Advertisement

ಕೋವಿಡ್ ರೂಪಾಂತರ: ಮಹಿಳಾ ಏಕದಿನ ವಿಶ್ವಕಪ್‌ ಅರ್ಹತಾ ಪಂದ್ಯಗಳು ರದ್ದು

07:38 PM Nov 27, 2021 | Team Udayavani |

ದುಬೈ: ದಕ್ಷಿಣ ಆಫ್ರಿಕಾದಲ್ಲಿ ಹೊಸ ಕೋವಿಡ್ -19 ರೂಪಾಂತರದ ಹೊರಹೊಮ್ಮುವಿಕೆಯ ನಂತರ ಹರಾರೆಯಲ್ಲಿ ನಡೆಯುತ್ತಿದ್ದ ಮುಂದಿನ ವರ್ಷದ ಮಹಿಳಾ ಏಕದಿನ ವಿಶ್ವಕಪ್‌ಗಾಗಿ ನಡೆಯುತ್ತಿರುವ ಅರ್ಹತಾ ಪಂದ್ಯಗಳನ್ನೂ ಐಸಿಸಿ ಶನಿವಾರ ರದ್ದುಗೊಳಿಸಿದೆ.

Advertisement

ದಕ್ಷಿಣ ಆಫ್ರಿಕಾದಲ್ಲಿ ಹೊಸ ರೂಪಾಂತರವನ್ನು ಪತ್ತೆಹಚ್ಚಿದ ನಂತರ ಪ್ರಪಂಚದಾದ್ಯಂತ ಭಯ ಹುಟ್ಟಿಕೊಂಡಿದ್ದು, ಹಲವಾರು ಆಫ್ರಿಕನ್ ದೇಶಗಳಿಂದ ಪ್ರಯಾಣ ನಿರ್ಬಂಧಗಳನ್ನು ಹೇರಲಾಗಿದೆ. ಓಮಿಕ್ರಾನ್ ರೂಪಾಂತರದ ಏರಿಕೆಯ ಹಿನ್ನೆಲೆಯಲ್ಲಿ ಭಾಗವಹಿಸುವ ತಂಡಗಳು ಹೇಗೆ ಹಿಂತಿರುಗುತ್ತವೆ ಎಂಬುದರ ಕುರಿತು ಕಾಳಜಿಯನ್ನು ಆಧರಿಸಿ ಪಂದ್ಯಗಳನ್ನು ನಿಲ್ಲಿಸುವ ನಿರ್ಧಾರವನ್ನು ಐಸಿಸಿ ಮಾಡಿದೆ.

ಐಸಿಸಿ ಈ ನಿರ್ಧಾರದಿಂದ ಶ್ರೇಯಾಂಕಗಳ ಆಧಾರದಿಂದ ಪಾಕಿಸ್ತಾನ, ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾದೇಶಕ್ಕೆ ಮುಂದಿನ ಹಂತಕ್ಕೆ ಹೋಗಲು ದಾರಿ ಮಾಡಿಕೊಟ್ಟಿದೆ.

2022 ರಲ್ಲಿ ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ ವಿಶ್ವಕಪ್ ಅಂತಿಮ ಮೂರು ಅರ್ಹತಾ ಪಂದ್ಯಗಳ ಗುಂಪು ಎ ಯಲ್ಲಿ ವೆಸ್ಟ್ ಇಂಡೀಸ್, ಶ್ರೀಲಂಕಾ, ಐರ್ಲೆಂಡ್, ನೆದರ್ಲ್ಯಾಂಡ್ಸ್ ತಂಡಗಳಿದ್ದವು. ಪಪುವಾ ನ್ಯೂಗಿನಿಯಾ ಅರ್ಹತಾ ಪಂದ್ಯಗಳಿಂದ ಹೊರಗುಳಿಯುವುದರೊಂದಿಗೆ, ಗುಂಪು ಎ ಕೇವಲ ನಾಲ್ಕು ತಂಡಗಳನ್ನು ಒಳಗೊಂಡಿತ್ತು. ಗುಂಪು ಬಿ ಯಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ, ಥೈಲ್ಯಾಂಡ್, ಜಿಂಬಾಬ್ವೆ, ಯುಎಸ್ಎ ತಂಡಗಳಿದ್ದವು.

ಶನಿವಾರ ನಿಗದಿಯಾಗಿದ್ದ ಮೂರು ಪಂದ್ಯಗಳ ಪೈಕಿ ಜಿಂಬಾಬ್ವೆ ವಿರುದ್ಧ ಪಾಕಿಸ್ತಾನ ಮತ್ತು ಯುಎಸ್ಎ ವಿರುದ್ಧ ಥಾಯ್ಲೆಂಡ್ ಪಂದ್ಯಗಳು ನಿಗದಿಯಂತೆ ಪ್ರಾರಂಭವಾಯಿತು ಆದರೆ ದಿನದ ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ನಡುವೆ ನಡೆಯಬೇಕಾಗಿದ್ದ ಇನ್ನೊಂದು ಪಂದ್ಯ ತಂಡದ ಸಹಾಯಕ ಸಿಬ್ಬಂದಿಗೆ ಕೋವಿಡ್ ಪಾಸಿಟಿವ್ ಕಂಡು ಬಂದ ಹಿನ್ನಲೆಯಲ್ಲಿ ನಡೆಯಲಿಲ್ಲ.

Advertisement

ಸೂಪರ್ 6 ಹಂತವು ಡಿಸೆಂಬರ್ 1 ರಂದು ಪ್ರಾರಂಭವಾಗಬೇಕಿತ್ತು.

2022 ರಲ್ಲಿ ನ್ಯೂಜಿಲೆಂಡ್‌ನಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ (ಆತಿಥೇಯರು), ಪಾಕಿಸ್ತಾನ, ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾದೇಶ ತಂಡಗಳು ಪಂದ್ಯಾವಳಿಯಲ್ಲಿ ಆಡಲಿವೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next