ದುಬಾೖ: ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮಿಂಚಿದ ರವಿಚಂದ್ರನ್ ಅಶ್ವಿನ್ ಮತ್ತೆ ವಿಶ್ವದ ನಂ.1 ಬೌಲರ್ ಆಗಿ ಮೂಡಿಬಂದಿದ್ದಾರೆ. ಇಂಗ್ಲೆಂಡ್‌ನ ಜೇಮ್ಸ್ ಆ್ಯಂಡರ್ಸನ್ ದ್ವಿತೀಯ ಸ್ಥಾನಕ್ಕೆ ಕುಸಿದರು.
ಬೋರ್ಡರ್- ಗಾವಸ್ಕರ್ ಟ್ರೋಫಿ ಸರಣಿಯಲ್ಲಿ ಸರ್ವಾಧಿಕ 25 ವಿಕೆಟ್ ಉರುಳಿಸಿದ ಸಾಧನೆ ಅಶ್ವಿನ್ ಅವರದು. ಅಶ್ವಿನ್ ಈಗ ಆ್ಯಂಡರ್ಸನ್‌ಗಿಂತ 10 ಅಂಕಗಳ ಮುನ್ನಡೆಯಲ್ಲಿದ್ದಾರೆ. ಅಶ್ವಿನ್ 869, ಆ್ಯಂಡರ್ಸನ್ 859 ರೇಟಿಂಗ್ ಅಂಕ ಹೊಂದಿದ್ದಾರೆ.
ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ 6 ಸ್ಥಾನ ಮೇಲೇರಿ 28ಕ್ಕೆ ಬಂದಿದ್ದಾರೆ. ಆಲ್‌ರೌಂಡರ್ ರ್‍ಯಾಂಕಿಂಗ್ ಯಾದಿಯಲ್ಲೂ ಪ್ರಗತಿ ಸಾಧಿಸಿರುವ ಅಕ್ಷರ್ ಪಟೇಲ್ 4ಕ್ಕೆ ಏರಿದ್ದಾರೆ. ಇಲ್ಲಿ ಅಶ್ವಿನ್ ಮತ್ತು ರವೀಂದ್ರ ಜಡೇಜ ಮೊದಲೆರಡು ಸ್ಥಾನದಲ್ಲಿದ್ದಾರೆ.
ಕೊಹ್ಲಿ ನಂ. 13
ಅಹ್ಮದಾಬಾದ್ ಟೆಸ್ಟ್ ಪಂದ್ಯದಲ್ಲಿ ಶತಕದ ಬರಗಾಲ ನೀಗಿಸಿಕೊಂಡ ವಿರಾಟ್ ಕೊಹ್ಲಿ ಅವರದು 7 ಸ್ಥಾನಗಳ ನೆಗೆತ. ಅವರು 13ನೇ ಸ್ಥಾನಕ್ಕೆ ಏರಿದ್ದಾರೆ. ಇಲ್ಲಿ ಶತಕ ಬಾರಿಸಿದ ಮತ್ತೋರ್ವ ಬ್ಯಾಟರ್ ಶುಭಮನ್ ಗಿಲ್ ಒಮ್ಮೆಲೇ 17 ಸ್ಥಾನ ಮೇಲೇರಿದ್ದಾರೆ. ಅವರಿಗೆ ಈಗ 46ನೇ ರ್‍ಯಾಂಕಿಂಗ್. ಗಾಯಾಳು ರಿಷಭ್ ಪಂತ್ (9) ಮತ್ತು ನಾಯಕ ರೋಹಿತ್ ಶರ್ಮ (10) ಟಾಪ್-10 ಯಾದಿಯಲ್ಲಿರುವ ಭಾರತದ ಇಬ್ಬರು ಬ್ಯಾಟರ್.
ಏಳಕ್ಕೇರಿದ ಖ್ವಾಜಾ
ಅಂತಿಮ ಟೆಸ್ಟ್‌ನಲ್ಲಿ 180 ರನ್ ಬಾರಿಸಿದ ಆಸ್ಟ್ರೇಲಿಯದ ಆರಂಭಕಾರ ಉಸ್ಮಾನ್ ಖ್ವಾಜಾ ಈಗ ಜೀವನಶ್ರೇಷ್ಠ 815 ರೇಟಿಂಗ್ ಪಾಯಿಂಟ್ ಗಳಿಸಿದ್ದಾರೆ. 2 ಸ್ಥಾನಗಳ ಪ್ರಗತಿಯೊಂದಿಗೆ 7ನೇ ಸ್ಥಾನಕ್ಕೆ ಬಂದಿದ್ದಾರೆ.
Related Articles
ಶ್ರೀಲಂಕಾ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಮಿಂಚಿದ ನ್ಯೂಜಿಲ್ಯಾಂಡ್‌ನ ಡ್ಯಾರಿಲ್ ಮಿಚೆಲ್ ಬ್ಯಾಟಿಂಗ್ ರ್‍ಯಾಂಕಿಂಗ್ ಯಾದಿಯಲ್ಲಿ ಜೀವನಶ್ರೇಷ್ಠ 8ನೇ ಸ್ಥಾನ ಅಲಂಕರಿಸಿದ್ದಾರೆ.
ವೆಸ್ಟ್ ಇಂಡೀಸ್ ಎದುರಿನ ಜೊಹಾನ್ಸ್‌ಬರ್ಗ್ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ ದಕ್ಷಿಣ ಆಫ್ರಿಕಾದ ಟೆಂಬ ಬವುಮ 14 ಸ್ಥಾನಗಳ ಪ್ರಗತಿಯೊಂದಿಗೆ ರ್‍ಯಾಂಕಿಂಗ್ ಯಾದಿಯಲ್ಲಿ 15ಕ್ಕೆ ಬಂದು ತಲುಪಿದ್ದಾರೆ. ಇದು ಅವರ ಜೀವನಶ್ರೇಷ್ಠ ರ್‍ಯಾಂಕಿಂಗ್ ಆಗಿದೆ.
ಟಾಪ್-10 ಟೆಸ್ಟ್ ಬೌಲರ್
1. ಆರ್. ಅಶ್ವಿನ್ 869
2. ಜೇಮ್ಸ್ ಆ್ಯಂಡರ್ಸನ್ 859
3. ಪ್ಯಾಟ್ ಕಮಿನ್ಸ್ 841
4. ಕಾಗಿಸೊ ರಬಾಡ 825
5. ಶಾಹೀನ್ ಶಾ ಅಫ್ರಿದಿ 787
6. ಓಲೀ ರಾಬಿನ್ಸನ್ 785
7. ಜಸ್‌ಪ್ರೀತ್ ಬುಮ್ರಾ 780
8. ನಥನ್ ಲಿಯಾನ್ 757
9. ರವೀಂದ್ರ ಜಡೇಜ 753
10. ಕೈಲ್ ಜೇಮಿಸನ್ 749