ಕೇಪ್ ಟೌನ್: ನ್ಯೂಲ್ಯಾಂಡ್ಸ್ನಲ್ಲಿ ನಡೆದ ವನಿತಾ ಟಿ 20 ವಿಶ್ವಕಪ್ ಫೈನಲ್ನಲ್ಲಿ ಸುನೆ ಲೂಸ್ ನಾಯಕತ್ವದ ದಕ್ಷಿಣ ಆಫ್ರಿಕಾವನ್ನು 19 ರನ್ಗಳಿಂದ ಸೋಲಿಸಿದ ಆಸ್ಟ್ರೇಲಿಯ 2023 ರ ಪ್ರಶಸ್ತಿಯನ್ನು ಗೆದ್ದುಕೊಂಡಿತು. 2018 ಮತ್ತು 2020 ರಲ್ಲಿ ಗೆದ್ದಿದ್ದ ಆಸೀಸ್ ಹ್ಯಾಟ್ರಿಕ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಆಸ್ಟ್ರೇಲಿಯ ವನಿತೆಯರು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. 6 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿದರು. ಅತ್ಯಮೋಘ ಆಟವಾಡಿದ ಮೂನಿ ಔಟಾಗದೆ ಭರ್ಜರಿ 74 ರನ್ ಗಳಿಸಿದರು.
ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ವನಿತೆಯರು ಆಸೀಸ್ ಬಿಗು ಬೌಲಿಂಗ್ ದಾಳಿಗೆ ಸಿಲುಕಿ 6 ವಿಕೆಟ್ ನಷ್ಟಕ್ಕೆ 137 ರನ್ ಗಳನ್ನು ಮಾತ್ರ ಗಳಿಸಿ ಸೋಲಿಗೆ ಶರಣಾದರು. ಆರಂಭಿಕ ಆಟಗಾರ್ತಿ ಲಾರಾ ವೊಲ್ವಾರ್ಡ್ಟ್ 61 ರನ್ ಗರಿಷ್ಠ ಮೊತ್ತವಾಗಿತ್ತು.
ಆಸೀಸ್ ನಾಯಕಿ ಮೆಗ್ ಲ್ಯಾನಿಂಗ್ ವಿಶ್ವಕಪ್ ಕೈಯಲ್ಲಿ ಕಪ್ ಎತ್ತಿ ತಂಡದ ಆಟಗಾರರೊಂದಿಗೆ ಸೇರಿಕೊಂಡು ಸಂಭ್ರಮಿಸಿದರು. ಪಟಾಕಿಗಳು ಸಿಡಿಸಿ ಆಕರ್ಶಕ ವರ್ಣ ಚಿತ್ತಾರ ಹಿನ್ನೆಲೆಯಲ್ಲಿ ಕಂಡು ಬಂದಿತು.
Related Articles
”ತಂಡದಿಂದ ಸಾಕಷ್ಟು ವಿಶೇಷ ಪ್ರಯತ್ನ ನಡೆಸಲಾಯಿತು. ಎಲ್ಲಾ ತಂಡಗಳು ನಮ್ಮ ಮೇಲೆ ಕಠಿಣವಾಗಿ ಬರುತ್ತವೆ ಎಂದು ನಮಗೆ ತಿಳಿದಿತ್ತು, ತುಂಬಾ ಹೆಮ್ಮೆ. ಚೆಂಡಿನೊಂದಿಗೆ ನಮ್ಮ ಪವರ್ಪ್ಲೇ ಅತ್ಯುತ್ತಮವಾಗಿತ್ತು, ಅದು ನಿಜವಾಗಿಯೂ ಟೋನ್ ಅನ್ನು ಹೊಂದಿಸಿತು. ನಾವು ಉತ್ತಮ ಅನುಭವವನ್ನು ಪಡೆದುಕೊಂಡಿದ್ದೇವೆ. ದಕ್ಷಿಣ ಆಫ್ರಿಕಾದಲ್ಲಿ ನಮ್ಮ ಸಮಯವನ್ನು ಆನಂದಿಸಿದ್ದೇವೆ,ಇದೊಂದು ಅದ್ಭುತ ಪಂದ್ಯಾವಳಿ. ಆಟಗಾರರಷ್ಟೇ ಅಲ್ಲ, ಸಹಾಯಕ ಸಿಬಂದಿ ಕೂಡ. ಎಲ್ಲರಿಗೂ, ಕುಟುಂಬ ಮತ್ತು ಸ್ನೇಹಿತರಿಗೆ ತುಂಬಾ ಧನ್ಯವಾದಗಳು. ಇಲ್ಲಿ ಎಲ್ಲಾ ಬೆಂಬಲವು ಅದ್ಭುತವಾಗಿತ್ತು” ಎಂದು ಮೆಗ್ ಲ್ಯಾನಿಂಗ್ ಹೇಳಿದರು.
ಪಂದ್ಯದ ಶ್ರೇಷ್ಠ ಪ್ರಶಸ್ತಿ ಬೆತ್ ಮೂನಿ ಪಡೆದರೆ , ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಆಶ್ಲೀಗ್ ಗಾರ್ಡ್ನರ್ ಪಡೆದರು.