Advertisement

ಕಾರ್ಮಿಕರ ಮಕ್ಕಳಿಗೆ ಪದವಿ ಜತೆಗೆ ಐಎಎಸ್‌, ಕೆಎಎಸ್‌ ತರಬೇತಿ

11:30 AM Jul 04, 2022 | Shreeram Nayak |

ಬೆಂಗಳೂರು: ಕಟ್ಟಡ ನಿರ್ಮಾಣ ಕಾರ್ಮಿಕರ ಮಕ್ಕಳೂ ದೇಶದ ನಿರ್ಮಾಣ ಕಾರ್ಯದಲ್ಲಿ ಪಾಲುದಾರರಾಗಬೇಕು ಎಂಬ ಉದ್ದೇಶದಿಂದ ಅನೇಕ ಯೋಜನೆಗಳನ್ನು ಜಾರಿಗೆ ತಂದಿರುವ ಸರಕಾರ ಈಗ ಕಟ್ಟಡ ಕಾರ್ಮಿಕರ ಮಕ್ಕಳಿಗೆ ನಾಗರಿಕ ಸೇವಾ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡುವ ಯೋಜನೆಯನ್ನು ಜಾರಿಗೆ ತಂದಿದೆ.

Advertisement

ವಿದೇಶದಲ್ಲಿ ಶಿಕ್ಷಣ, ವಿಮಾನಯಾನ ತರಬೇತಿ, ಉನ್ನತ ವ್ಯಾಸಂಗದ ತರಬೇತಿ ಸಹಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಹಲವು ಯೋಜನೆ ಗಳನ್ನು ಜಾರಿಗೆ ತರಲಾಗಿದೆ. ಅಲ್ಲದೆ, ಪದವಿ ಮುಗಿಸಿದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಯುಪಿಎಸ್‌ಸಿ, ಕೆಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಯೋಜನೆ ಈಗಾಗಲೇ ಚಾಲ್ತಿಯಲ್ಲಿದ್ದು, 700ಕ್ಕೂ ಹೆಚ್ಚು ಅಭ್ಯರ್ಥಿಗಳು ತರಬೇತಿ ಪಡೆದುಕೊಳ್ಳುತ್ತಿದ್ದಾರೆ.

ಈಗ ಕಟ್ಟಡ ಕಾರ್ಮಿಕರ ಮಕ್ಕಳು ತಮ್ಮ ಮೂರು ವರ್ಷದ ಪದವಿ ಕೋರ್ಸ್‌ ಜತೆಗೆ ಐಎಎಸ್‌, ಕೆಎಎಸ್‌ ತರಬೇತಿ ಪಡೆಯುವಂತಹ ಸಂಯೋಜಿತ ಯೋಜನೆ ಯನ್ನು ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಜಾರಿಗೆ ತರಲು ಕಾರ್ಮಿಕ ಇಲಾಖೆ ನಿರ್ಧರಿಸಿದೆ.

ದ್ವಿತೀಯ ಪಿಯುಸಿ ತೇರ್ಗಡೆ ಆಗಿ ಬಿಎ ಅಥವಾ ಬಿಕಾಂ ಪದವಿಯಲ್ಲಿ ಪ್ರವೇಶ ಪಡೆಯುವ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಪದವಿ ಜತೆಗೆ ಮೂರು ವರ್ಷದ ಅವಧಿಗೆ ಐಎಎಸ್‌, ಕೆಎಎಸ್‌ ತರಬೇತಿ ತರಬೇತಿ ನೀಡುವ ಯೋಜನೆ ಇದಾಗಿದ್ದು, ಈ ವರ್ಷ 100 ವಿದ್ಯಾರ್ಥಿಗಳಿಗೆ ಐಎಎಸ್‌, ಕೆಎಎಸ್‌ ತರಬೇತಿ ಕೊಡಿಸುವ ಗುರಿ ಹೊಂದಲಾಗಿದೆ. ಇದರ ಸಂಪೂರ್ಣ ವೆಚ್ಚ ಕಾರ್ಮಿಕ ಕಲ್ಯಾಣ ಮಂಡಳಿ ಭರಿಸಲಿದೆ. ಆಗಸ್ಟ್‌ ತಿಂಗಳಿಂದ ತರಬೇತಿ ಪ್ರಾರಂಭಿಸಲು ಉದ್ದೇಶಿಸಲಾಗಿದೆ.

ಯೋಜನೆಯ ರೂಪುರೇಷೆಗಳು ಸಿದ್ಧಗೊಂಡಿದ್ದು, ತರಬೇತಿ ನೀಡಲು ಖಾಸಗಿ ಕಾಲೇಜು ಆಯ್ಕೆ ಮಾಡಲು ಟೆಂಡರ್‌ ಕರೆಯಲಾಗಿದೆ. ಜುಲೈ ಎರಡನೇ ವಾರದಲ್ಲಿ ಈ ಪ್ರಕ್ರಿಯೆ ಮುಗಿಯಲಿದ್ದು, ಆಗಸ್ಟ್‌ನಿಂದ ತರಬೇತಿ ಆರಂಭವಾಗಲಿದೆ. ಸಾಮಾನ್ಯವಾಗಿ ನಾಗರಿಕ ಸೇವಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪದವಿ ಬಳಿಕ ತರಬೇತಿಗೆ ಆಕಾಂಕ್ಷಿಗಳು ಮುಂದಾಗುತ್ತಾರೆ. ಪದವಿ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡಿದರೆ ಸಮಯ ಮತ್ತು ವಯೋಮಿತಿ ಉಳಿಸಿದಂತಾಗುತ್ತದೆ. ಹಾಗಾಗಿ, ಪದವಿ ಜತೆಗೆ ಐಎಎಸ್‌, ಕೆಎಎಸ್‌ ತರಬೇತಿ ನೀಡುವ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಅಧಿಕಾರಿಗಳು ಹೇಳುತ್ತಾರೆ.

Advertisement

ಒಬ್ಬ ಅಭ್ಯರ್ಥಿಗೆ ವಾರ್ಷಿಕ
6 ಲಕ್ಷ ರೂ. ವೆಚ್ಚ
ಈ ತರಬೇತಿಗೆ ಅರ್ಜಿ ಸಲ್ಲಿಸಲು ಜುಲೈ 5 ಕೊನೆ ದಿನವಾಗಿದೆ. ಮೆರಿಟ್‌ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. 2021-22ನೇ ಶೈಕ್ಷಣಿಕ ವರ್ಷದಲ್ಲಿ ಪಿಯುಸಿ ಪಾಸ್‌ ಆಗಿ ಮೂರು ವರ್ಷದ ಬಿ.ಎ., ಬಿ.ಕಾಂ. ಪದವಿಗೆ ಪ್ರವೇಶ ಪಡೆದ ಕಟ್ಟಡ ಕಾರ್ಮಿಕರ ಮಕ್ಕಳು ಅರ್ಜಿ ಸಲ್ಲಿಸಬಹುದು. ಅವರ ತಂದೆ ಅಥವಾ ತಾಯಿ ಕಟ್ಟಡ ಕಾರ್ಮಿಕರಾಗಿದ್ದು, ಮಂಡಳಿಯಲ್ಲಿ ನೋಂದಾಯಿಸಿಕೊಂಡಿರಬೇಕು. ತರಬೇತಿಗಾಗಿ ಹಾಸ್ಟೆಲ್‌ ಹಾಗೂ ಇನ್ನಿತರ ಸೌಲಭ್ಯಗಳಿರುವ ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ತರಬೇತಿ ನೀಡಲಾಗುತ್ತದೆ ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶ್ರಮಿಕ ವರ್ಗದ ಏಳಿಗೆಗೆ ನಮ್ಮ ಸರಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಂತೆ, ಕಟ್ಟಡ ನಿರ್ಮಾಣ ಕಾರ್ಮಿಕರ ಮಕ್ಕಳು ಕೂಡ ನಾಗರಿಕ ಸೇವೆಗಳಿಗೆ ಆಯ್ಕೆಯಾಗಿ ಕಾರ್ಯಾಂಗದ ಮೂಲಕ ದೇಶ ನಿರ್ಮಾಣದಲ್ಲಿ ಪಾಲುದಾರರು ಆಗಬೇಕು ಎಂಬ ಉದ್ದೇಶದಿಂದ ಐಎಎಸ್‌, ಕೆಎಎಸ್‌ ತರಬೇತಿ ನೀಡುವ ಈ ಯೋಜನೆ ಜಾರಿಗೆ ತರಲಾಗಿದೆ.
-ಶಿವರಾಮ ಹೆಬ್ಬಾರ್‌, ಕಾರ್ಮಿಕ ಸಚಿವರು

-ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next