Advertisement

ಇಬ್ರಾಹಿಂ ಜೋಕರ್‌, ಎಸ್‌.ಆರ್‌.ಶ್ರೀನಿವಾಸ್‌ ಅಯೋಗ್ಯ: ಎಂ.ಪಿ.ರೇಣುಕಾಚಾರ್ಯ

11:07 AM Oct 05, 2019 | Sriram |

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ವಿರುದ್ಧ ಏಕವಚನ ಪ್ರಯೋಗಿಸಿ ಕೆಟ್ಟ ಶಬ್ಧಗಳಲ್ಲಿ ಆರೋಪಿಸುತ್ತಿರುವ ಕಾಂಗ್ರೆಸ್‌ ಮುಖಂಡ ಸಿ.ಎಂ. ಇಬ್ರಾಹಿಂ ಜೋಕರ್‌, ಮಾಜಿ ಸಚಿವ ಎಸ್‌.ಆರ್‌.ಶ್ರೀನಿವಾಸ್‌ ಆಯೋಗ್ಯರು. ಎಲುಬಿಲ್ಲದ ನಾಲಗೆ ಹರಿಬಿಟ್ಟರೆ ಜನರ ಒಪ್ಪುವುದಿಲ್ಲ ಎಚ್ಚರ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಎಚ್ಚರಿಕೆ ನೀಡಿದರು.

Advertisement

ವಿಕಾಸಸೌಧದಲ್ಲಿರುವ ತಮ್ಮ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 14 ತಿಂಗಳ ಕಾಲ ಸಣ್ಣ ಕೈಗಾರಿಕೆ ಸಚಿವರಾಗಿದ್ದ ಶ್ರೀನಿವಾಸ್‌ ದಾವಣಗೆರೆಗೆ ಎರಡು- ಮೂರು ಬಾರಿ ಭೇಟಿ ಹೊರತುಪಡಿಸಿ ಕಾಲಿಟ್ಟಿಲ್ಲ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರನ್ನು ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲಿಸಿದರು. ಇಂತಹ ಮಹಾನುಭಾವ ಯಡಿಯೂರಪ್ಪ ಅವರನ್ನು ಏಕವಚನದಲ್ಲಿ ಟೀಕಿಸುವುದು ಖಂಡನೀಯ. ಅವನೊಬ್ಬ ಅಯೋಗ್ಯ ಎಂದು ವಾಗ್ಧಾಳಿ ನಡೆಸಿದರು.

ಇನ್ನೊಂದೆಡೆ ಕಾಂಗ್ರೆಸ್‌ನ ಸಿ.ಎಂ. ಇಬ್ರಾಹಿಂ ಜೋಕರ್‌ ಇದ್ದಂತೆ. ಮಾತೆತ್ತಿದರೆ ನಾವು ಹುಟ್ಟಿಸಿದ ಮಕ್ಕಳು ಎಂದು ಎನ್ನುತ್ತಾನೆ. ಅವರು ಹುಟ್ಟಿಸಿದ ಮಕ್ಕಳು ಅವರನ್ನೇ ಒಪ್ಪದೇ ಯಾಕೆ ಬಿಟ್ಟು ಹೋದರು. ಯಾಕೆ ಗೌರವ ಕೊಡಲಿಲ್ಲ ಎಂಬುದನ್ನು ತಿಳಿಯಲಿ. ಬಿಜೆಪಿಯವರು ನಪುಂಸಕರು ಎಂದು ಎಂದಿರುವ ಇಬ್ರಾಹಿಂ ಅಯೋಗ್ಯ. ಇಬ್ರಾಹಿಂ ಭದ್ರಾವತಿಯಲ್ಲಿ ಮಾಡಿದ ಅವ್ಯವಹಾರಗಳು ಇಂದಿಗೂ ಜನರ ಕಣ್ಣ ಮುಂದಿದೆ ಎಂದು ಟೀಕಿಸಿದರು.

ನೀನು ಮೊದಲು ಯಾವ ಪಕ್ಷದಲ್ಲಿದ್ದೆ. ನೀನು ಜನತಾ ಪರಿವಾರದವನು. ನಂತರ ಎಚ್‌.ಡಿ.ದೇವೇಗೌಡರಿಗೆ ಕೈ ಕೊಟ್ಟವನು. ಇಂದಿರಾಗಾಂಧಿ, ಸೋನಿಯಾಗಾಂಧಿಯವರಿಗೆ ಏನೆಲ್ಲಾ ಕೆಟ್ಟ ಭಾಷೆ ಬಳಸಿ ಟೀಕಿಸಿದ್ದೆ. ನಂತರ ಅವರ ಕಾಲಿಗೆ ಬಿದ್ದು ಕಾಂಗ್ರೆಸ್‌ ಸೇರಿದೆ. ನಿನ್ನ ಜನ್ಮಕ್ಕೆ ಕಾರಣ ಯಾರು? ನಿನಗೆ ಜನ್ಮ ಕೊಟ್ಟ ಪಕ್ಷ ಯಾವುದು? ಎಂದು ಕುಟುಕಿದರು.

ಹುಚ್ಚಾಸ್ಪತ್ರೆಗೆ ಸೇರಿಸಬೇಕು
ಬಿಜೆಪಿ, ಪ್ರಧಾನಿ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಗ್ಗೆ ಹಗುರವಾಗಿ ಮಾತನಾಡುತ್ತೀರಾ. ನಮಗೂ ಕೆಟ್ಟ ಭಾಷೆ ಬರುತ್ತದೆ. ನಿಮ್ಮಂತಹ ಅಯೋಗ್ಯರಿಂದ ಪಕ್ಷ, ನಾಯಕರು ನೀತಿ ಪಾಠ ಕಲಿಯಬೇಕಿಲ್ಲ. ಎಸ್‌.ಆರ್‌.ಶ್ರೀನಿವಾಸ್‌, ಸಿ.ಎಂ. ಇಬ್ರಾಹಿಂ ಹತಾಶೆಯಿಂದ ಹುಚ್ಚು ಹೇಳಿಕೆ ನೀಡುತ್ತಿದ್ದಾರೆ. ಇಬ್ಬರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು ಎಂದು ಹೇಳಿದರು.

Advertisement

ಅತೀವೃಷ್ಟಿಯಲ್ಲಿ ರಾಜಕಾರಣ ಬೇಡ
ನೆರೆ ಸಂತ್ರಸ್ತರಿಗೆ ಪರಿಹಾರ ಕಾರ್ಯವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಮರ್ಥವಾಗಿ ಕೈಗೊಳ್ಳುತ್ತಿದೆ. ಪರಿಹಾರ ಒದಗಿಸಲು ಸರ್ಕಾರ ಬದ್ಧವಾಗಿದೆ. ಕೇಂದ್ರದಿಂದ ಅತಿ ಶೀಘ್ರವಾಗಿ ಪರಿಹಾರ ಹಣ ಬಿಡುಗಡೆಯಾಗುವ ವಿಶ್ವಾಸವಿದೆ. ಅತೀವೃಷ್ಟಿಯಲ್ಲಿ ರಾಜಕಾರಣ ಬೇಡ ಎಂದು ತಿಳಿಸಿದರು.

ಹಾದಿಬೀದಿ ಹೇಳಿಕೆ ಬೇಡ
ಕೇಂದ್ರದ ಮಾಜಿ ಸಚಿವರಾದ ಬಸನಗೌಡ ಪಾಟೀಲ್‌ ಯತ್ನಾಳ್‌ ತಮ್ಮ ಭಾವನೆ ವ್ಯಕ್ತಪಡಿಸಿದ್ದಾರೆಯೇ ಹೊರತು ಕೇಂದ್ರದ ವಿರುದ್ಧ ಟೀಕೆ ಮಾಡಿಲ್ಲ. ಪ್ರಧಾನಿ ನರೇಂದ್ರ ಮೋದಿಯವರಿಗೆ ಇಚ್ಛಾಶಕ್ತಿ, ಬದ್ಧತೆ ಎರಡೂ ಇದೆ. ಮಂಡ್ಯ ಸಂಸದರು ಸೇರಿ 26 ಸಂಸದರಿದ್ದೇವೆ. ಕೇಂದ್ರ ಸಚಿವರು, ಸಂಸದರು ಹಾದಿಬೀದಿಯಲ್ಲಿ ಹೇಳಿಕೆ ನೀಡಿ ಪಕ್ಷಕ್ಕೆ ಮುಜುಗರ ಉಂಟು ಮಾಡಬಾರದು ಎಂದು ಕಿರಿಯನಾಗಿ ವಿನಂತಿಸುತ್ತೇನೆ. ಪ್ರಧಾನಿಯವರಿಗೆ ವಸ್ತುಸ್ಥಿತಿ ಮನವರಿಕೆ ಮಾಡಿಕೊಟ್ಟು ಪರಿಹಾರ ಬಿಡುಗಡೆ ಮಾಡಿಸುವ ಕೆಲಸ ಆಗಬೇಕಿದೆ ಎಂದು ಹೇಳಿದರು.

ಪ್ರಧಾನಿ ಮೋದಿಯವರು ತಾವು ದೇವರು ಎಂದು ಹೇಳಿಕೊಂಡಿಲ್ಲ. ತಾವೊಬ್ಬ ಪ್ರಧಾನ ಸೇವಕ ಎಂದು ಹೇಳಿಕೊಂಡಿದ್ದಾರೆ. ಪ್ರಧಾನಿಯವರನ್ನು ವೈಭವೀಕರಿಸುವ ಅಗತ್ಯವಿಲ್ಲ ಎಂದು ಪ್ರತಿಕ್ರಿಯಿಸಿದರು.

ಕಾಂಗ್ರೆಸ್‌ ಹೈಕಮಾಂಡ್‌ ದುರ್ಬಲವಾಗಿದೆ. ಅವರ ಯೋಗ್ಯತೆಗೆ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ ಎಂದು ಟ್ವೀಟ್‌ ಮಾಡಿದ್ದಾರೆ. ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಾಗ ಸರ್ಕಾರದ ಖಜಾನೆ ಸ್ಥಿತಿಗತಿ ಹೇಗಿತ್ತು ಎಂಬ ಬಗ್ಗೆ ಮಾಹಿತಿ ನೀಡಲಿ ಎಂದು ಹೇಳಿದರು.

ಲೂಟಿ ಮಾಡಿ ಖಜಾನೆ ಖಾಲಿ
ಕಾಂಗ್ರೆಸ್‌- ಜೆಡಿಎಸ್‌ ಸರ್ಕಾರವಿದ್ದಾಗ ಖಜಾನೆ ಲೂಟಿ ಮಾಡಿದ್ದಾರೆ. ಇದೀಗ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ತೆರಿಗೆ ಸೋರಿಕೆಗೆ ಕಡಿವಾಣ ಹಾಕಿ ಸಂಪನ್ಮೂಲ ಕ್ರೋಡೀಕರಣಕ್ಕೆ ಒತ್ತು ನೀಡಿದ್ದಾರೆ. ಖಜಾನೆ ಲೂಟಿಯಿಂದ ತಾತ್ಕಾಲಿಕವಾಗಿ ಕಷ್ಟವಾಗಿರಬಹುದು. ಆದರೆ ನೆರೆ ಸಂತ್ರಸ್ತರಿಗೆ ಪರಿಹಾರ ಕಾರ್ಯದಲ್ಲಿ ಸರ್ಕಾರ ಹಿಂದೆ ಬಿದ್ದಿಲ್ಲ.
– ಎಂ.ಪಿ.ರೇಣುಕಾಚಾರ್ಯ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ

ನಾವೇ ಸಮಸ್ಯೆ ಹೇಳಿಕೊಳ್ಳಬಾರದು
ಸಂತ್ರಸ್ತರೊಬ್ಬರು ಬೆಳೆ ನಾಶವಾಗಿದೆ ಎಂದಾಗ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಯವರು ತಮ್ಮದೂ ನೂರು ಎಕರೆ ಬೆಳೆ ನಾಶವಾಗಿದ್ದು, ಸರಿಯಾಗಿ ಪರಿಹಾರ ಕೊಟ್ಟರೆ ಒಂದು ಕೋಟಿ ರೂ. ಕೊಡಬೇಕು ಎಂದು ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಎಂ.ಪಿ.ರೇಣುಕಾಚಾರ್ಯ, ಜವಾಬ್ದಾರಿಯುತ ಸ್ಥಾನದಲ್ಲಿರುವವರು ಈ ರೀತಿ ಮಾತನಾಡಬಾರದು. ಇಂತಹ ಹೇಳಿಕೆಗಳಿಂದ ಸರ್ಕಾರಕ್ಕೆ ಮುಜುಗರವಾಗುತ್ತದೆ. ಜನ ಕಷ್ಟ ಹೇಳಿಕೊಳ್ಳಲು ಬಂದಾಗ ಆಲಿಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕೆ ಹೊರತು ತಮ್ಮ ಸಮಸ್ಯೆಯನ್ನೇ ಅವರ ಬಳಿ ಹೇಳಿಕೊಳ್ಳಬಾರದು ಎಂದು ಹೇಳಿದರು.

ನೆರೆಯಿಂದ ಸಂತ್ರಸ್ತರಾದವರು ಸಂಕಷ್ಟದಲ್ಲಿದ್ದರೆ ಶ್ರೀಮಂತರಿಗೂ ತೊಂದರೆಯಾಗಿರಬಹುದು. ಸದ್ಯ ಶ್ರೀಮಂತರಿಗೆ ಸ್ಪಂದನೆ ವಿಚಾರ ಮುಖ್ಯವಲ್ಲ. ಸಂತ್ರಸ್ತರಿಗೆ ಸ್ಪಂದಿಸುವುದು ಮುಖ್ಯ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next