ಅಹಮದಾಬಾದ್: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ 2023 ಅಂತ್ಯವಾಗಿದೆ. ಅತ್ಯಂತ ಯಶಸ್ವಿಯಾಗಿ ಸಾಗಿದ ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತು. ಭಾನುವಾರ ಅಹಮದಾಬಾದ್ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆತಿಥೇಯ ಭಾರತ ತಂಡವನ್ನು ಆರು ವಿಕೆಟ್ ಗಳ ಅಂತರದಿಂದ ಸೋಲಿಸಿದ ಆಸ್ಟ್ರೇಲಿಯಾ ಆರನೇ ಬಾರಿಗೆ ಕಪ್ ಗೆದ್ದು ವಿಜೃಂಭಿಸಿತು.
ಟೀಂ ಇಂಡಿಯಾ ಫೀಲ್ಡಿಂಗ್ ಗುಣಮಟ್ಟ ಹೆಚ್ಚಿಸಲು ಈ ಬಾರಿಯ ಕೂಟದಲ್ಲಿ ಭಾರತೀಯ ಡ್ರೆಸ್ಸಿಂಗ್ ರೂಂನಲ್ಲಿ ಹೊಸ ವಿಧಾನವನ್ನು ಕಂಡುಕೊಳ್ಳಲಾಗಿತ್ತು. ಪ್ರತಿ ಪಂದ್ಯದ ಬಳಿಕ ಬೆಸ್ಟ್ ಫೀಲ್ಡರ್ ಪ್ರಶಸ್ತಿಯನ್ನು ನೀಡಲಾಗುತ್ತಿತ್ತು. ಫೀಲ್ಡಿಂಗ್ ಕೋಚ್ ಅವರ ಈ ಹೊಸ ಐಡಿಯಾಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆಟಗಾರರು ಕೂಡಾ ಇದರಿಂದ ಸಂತಸಗೊಂಡಿದ್ದರು.
ಫೈನಲ್ ಪಂದ್ಯದಲ್ಲಿ ಇದೇ ಸಂಪ್ರದಾಯ ಮುಂದುವರಿಸಲಾಯಿತು. ಪಂದ್ಯ ಸೋತ ಬೇಸರದಲ್ಲಿದ್ದರೂ ಟಿ.ದಿಲೀಪ್ ಅವರು ಶ್ರೇಷ್ಠ ಕ್ಷೇತ್ರರಕ್ಷಕ ಪ್ರಶಸ್ತಿ ಘೋಷಣೆ ಮಾಡಿದರು. ಈ ಬಾರಿ ವಿರಾಟ್ ಕೊಹ್ಲಿ ಈ ಪ್ರಶಸ್ತಿ ಗೆದ್ದರು.
ಈ ಕೂಟದಲ್ಲಿ ಇದುವರೆಗೆ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಮತ್ತು ಸೂರ್ಯಕುಮಾರ್ ಯಾದವ್ ಈ ಪ್ರಶಸ್ತಿ ಪಡೆದಿದ್ದಾರೆ.