Advertisement

ಗಿರಿಯಲ್ಲಿ ಅನುರಾಗ ಕಂಡ ಶೇರ್‌

03:35 AM Jun 30, 2017 | Team Udayavani |

ಬೀದರ್‌: ಒಂದು ಕಡೆ ಮಗನ ಸಾವಿನ ದುಃಖ, ಇನ್ನೊಂದೆಡೆ ಪುತ್ರನೇ ಸಾಕಿದ್ದ ನಾಯಿಯ ನೋವು ನೋಡಲಾರದ ಸಂಕಟ… ಇದು ಐಎಎಸ್‌ ಅಧಿಕಾರಿ ಅನುರಾಗ್‌ ತಿವಾರಿ ಅವರ ಕುಟುಂಬಸ್ಥರ ನೋವಿನ ಕಥೆ. ಕರ್ನಾಟಕದಲ್ಲಿ
ಉತ್ತಮ ಅಧಿಕಾರಿ ಎಂದೇ ಹೆಸರುಗಳಿಸಿದ್ದ ಅನುರಾಗ್‌ ತಿವಾರಿ ಅವರ ನಿಗೂಢ ಸಾವು ಅವರ ಕುಟುಂಬಕ್ಕೆ ದೊಡ್ಡ ಆಘಾತವನ್ನೇ ನೀಡಿತ್ತು. ಇದರ ಜತೆಗೆ ಅನುರಾಗ್‌ ತಿವಾರಿ ಅವರೇ ಸಾಕಿದ್ದ ಮುದ್ದು ನಾಯಿಯ ಮೂಕವೇದನೆಯೂ ಈ ಕುಟುಂಬಕ್ಕೆ ತೀವ್ರವಾಗಿ ಕಾಡುತ್ತಿತ್ತು. ಕಡೆಗೆ ಮತ್ತೆ ಮತ್ತೆ ಕಾಡುವ ಮಗನ ನೆನಪು ಹಾಗೂ ಶ್ವಾನದ ನೋವು
ನೋಡಲಾರದೇ ಈ ಕುಟುಂಬ ಅದನ್ನು ಬೀದರ್‌ಗೆ ಬಂದು ಬಿಟ್ಟು ಹೋಗಿದೆ. ತಿವಾರಿ ಅವರು ಬೀದರ್‌ನಲ್ಲಿ ಇದ್ದಾಗ, ಜಿಲ್ಲಾಧಿಕಾರಿ ಕಚೇರಿಯ ಸಹಾಯಕ ಗಿರಿ ರೆಡ್ಡಿಯನ್ನು ಹಚ್ಚಿಕೊಂಡಿದ್ದ ಈ ಶ್ವಾನವನ್ನು ಅನುರಾಗ್‌ ತಿವಾರಿ ಅವರ ತಂದೆ ಬಿ.ಎನ್‌. ತಿವಾರಿ ಅವರೇ ತಮ್ಮ ಕುಟುಂಬದೊಂದಿಗೆ ಬಂದು ಮನೆಗೆ ತಲುಪಿಸಿ ಹೋಗಿದ್ದಾರೆ.

Advertisement

ಬಡತನದಲ್ಲಿ ಬೆಳೆದಿದ್ದ ಅನುರಾಗ್‌ ತಮ್ಮ ತಂದೆ- ತಾಯಿ ಜತೆಗೆ ಹೆಚ್ಚು ಬಾಂಧವ್ಯ ಹೊಂದಿದ್ದರು. ಹಾಗಾಗಿ ಮನೆಯವರ ನೆನಪು ಮರೆಯಲು ಅವರು ಐಎಎಸ್‌ ಅಧಿಕಾರಿಯಾಗಿ ಬೇರೆ ಜಿಲ್ಲೆಗಳಲ್ಲಿ ಕೆಲಸ ಮಾಡುವ ವೇಳೆ ತಮ್ಮ ನೆಚ್ಚಿನ ಶ್ವಾನ ಶೇರ್‌ನನ್ನು (ಸಿಂಹ) ಜತೆಗಿಟ್ಟುಕೊಂಡಿದ್ದರು. ಮರಿಯಾಗಿದ್ದಾಗ ಪಡೆದಿದ್ದ ಲ್ಯಾಬ್ರಡಾರ್‌ ತಳಿಯ ಈ ಶ್ವಾನಕ್ಕೆ ಈಗ 8 ವರ್ಷ ಆಗಿದೆ. ಕೊಡಗಿನಿಂದ ಬೀದರ್‌ಗೆ ವರ್ಗವಾದಾಗ ತಮ್ಮ ಜತೆ ಈ ಶ್ವಾನ ತಂದಿದ್ದರು. ಬೆಂಗಳೂರಿಗೆ ವರ್ಗವಾದ ಬಳಿಕ ತಮ್ಮೊಂದಿಗೆ ಒಯ್ದಿದ್ದರು. ಅನುರಾಗ್‌ ತಿವಾರಿ ಅವರು ಶೇರ್‌ ಎಂದಾಕ್ಷಣ ಅವರತ್ತ ಹೋಗುತ್ತಿದ್ದ ಶ್ವಾನ, ಅವರಿಗೆ ಪೆನ್ನು,ಮೊಬೈಲ್‌ ತಂದು ಕೊಡುವುದು ಹೀಗೆ ಸಣ್ಣ ಪುಟ್ಟ ಕೆಲಸವನ್ನೂ ಮಾಡುತ್ತಿತ್ತು. ಅದನ್ನು ಮಂಚದ ಮೇಲೆ ಮಲಗಿಸಿ ತಿವಾರಿ ಕೆಳಗೆ ಮಲಗುತ್ತಿದ್ದರು. ಅದಕ್ಕೆ ತುತ್ತು ಉಣಿಸುತ್ತಿದ್ದರು. ಕೆಲವೊಮ್ಮೆ ಊರಿಗೆ ಹೋದಾಗ ಶ್ವಾನದ ಜತೆಗೆ ಮಾತನಾಡಲು ಅನುಕೂಲ ವಾಗುವಂತೆ ಮನೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿಕೊಂಡು, ತಮ್ಮ ಆ್ಯಂಡ್ರಾಯ್ಡ ಮೊಬೈಲ್‌ಗೆ ಸಂಪರ್ಕಿಸಿ ಕೊಂಡಿದ್ದರು.

ಸಹಾಯಕನನ್ನೂ ಹಚ್ಚಿಕೊಂಡಿದ್ದ “ಶೇರ್‌’: ಅನುರಾಗ್‌ ಅವರನ್ನು ಬಿಟ್ಟರೆ ಶ್ವಾನ ಹೆಚ್ಚು ಹಚ್ಚಿಕೊಂಡಿದ್ದು ಜಿಲ್ಲಾಧಿಕಾರಿ ಮನೆಯ ಸಹಾಯಕ ಗಿರಿ ರೆಡ್ಡಿ ಅವರನ್ನು. ಅದನ್ನು ಬೆಂಗಳೂರಿಗೂ ಇವರೇ ಬಿಟ್ಟು ಬಂದಿದ್ದರು. ಅನುರಾಗ್‌ ನಿಧನ ಬಳಿಕ ಬೆಂಗಳೂರಿನಲ್ಲಿದ್ದ ಶ್ವಾನ ಅವರಿಗಾಗಿ ಕಂಬನಿ ಮಿಡಿಯುತ್ತಿತ್ತು. ಕೆಲವು ದಿನ ಊಟವನ್ನೂ ಬಿಟ್ಟಿದ್ದ ಈ ನಾಯಿಯನ್ನು ಸರಿಯಾಗಿ ನೋಡಿಕೊಳ್ಳಲೂ ಯಾರೂ ಇಲ್ಲದಂತಾಗಿತ್ತು. ತಮ್ಮೂರಿಗೆ ಒಯ್ದರೆ ಮಗನ ನೆನಪು ಕಣ್ಮುಂದೆ ಬರುತ್ತದೆ ಎಂದು ತಂದೆ ಬಿ.ಎನ್‌. ತಿವಾರಿ ತಮ್ಮ ಪತ್ನಿಯೊಂದಿಗೆ ಬೆಂಗಳೂರಿನಲ್ಲಿದ್ದ ನಾಯಿಯನ್ನು ವಾರದ ಹಿಂದೆ ಬೀದರಗೆ ತಂದು, ನಗರದ ಹೊರವಲಯದ ತಾದಲಾಪುರದ ಗಿರಿ ರೆಡ್ಡಿ ಮನೆಯಲ್ಲಿ ಬಿಟ್ಟಿದ್ದಾರೆ. ಗಿರಿ ಅವರ ಮನೆಯಲ್ಲೇ ಎರಡು ದಿನ ಉಳಿದಿದ್ದ ತಿವಾರಿ ದಂಪತಿ, ಅನುರಾಗ್‌ ಮತ್ತು ಶ್ವಾನದ ಬಾಂಧವ್ಯವನ್ನು ನೆನೆದು ಕಣ್ಣೀರು ಸುರಿಸಿದ್ದಾರೆ.

“ಶೇರ್‌, ಸಾಬ್‌ ಆಗಯೇ’ (ಸಿಂಹ, ಸರ್‌ ಬಂದಿದ್ದಾರೆ) ಎನ್ನುತ್ತಿದ್ದಂತೆ ಎದ್ದು ನಿಲ್ಲುವ ಶ್ವಾನ ಅವರಿಗಾಗಿ 
ಹುಡುಕಾಡುತ್ತದೆ. ನಂತರ ಮತ್ತೆ ಮೌನಕ್ಕೆ ಜಾರುತ್ತಿದೆ. ಸದ್ಯ ಗಿರಿ ರೆಡ್ಡಿ ಅದರ ಪೋಷಣೆ ಮಾಡುತ್ತಿದ್ದಾರೆ. ಇದಕ್ಕೆ 
ತಗಲುವ ಖರ್ಚನ್ನು ತಾವು ಕೊಡುವುದಾಗಿ ಬಿ.ಎನ್‌. ತಿವಾರಿ ಹೇಳಿದಾಗ, ಬೇಡ, ಸಾಹೇಬರ ನೆನಪಿಗಾಗಿ
ತಾವೇ ಪ್ರೀತಿಯಿಂದ ಸಾಕುವುದಾಗಿ ಗಿರಿ ಹೇಳಿದ್ದಾರೆ.

ಶಶಿಕಾಂತ್ ಬಂಬುಳಗೆ

Advertisement
Advertisement

Udayavani is now on Telegram. Click here to join our channel and stay updated with the latest news.

Next