ಹೊಸದಿಲ್ಲಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಟೀಮ್ ಇಂಡಿಯಾ ಈಗಾಗಲೇ ಲಂಡನ್‌ಗೆ ಬಂದಿಳಿದಿದೆ. ಆದರೆ ಆರಂಭಕಾರ ರೋಹಿತ್ ಶರ್ಮ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಕೇದಾರ್ ಜಾಧವ್ ಈ ತಂಡ ದೊಂದಿಗೆ ತೆರಳಿಲ್ಲ. ಇವರ ಪ್ರಯಾಣ ತುಸು ವಿಳಂವಾಗಲಿದೆ.
ಇತ್ತೀಚೆಗಷ್ಟೇ ಮುಂಬೈ ಇಂಡಿಯನ್ಸ್‌ಗೆ 3ನೇ ಸಲ ಐಪಿಎಲ್ ಟ್ರೋಫಿ ತಂದಿತ್ತ ರೋಹಿತ್ ಶರ್ಮ ತನ್ನ ರಜೆಯನ್ನು ಮುಂದುವರಿಸಬೇಕೆಂದು ಐಪಿಎಲ್‌ಗೂ ಮೊದಲೇ ಬಿಸಿಸಿಐನ್ನು ಕೋರಿದ್ದರು. ಅವರು ಸೋದರ ಸಂಬಂಧಿಯೊಬ್ಬರ ಮದುವೆಯಲ್ಲಿ ಪಾಲ್ಗೊಳ್ಳಬೇಕಿತ್ತು. ಇದಕ್ಕೆ ಬಿಸಿಸಿಐ ಅನುಮತಿ ನೀಡಿತ್ತು.
ಕೇದಾರ್ ಜಾಧವ್ ಅವರಿಗೆ ವೀಸಾ ಸಮಸ್ಯೆ ಎದುರಾಗಿತ್ತು. ಸಕಾಲದಲ್ಲಿ ವೀಸಾ ಕೈಸೇರದೇ ಇದ್ದುದರಿಂದ ಅವರಿಗೆ ಮೊದಲ ಲಂಡನ್ ಫ್ಲೈಟ್ ಮಿಸ್ ಆಗಿತ್ತು. ಬ್ರಿಟಿಷ್ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ ಬಿಸಿಸಿಐ ವೀಸಾ ಸಮಸ್ಯೆಯನ್ನು ಬಗೆ ಹರಿಸಲು ಪ್ರಯತ್ನಿಸಿದರೂ ಯಶಸ್ವಿಯಾಗಿರ ಲಿಲ್ಲ. ಈಗ ವೀಸಾ ಕೈಸೇರಿದ್ದು, ಜಾಧವ್ ಶುಕ್ರವಾರ ಲಂಡನ್ನಿಗೆ ಪ್ರಯಾಣಿಸುವ ಸಾಧ್ಯತೆ ಇದೆ. ಇಬ್ಬರೂ ಮೊದಲ ಅಭ್ಯಾಸ ಪಂದ್ಯದ ವೇಳೆ ಆಯ್ಕೆಗೆ ಲಭ್ಯರಿರುತ್ತಾರೆ ಎಂದು ಬಿಸಿಸಿಐ ತಿಳಿಸಿದೆ.
ಭಾರತ ತನ್ನ ಮೊದಲ ಅಭ್ಯಾಸ ಪಂದ್ಯ ವನ್ನು ಮೇ 28ರಂದು ನ್ಯೂಜಿಲ್ಯಾಂಡ್ ವಿರುದ್ಧ ಲಂಡನ್ನಿನ “ಕಿಂಗ್‌ಸ್ಟನ್ ಓವಲ್’
ನಲ್ಲಿ ಆಡಲಿದೆ.