ದುಬಾೖ: ಕೇಪ್‌ಟೌನ್‌ನ “ನ್ಯೂಲ್ಯಾಂಡ್ಸ್’ ಅಂಗಳದ ಪಿಚ್ ಬಗ್ಗೆ ಐಸಿಸಿ ಅಸಮಾಧಾನ ವ್ಯಕ್ತಪಡಿಸಿದ್ದು, ಕಳಪೆ ರೇಟಿಂಗ್ ನೀಡಿದೆ. ಇದೊಂದು “ಅತೃಪ್ತಿಕರ’ ಪಿಚ್ ಎಂಬುದರ ಜತೆಗೆ ಒಂದು “ನಕಾರಾತ್ಮಕ’ ಅಂಕವನ್ನೂ ನೀಡಿದೆ.
ಭಾರತ-ದಕ್ಷಿಣ ಆಫ್ರಿಕಾ ನಡುವೆ ಇಲ್ಲಿ ಆಡಲಾದ ಸರಣಿಯ ದ್ವಿತೀಯ ಟೆಸ್ಟ್ ಪಂದ್ಯ ಕೇವಲ ಎರಡು ದಿನಗಳಲ್ಲಿ ಮುಗಿದಿತ್ತು. ಎಸೆತಗಳ ಲೆಕ್ಕಾಚಾರ ದಲ್ಲಿ ಇದು ಟೆಸ್ಟ್ ಇತಿಹಾಸದ ಅತೀ ಸಣ್ಣ ಟೆಸ್ಟ್ ಆಗಿತ್ತು.ಇಲ್ಲಿ ಒಂದೊಂದು ರನ್ನಿಗೂ ಬ್ಯಾಟರ್‌ಗಳು ಪರದಾಟ ನಡೆಸಿದರು. ಆದರೆ ಬೌಲರ್‌ಗಳಿಗೆ ಬಂಪರ್ ಆಗಿ ಪರಿಣಮಿಸಿತು. ಮೊದಲ ದಿನವೇ 23 ವಿಕೆಟ್ ಉರುಳಿತ್ತು.
ಕೇಪ್‌ಟೌನ್ ಪಿಚ್ ಬಗ್ಗೆ ಇತ್ತಂಡ ಗಳ ನಾಯಕರಾದ ರೋಹಿತ್ ಶರ್ಮ ಮತ್ತು ಡೀನ್ ಎಲ್ಗರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಮ್ಯಾಚ್ ರೆಫ್ರಿ ಕ್ರಿಸ್ ಬ್ರಾಡ್ ಅವರಿಗೆ ದೂರು ಸಲ್ಲಿಸಿದ್ದರು. ಬಳಿಕ ಬ್ರಾಡ್ ಐಸಿಸಿಗೆ ವರದಿ ಮಾಡಿದ್ದರು.
“ನ್ಯೂಲ್ಯಾಂಡ್ಸ್ ಪಿಚ್ ಮೇಲೆ ಬ್ಯಾಟಿಂಗ್ ನಡೆಸುವುದು ಬಹಳ ಕಷ್ಟವಾಗಿತ್ತು. ಚೆಂಡು ಅನಿಯಮಿತ ವಾಗಿ ಬೌನ್ಸ್ ಆಗುತ್ತಿತ್ತು. ಇದ ರಿಂದಾಗಿಯೇ ವಿಕೆಟ್ ಕಳೆದು ಕೊಳ್ಳಬೇಕಾಯಿತು. ಶಾಟ್ಸ್ ಸಾಧ್ಯ ವಾಗುತ್ತಿರಲಿಲ್ಲ. ಚೆಂಡು ಬ್ಯಾಟರ್‌ಗಳ ಗ್ಲೌಸ್‌ಗೆ ಬಡಿಯುತ್ತಿತ್ತು’ ಎಂದು ಬ್ರಾಡ್ ಐಸಿಸಿಗೆ ವರದಿ ಸಲ್ಲಿಸಿದ್ದರು.
ಐಸಿಸಿ ತನ್ನ ವರದಿಯನ್ನು ಕ್ರಿಕೆಟ್ ಸೌತ್ ಆಫ್ರಿಕಾಕ್ಕೆ ರವಾನಿಸಿದೆ. ಇದಕ್ಕೆ 14 ದಿನಗಳಲ್ಲಿ ಮೇಲ್ಮನವಿ ಸಲ್ಲಿಸಬಹುದೆಂದೂ ಸೂಚಿಸಿದೆ.
ನ್ಯೂಲ್ಯಾಂಡ್ಸ್‌ಗೆ ಹಿನ್ನಡೆ
ನಕಾರಾತ್ಮಕ ಅಂಕದಿಂದ (ಡಿಮೆ ರಿಟ್ ಪಾಯಿಂಟ್) ನ್ಯೂಲ್ಯಾಂಡ್ಸ್‌ಗೆ ಹಿನ್ನಡೆಯಾಗಿದೆ. ಈ ಅಂಕ 5 ವರ್ಷಗಳ ತನಕ ಊರ್ಜಿತದಲ್ಲಿರುತ್ತದೆ. ಈ ಅವಧಿಯಲ್ಲಿ ನಕಾರಾತ್ಮಕ ಅಂಕ 6ಕ್ಕೆ ಏರಿದರೆ ಆಗ ಒಂದು ವರ್ಷ ಕಾಲ ಈ ಕ್ರೀಡಾಂಗಣ ಅಂತಾರಾಷ್ಟ್ರೀಯ ಕ್ರಿಕೆಟ್ ನಿಷೇಧಕ್ಕೊಳಗಾಗಲಿದೆ.