮ ಕಚೇರಿಯಲ್ಲಿ ಹಮಾಲಿ ಕಾರ್ಮಿಕರು, ಎಪಿಎಂಸಿ ಮತ್ತು ಕಾರ್ಮಿಕ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಈ ಎರಡೂ ಇಲಾಖೆಗಳ ಅಧಿಕಾರಿಗಳು ಸಭೆ ಸೇರಿ ಯಾವ ರೀತಿ ಐಡಿ ಕಾರ್ಡ್ ಕೊಡಬಹುದು ಎಂಬ ಬಗ್ಗೆ ಚರ್ಚಿಸಬೇಕು. ಏನಿದ್ದರೂ ಹಮಾಲಿ ಕಾರ್ಮಿಕರಿಗೆ ಗುರುತಿನ ಕಾರ್ಡ್ ಕೊಡಲೇಬೇಕು ಎಂದು ತಾಕೀತು ಮಾಡಿದರು.
ಕಾರ್ಮಿಕ ಹಕ್ಕುಗಳನ್ನು ರಕ್ಷಿಸಬೇಕಾದ ಇಲಾಖೆ ಏನೂ ಕೆಲಸ ಮಾಡದೆ ಇಷ್ಟು ಕಾಲ ಕುಳಿತದ್ದು ಹೇಗೆ ಎಂದು ಪ್ರಶ್ನಿಸಿದ ಅವರು, ತಾನು ಇದೇ ಅಧಿವೇಶನದಲ್ಲಿ ಹಮಾಲಿ ಕಾರ್ಮಿಕರ ಸಮಸ್ಯೆಗಳು ಹಾಗೂ ಅವರಿಗೆ ಐಡಿ ಕಾರ್ಡ್ ಕೊಡದಿರುವ ಬಗ್ಗೆ ಪ್ರಶ್ನಿಸುವುದಾಗಿ ತಿಳಿಸಿದರು.
ಎಪಿಎಂಸಿ ವತಿಯಿಂದ ಕಾರ್ಮಿಕರಿಗೆ ಯಾವುದೇ ಸಲವತ್ತುಗಳನ್ನು ನೀಡದಿರಲು ಕಾರಣವೇನು ಎಂದು ಪ್ರಶ್ನಿಸಿದ ಅವರು, ಅಧಿಕಾರಿಗಳು ಇದ್ದೂ ಹಮಾಲಿ ಕಾರ್ಮಿಕರು ಯಾವುದೇ ಸೌಲಭ್ಯಗಳಿಲ್ಲದೆ ದಿನ ಕಳೆಯುವಂತಾಗಿರುವುದು ನಿಜಕ್ಕೂ ಆಶ್ಚರ್ಯಕರ. ಕಾನೂನು ಏನು ಹೇಳುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ ಎಂದರು.
ಕಾರ್ಮಿಕ ಇಲಾಖೆ ಮತ್ತು ಎಪಿಎಂಸಿ ಇಲಾಖೆಗಳು ಜತೆ ಸೇರಿ ಯಾವ ರೀತಿ ಈ ಕಾರ್ಮಿಕರಿಗೆ ಸಹಾಯ ಮಾಡಬಹುದು ಎನ್ನುವುದನ್ನು ನಿರ್ಧರಿಸಬೇಕು. ನ.27ರಂದು ಮತ್ತೂಮ್ಮೆ ಸಭೆ ಕರೆಯಲಾಗುವುದು ಎಂದು ಅವರು ತಿಳಿಸಿದರು. ಕಾರ್ಮಿಕ ಇಲಾಖೆ, ಎಪಿಎಂಸಿ ಇಲಾಖೆ ಮತ್ತು ಹಮಾಲಿ ಕಾರ್ಮಿಕ ಸಂಘದ ಪದಾಧಿಕಾರಿಗಳಿದ್ದರು.