ಬೇಕನ್‌ಹ್ಯಾಮ್ (ಇಂಗ್ಲೆಂಡ್): ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತ ಎಷ್ಟು ಮಂದಿ ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಲಿದೆ, ಭಾರತದ ಸ್ಪಿನ್ ವ್ಯೂಹ ಹೇಗಿದ್ದೀತು ಎಂಬ ಬಗ್ಗೆ ಎದುರಾಳಿ ಆಸ್ಟ್ರೇಲಿಯ ಪಾಳೆಯದಲ್ಲಿ ಗಂಭೀರ ಚರ್ಚೆ, ಚಿಂತನೆಗಳು ನಡೆದಿವೆ ಎಂಬ ಬಗ್ಗೆ ವರದಿಯಾಗಿದೆ.
ಸಾಮಾನ್ಯವಾಗಿ ಇಂಗ್ಲೆಂಡ್ ಟ್ರಾಕ್‌ಗಳೆಲ್ಲ ವೇಗಿಗಳಿಗೆ ಹೆಚ್ಚಿನ ನೆರವು ನೀಡುವುದರಿಂದ ಇಲ್ಲಿ ಸ್ಪಿನ್ ಬಳಕೆ ಕಡಿಮೆ. ಆದರೆ ಆಸ್ಟ್ರೇಲಿಯವನ್ನು ಸ್ಪಿನ್ ಮೂಲಕ ಮಣಿಸಬಹುದು ಎಂಬುದು ಚಿಂತಕರ ಲೆಕ್ಕಾಚಾರ. ಈ ಕುರಿತು ಆಸೀಸ್ ತಂಡದ ಸಹಾಯಕ ಕೋಚ್ ಡೇನಿಯಲ್ ವೆಟರಿ ಮಾಧ್ಯಮದವರೊಂದಿಗೆ ಮಾತಾಡಿದ್ದು, ಭಾರತದ ಸ್ಪಿನ್ ಸಂಭಾವ್ಯರ ಕುರಿತು ನಾವು ಬಹಳಷ್ಟು ಚರ್ಚಿಸಿದ್ದೇವೆ ಎಂದಿದ್ದಾರೆ.
“ನಮ್ಮ ಪ್ರಕಾರ ರವೀಂದ್ರ ಜಡೇಜ ಮತ್ತು ಆರ್. ಅಶ್ವಿನ್ ಅವರ ಕಾಂಬಿನೇಶನ್ ಇರಲಿದೆ. ಇಬ್ಬರೂ ಬ್ಯಾಟಿಂಗ್‌ನಲ್ಲೂ ತಂಡದ ನೆರವಿಗೆ ನಿಲ್ಲಬಲ್ಲರು. ಇಂಗ್ಲೆಂಡ್‌ನಲ್ಲಿ ಅಶ್ವಿನ್ ದಾಖಲೆ ಉತ್ತಮ ಮಟ್ಟದಲ್ಲಿದೆ’ ಎಂಬುದಾಗಿ ವೆಟರಿ ಹೇಳಿದರು.
ಕಳೆದ ಬೋರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಇವರಿಬ್ಬರು ಭಾರತದ 2-1 ಸರಣಿ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಶ್ವಿನ್ 25 ವಿಕೆಟ್, ಜಡೇಜ 22 ವಿಕೆಟ್ ಹಾರಿಸಿದ್ದರು.
Related Articles
“ಓವಲ್ ವಿಕೆಟ್ ಹಾಗೆಯೇ ಇದೆ. ದಿನ ಕಳೆದಂತೆ ಇದು ಸ್ಪಿನ್ನಿಗೆ ನೆರವಾಗಲಿದೆ’ ಎಂದೂ ವೆಟರಿ ಅಭಿಪ್ರಾಯಪಟ್ಟರು.
ಯಾರೇ ಗೆದ್ದರೂ ದಾಖಲೆ!
ಈ ಟೆಸ್ಟ್ ಪಂದ್ಯವನ್ನು ಯಾರೇ ಗೆದ್ದರೂ ಅಲ್ಲೊಂದು ಇತಿಹಾಸ ನಿರ್ಮಾಣವಾಗಲಿದೆ. ಈಗಾಗಲೇ ಭಾರತ ಮತ್ತು ಆಸ್ಟ್ರೇಲಿಯ ತಂಡಗಳೆರಡೂ ಏಕದಿನ ವಿಶ್ವಕಪ್ ಹಾಗೂ ಟಿ20 ವಿಶ್ವಕಪ್ ಗೆದ್ದಿವೆ. ಟೆಸ್ಟ್ ವಿಶ್ವಕಪ್ ಗೆದ್ದರೆ ಈ ಮೂರನ್ನೂ ಜಯಿಸಿದ ವಿಶ್ವದ ಪ್ರಪ್ರಥಮ ತಂಡವಾಗಿ ಮೂಡಿಬರಲಿವೆ.
ಅಂದಹಾಗೆ, ಇಲ್ಲಿ ಗೆಲ್ಲಲೇಬೇಕೆಂದಿಲ್ಲ. ಪ್ರಥಮ ಇನ್ನಿಂಗ್ಸ್ ಮುನ್ನಡೆ ಸಾಧಿಸಿದರೂ ಸಾಕು. ಆ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಕಿರೀಟ ಏರಿಸಿಕೊಳ್ಳಲಿದೆ.