ಇಂಫಾಲ/ಲಕ್ನೋ: ಪಂಚರಾಜ್ಯಗಳ ಚುನಾವಣೆಯ ಪೈಕಿ ಮಣಿಪುರದಲ್ಲಿ ಮೊದಲ ಹಂತದ ಮತದಾನ ಸಮೀಪಿಸುತ್ತಿರುವಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೊದಲ ಪ್ರಚಾರ ರ್ಯಾಲಿಯನ್ನು ಶನಿವಾರ ನಡೆಸಿದ್ದಾರೆ.
ಇಂಫಾಲದ ಲಂಗ್‌ಜಿಂಗ್ ಅಚೌಬಾ ಮೈದಾನದಲ್ಲಿ ಬಿಜೆಪಿಯ ಬೃಹತ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಸಿಎಂ ಓಕ್ರಾಂ ಇಬೋಬಿ ಸಿಂಗ್ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ. “ಮೂರು ಬಾರಿ ಮುಖ್ಯಮಂತ್ರಿ ಆಗಿರುವ ಕಾಂಗ್ರೆಸ್‌ನ ಇಬೋಬಿ ಸಿಂಗ್‌ರನ್ನು 10 ಪರ್ಸೆಂಟ್ ಸಿಎಂ ಎಂದೇ ಕರೆಯಲಾಗುತ್ತದೆ. ಅವರು ಮಾಡುವ ಎಲ್ಲ ಕೆಲಸಗಳಿಗೂ ಶೇ.10ರಷ್ಟು ಕಮಿಶನ್ ಪಡೆಯುತ್ತಾರಂತೆ. ಕಳೆದ 15 ವರ್ಷಗಳಲ್ಲಿ ಶೇ.10ರಂತೆ ಎಷ್ಟೊಂದು ಲೂಟಿ ಮಾಡಿರಬಹುದೆಂದು ಯೋಚಿಸಿ. ಮಣಿಪುರಕ್ಕೀಗ ಝೀರೋ ಪರ್ಸೆಂಟ್ ಸಿಎಂ ಬೇಕಾಗಿದೆ. ಕಾಂಗ್ರೆಸ್ 15 ವರ್ಷಗಳಲ್ಲಿ ಮಾಡದ್ದನ್ನು ನಾವು 15 ತಿಂಗಳಲ್ಲಿ ಮಾಡಿ ತೋರಿಸುತ್ತೇವೆ,’ ಎಂದಿದ್ದಾರೆ.
ಇದೇ ವೇಳೆ, ಯುನೈಟೆಡ್ ನಾಗಾ ಕೌನ್ಸಿಲ್ ಇಂಫಾಲ್‌ನಲ್ಲಿ ಹೇರಿರುವ ಆರ್ಥಿಕ ದಿಗ್ಬಂಧನಕ್ಕೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವೇ ಕಾರಣ ಎಂದೂ ಮೋದಿ ಆರೋಪಿಸಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ, ಆರ್ಥಿಕ ದಿಗ್ಬಂಧನವೇ ಇರುವುದಿಲ್ಲ ಎಂದಿದ್ದಾರೆ.
ಇಂಥ ಮಾತು ನಿರೀಕ್ಷಿಸಿರಲಿಲ್ಲ: ಪ್ರಧಾನಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿಎಂ ಸಿಂಗ್, “ಪ್ರಧಾನಿಯಂಥ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಯಿಂದ ಇಂಥ ಮಾತುಗಳನ್ನು ನಿರೀಕ್ಷಿಸಿರಲಿಲ್ಲ,’ ಎಂದಿದ್ದಾರೆ. ಅವರು ಸುಳ್ಳು ಹಾಗೂ ಆಧಾರರಹಿತ ಹೇಳಿಕೆಗಳ ಮೂಲಕ ಜನರ ದಾರಿತಪ್ಪಿಸುತ್ತಿದ್ದರೆ. ಮೊದಲು ಕಾಂಗ್ರೆಸ್ ವಿರುದ್ಧ ಮಾಡಿರುವ ಆರೋಪ ಗಳನ್ನು ಅವರು ಸಾಬೀತುಮಾಡಲಿ ಎಂದೂ ಸಿಂಗ್ ಸವಾಲೆಸೆದಿದ್ದಾರೆ.
ಪ್ರಚಾರ ಅಂತ್ಯ: ಇನ್ನೊಂದೆಡೆ, “ಕತ್ತೆ, ಕಸಬ್, ಪಾರಿವಾಳ’ ಮುಂತಾದ ಪದಬಳಕೆ ಮಾಡಿ, ಕೀಳುಮಟ್ಟದ ರಾಜಕೀಯಕ್ಕೆ ಸಾಕ್ಷಿಯಾದ ಉತ್ತರಪ್ರದೇಶದ 5ನೇ ಹಂತದ ಮತದಾನಕ್ಕೆ ಶನಿವಾರ ಪ್ರಚಾರ ಅಂತ್ಯವಾಗಿದೆ. ಇದೇ 27ರಂದು 11 ಜಿಲ್ಲೆಗಳ 51 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ಗುರು ಮತ್ತು ಚೇಲಾ ನಮ್ಮ ದೇಶಕ್ಕೆ ಭಾರೀ ಹಾನಿ ಉಂಟುಮಾಡಿದ್ದಾರೆ. ಗುರು ಎಂದರೆ ಮೋದಿ, ಚೇಲಾ ಎಂದರೆ ಅಮಿತ್ ಶಾ. ಈಗ ಇವರಿಬ್ಬರೂ ಸೇರಿ ನಮ್ಮ ರಾಜ್ಯವನ್ನು ಹಾಳುಮಾಡಲು ಹೊರಟಿದ್ದಾರೆ.
ಮಾಯಾವತಿ, ಬಿಎಸ್ಪಿ ನಾಯಕಿ