ಲಂಡನ್: ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ “ಚಾಂಪಿಯನ್ ಅಂಬಾಸಡರ್’ ಹರ್ಭಜನ್ ಸಿಂಗ್ ಲಂಡನ್ನಿಗೆ ಆಗಮಿಸಿದ್ದಾರೆ. ಈ ಪಂದ್ಯಾ ವಳಿಗೆಂದು ಐಸಿಸಿ ನೇಮಿಸಿದ 8 ಮಂದಿ ರಾಯಭಾರಿಗಳಲ್ಲಿ ಹರ್ಭಜನ್ ಕೂಡ ಒಬ್ಬರು.
ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ಯಲ್ಲಿ ಪಾಲ್ಗೊಳ್ಳಲಿರುವ 8 ದೇಶಗಳಿಂದ ಒಬ್ಬೊಬ್ಬರಂತೆ 8 ಮಂದಿ ರಾಯಭಾರಿ ಗಳನ್ನು ಐಸಿಸಿ ನೇಮಿಸಿದೆ. ಉಳಿದವರೆಂದರೆ ಮೈಕ್ ಹಸ್ಸಿ (ಆಸ್ಟ್ರೇಲಿಯ), ಶಾಹಿದ್ ಅಫ್ರಿದಿ (ಪಾಕಿಸ್ಥಾನ), ಹಬಿಬುಲ್ ಬಶರ್ (ಬಾಂಗ್ಲಾದೇಶ), ಇಯಾನ್ ಬೆಲ್ (ಇಂಗ್ಲೆಂಡ್), ಶೇನ್ ಬಾಂಡ್ (ನ್ಯೂಜಿ ಲ್ಯಾಂಡ್), ಕುಮಾರ ಸಂಗಕ್ಕರ (ಶ್ರೀಲಂಕಾ) ಮತ್ತು ಗ್ರೇಮ್ ಸ್ಮಿತ್ (ದಕ್ಷಿಣ ಆಫ್ರಿಕಾ). ಇವರಲ್ಲಿ ಹರ್ಭಜನ್ ಸಿಂಗ್ ಹೊರತುಪಡಿಸಿ ಉಳಿದವರೆಲ್ಲರೂ ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಿದ್ದಾರೆ.
ಹರ್ಭಜನ್ ಸಿಂಗ್ 2002ರ ಚಾಂಪಿ ಯನ್ಸ್ ಟ್ರೋಫಿ ಪಂದ್ಯಾವಳಿ ವೇಳೆ ಭಾರತ ತಂಡದಲ್ಲಿದ್ದರು. ಅಂದು ಭಾರತ-ಶ್ರೀಲಂಕಾ ಜಂಟಿ ಚಾಂಪಿಯನ್ ಆಗಿದ್ದವು.
“ಜಾಗತಿಕ ಮಟ್ಟದ ಇಂಥದೊಂದು ಪ್ರತಿಷ್ಠಿತ ಕ್ರಿಕೆಟ್ ಪಂದ್ಯಾವಳಿಗಾಗಿ ನನ್ನನ್ನು ರಾಯಭಾರಿಯನ್ನಾಗಿ ನೇಮಿಸಿದ್ದು ಹೆಮ್ಮೆಯ ಸಂಗತಿ. ಭಾರತ ಈ ಕೂಟದ ಹಾಲಿ ಚಾಂಪಿಯನ್ ಆಗಿದ್ದು, ಈ ಸಲ ಶ್ರೇಷ್ಠ ಮಟ್ಟದ ಪ್ರದರ್ಶನದೊಂದಿಗೆ ಬಹಳ ಎತ್ತರಕ್ಕೇರಿ ಅಭಿಮಾನಿಗಳ ನಿರೀಕ್ಷೆಯನ್ನು ಸಾಕಾರಗೊಳಿಸಲಿದೆ…’ ಎಂದು ಹರ್ಭಜನ್ ಹೇಳಿದ್ದಾರೆ.
ಈ 8 ಮಂದಿ ರಾಯಭಾರಿಗಳು ಚಾಂಪಿಯನ್ಸ್ ಟ್ರೋಫಿ ಪಂದ್ಯಗಳ ವೇಳೆ ಐಸಿಸಿ ಟೀಮ್‌ನಲ್ಲಿದ್ದು, ಶಾಲಾ ಮಕ್ಕಳಿ ಗಾಗಿ ಆಯೋಜಿಸಲಾಗುವ ವಿವಿಧ ಕಾರ್ಯ ಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಮಕ್ಕಳಿಗೆ ಈ ಕ್ರಿಕೆಟ್ ಲೆಜೆಂಡ್ಸ್ ಜತೆ ಆಡುವ ಅವಕಾಶವೂ ಲಭಿಸಲಿದೆ. ಈ 8 ಮಂದಿ ಒಟ್ಟು 1,774 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, 48 ಶತಕ ಹಾಗೂ 838 ವಿಕೆಟ್‌ಗಳೊಂದಿಗೆ 51,906 ರನ್ ಪೇರಿಸಿರುತ್ತಾರೆ.