Advertisement

ಐಎಎಸ್‌ ತರಬೇತಿ ಕೇಂದ್ರ ಶೀಘ್ರ ಸ್ಥಾಪನೆ

06:05 PM Jul 25, 2022 | Team Udayavani |

ಹೊಸದುರ್ಗ: ಕೇವಲ ತೋರಿಕೆಗಾಗಿ ಮಠದ ಬಗ್ಗೆ ಕಾಳಜಿ ಹೊಂದದೆ ಸಮಾಜದ ಅಭಿವೃದ್ಧಿಗೆ ಕಂಕಣಬದ್ಧರಾಗಿರಬೇಕು. ಸಾಕಷ್ಟು ವಿದ್ಯಾರ್ಥಿಗಳಿಗೆ ನಾವು ಸಹಾಯ ಮಾಡಿದ್ದೇವೆ, ಮುಂದೆಯೂ ಮಾಡುತ್ತೇವೆ. ಅದರ ಫಲ ಉಂಡವರು ಮಠ, ಸಮಾಜಕ್ಕೆ ಶಕ್ತಿಯಾಗಬೇಕು ಎಂದು ಕುಂಚಿಟಿಗ ಮಠದ ಡಾ| ಶಾಂತವೀರ ಸ್ವಾಮೀಜಿ ಹೇಳಿದರು.

Advertisement

ಪಟ್ಟಣದ ಕುಂಚಿಟಗ ಮಠದಲ್ಲಿ ಭಾನುವಾರ ನಡೆದ ಶಾಂತವೀರ ಸ್ವಾಮೀಜಿಯವರು ಸನ್ಯಾಸ ದೀಕ್ಷೆ ಸ್ವೀಕರಿಸಿ 25 ವರ್ಷದ ರಜತ ಮಹೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. ವಿದ್ಯಾರ್ಥಿಗಳು ಸಮಾಜವನ್ನು ಮನೆ ಎಂದು ಭಾವಿಸಬೇಕು. ಪ್ರತಿಭಾ ಪುರಸ್ಕಾರ ಕೇವಲ ಪ್ರತಿಭೆಯನ್ನು ಗುರುತಿಸುವುದಲ್ಲ, ನಿಮ್ಮೊಂದಿಗೆ ನಾವು ಇದ್ದೇವೆ ಎನ್ನುವುದನ್ನು ಸಾರುವ ಉದ್ದೇಶ ಅದರಲ್ಲಿದೆ. ಐಎಎಸ್‌ ಮಾಡುವವರಿಗೆ ಶ್ರೀಮಠ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ಧವಿದೆ. ಬೆಂಗಳೂರಿನ ವಿಜಯನಗರದಲ್ಲಿ ಐಎಎಸ್‌ ತರಬೇತಿ ಕೇಂದ್ರ ತೆರೆಯಲು ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಇದು ಮಠದ ಕರ್ತವ್ಯವೂ ಆಗಿದೆ ಎಂದರು.

ಸಮಾಜದ ಸಹಕಾರ ಪಡೆದು ಉನ್ನತ ಸ್ಥಾನದಲ್ಲಿರುವವರು ಮಠ ಹಾಗೂ ಸಮಾಜದ ಋಣ ತೀರಿಸುವ ಕೆಲಸ ಮಾಡಬೇಕು. ದೊಡ್ಡ ಸಮುದಾಯಗಳಲ್ಲಿ ಅಭಿವೃದ್ಧಿ ಹೊಂದಿದ ವ್ಯಕ್ತಿಗಳು ಆ ಸಮುದಾಯವನ್ನು ಬೆಳೆಸುವ ಕೆಲಸ ಮಾಡುತ್ತಾರೆ. ಹಾಗೆಯೇ ನೀವು ಕೂಡ ನಿಮ್ಮ ಹಂತದಲ್ಲಿ ನಾಲ್ಕು ಜನರಿಗೆ ಸಹಾಯ ಮಾಡಬೇಕೆಂದರು.

ಹೊಸದುರ್ಗ ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ತ್ಯಾಗದಿಂದ ಮಾತ್ರ ಸುಖ ಸಿಗುತ್ತದೆ. ಸ್ವಾಮಿಗಳಿಗಾಗಿ ಮಠವಲ್ಲ, ಭಕ್ತರಿಗಾಗಿ ಮಾತ್ರ ಮಠವಿರುವುದು. ಆದರೆ ಸ್ವಾಮಿಗಳು ಮಾತ್ರ ಸಮಾಜಕ್ಕೆ ತಮ್ಮನ್ನು ತಾವು ಸಂಪೂರ್ಣ ಅರ್ಪಿಸಿಕೊಂಡಿದ್ದಾರೆ. ಒಂದೇ ತಾಯಿ ಹೊಟ್ಟೆಯಲ್ಲಿ ಹುಟ್ಟಿಲ್ಲದಿದ್ದರೂ ಕಳೆದ 22 ವರ್ಷದಿಂದ ನಾವು ಅಣ್ಣ ತಮ್ಮಂದಿರಂತೆ ಇದ್ದೇವೆ. ಮನಸ್ಸು ಮಾಡಿದರೆ ಕೋಟ್ಯಂತರ ಹಣವನ್ನು ಅನುದಾನ ತರುವಂಥ ಸಾಮರ್ಥ್ಯ ಶ್ರೀಗಳಿಗೆ ಇದೆ. ಎಲ್ಲಾ ಸಮುದಾಯದ ಮಠಗಳಿಗೆ ಸರ್ಕಾರದಿಂದ 119 ಕೋಟಿ ರೂ. ಅನುದಾನವನ್ನು ಕೊಡಿಸಿರುವಂಥ ಒಳ್ಳೆಯ ಮನಸ್ಸು ಶ್ರೀಗಳಿಗೆ ಇದೆ ಎಂದು ಬಣ್ಣಿಸಿದರು.

ವಿಧಾನ ಪರಿಷತ್‌ ಸದಸ್ಯ ಕೆ.ಎಸ್‌. ನವೀನ್‌ ಕಾರ್ಯಕ್ರಮ ಉದ್ಘಾಟಿಸಿದರು. ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಹೊಸದುರ್ಗ ತಾಲೂಕಿನ ಡಾ| ಬೆನಕಪ್ರಸಾದ್‌, ವಿನಯ್‌ ಕುಮಾರ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಸಂವಾದ ನಡೆಸಿದರು. ಇದೇ ವೇಳೆ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ. 90ಕ್ಕಿಂತ ಹೆಚ್ಚ ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಡಾ| ಬೆನಕಪ್ರಸಾದ್‌, ವಿನಯ್‌ಕುಮಾರ ಹಾಗೂ ಉಪವಿಭಾಗಾಧಿಕಾರಿಯಾಗಿ ನೇಮಕಗೊಂಡ ಶಿಲ್ಪಾ ಅವರನ್ನು ಸನ್ಮಾನಿಸಲಾಯಿತು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next