Advertisement

ಐಎಎಫ್ ಗೆ ಪ್ರಚಂಡ ಬಲ; ರಾಜಸ್ಥಾನದ ಜೋಧ್‌ಪುರದಲ್ಲಿ 15 ಹಗುರ ಹೆಲಿಕಾಪ್ಟರ್‌ಗಳ ಸೇರ್ಪಡೆ

12:38 AM Oct 04, 2022 | Team Udayavani |

ಜೋಧಪುರ: ದೇಶದ ಭದ್ರತೆಗೆ ಯಾವತ್ತೂ ಸವಾಲಾಗಿರುವ ಪಾಕಿಸ್ಥಾನ ಮತ್ತು ಚೀನ ವಿರುದ್ಧ ಮತ್ತಷ್ಟು ಎಚ್ಚರಿಕೆಯಿಂದ ನಿಗಾ ವಹಿಸಲು ಭಾರತೀಯ ವಾಯುಪಡೆ (ಐಎಎಫ್)ಗೆ ಮತ್ತಷ್ಟು ಸುಲಭ ವಾಗಲಿದೆ. ಅದಕ್ಕಾಗಿ ಬೆಂಗಳೂರಿನ ಹಿಂದುಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ನಿರ್ಮಿಸಿದ ಹಗುರ ಹೆಲಿಕಾಪ್ಟರ್‌ (ಎಲ್‌ಸಿಎಚ್‌)ನ ಮೊದಲ ಕಂತನ್ನು ರಾಜಸ್ಥಾನದ ಜೋಧ್‌ಪುರದಲ್ಲಿ ಸೋಮವಾರ ಹಸ್ತಾಂತರಿಸಲಾಗಿದೆ.

Advertisement

ಸದ್ಯ ಒಟ್ಟು 15 ಹೆಲಿಕಾಪ್ಟರ್‌ಗಳನ್ನು ನೀಡಲಾಗಿದ್ದು, ಕೇಂದ್ರ ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಅವುಗಳಿಗೆ “ಪ್ರಚಂಡ’ ಎಂದು ಹೆಸರನ್ನೂ ಇರಿಸಿದ್ದಾರೆ.

1999ರ ಕಾರ್ಗಿಲ್‌ ಯುದ್ಧದ ಸಂದರ್ಭದಲ್ಲಿ ಅತೀ ಎತ್ತರದ ಸ್ಥಳದಲ್ಲಿ ಕಾರ್ಯನಿರ್ವಹಿಸಬಲ್ಲ ಸೂಕ್ತ ಹೆಲಿಕಾಪ್ಟರ್‌ಗಳು ದೇಶದ ರಕ್ಷಣ ಪಡೆಗಳ ಬಳಿ ಇರಲಿಲ್ಲ. ಇದೀಗ “ಪ್ರಚಂಡ’ ಹೆಲಿಕಾಫ್ಟರ್‌ಗಳು ಅದರ ಕೊರತೆಯನ್ನು ನೀಗಿಸಿವೆ.

ಈ ವೇಳೆ ಮಾತನಾಡಿದ ರಾಜನಾಥ್‌ ಸಿಂಗ್‌, “ಎಲ್ಲ ಹವಾಮಾನಗಳು, ಎಲ್ಲ ಪರಿಸ್ಥಿತಿಗಳಲ್ಲೂ “ಪ್ರಚಂಡ’ ಹೆಲಿಕಾಫ್ಟರ್‌ಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸ ಬಲ್ಲವು. ಇದು ಶ್ರೇಷ್ಠತೆಯಲ್ಲಿ ಜಗತ್ತಿನಲ್ಲೇ ಮುಂಚೂಣಿ ಯಲ್ಲಿ ನಿಲ್ಲಲಿದೆ.

“ಪ್ರಚಂಡ’ ಹೆಲಿಕಾಫ್ಟರ್‌ನಲ್ಲಿ ಅಳವಡಿ ಸಿರುವ ಮಿಸೈಲ್‌ಗ‌ಳು ಮತ್ತು ಇತರ ಶಸ್ತ್ರಾಸ್ತ್ರಗಳು ಅತಿ ಎತ್ತರದ ಪ್ರದೇಶದದಲ್ಲಿ ಕೂಡ ಶತ್ರು ಪಡೆಯ ಯೋಧರು, ಟ್ಯಾಂಕರ್‌ಗಳು, ಬಂಕರ್‌ಗಳು, ಡ್ರೋನ್‌ಗಳನ್ನು ಮತ್ತು ಇತರ ಯುದ್ಧ ಸಾಮಾಗ್ರಿಗಳನ್ನು ಯಶಸ್ವಿ ಯಾಗಿ ಹೊಡೆದುರುಳಿಸಬಲ್ಲವು,’ ಎಂದು ಹೇಳಿದರು.
“ಭಾರತದ ಸಾರ್ವಭೌಮತ್ವವನ್ನು ಕಾಪಾಡುವ ನಿಟ್ಟಿನಲ್ಲಿ ಭಾರತೀಯ ವಾಯು ಪಡೆ ಪ್ರಮುಖ ಪಾತ್ರವನ್ನು ವಹಿಸಿದೆ. “ಪ್ರಚಂಡ’ ಹೆಲಿಕಾಫ್ಟರ್‌ಗಳ ಸೇರ್ಪಡೆಯಿಂದ ಅದರ ಬಲ ಮತ್ತಷ್ಟು ಹೆಚ್ಚಲಿದೆ,’ ಎಂದರು. ಚೀನ ಜತೆಗೆ ಗಡಿ ತಂಟೆ ಹೊಂದಿರುವ ಲಡಾಖ್‌ ಪ್ರದೇಶದಲ್ಲಿ ಮತ್ತು ಪಾಕಿಸ್ಥಾನ ಗಡಿ ಪ್ರದೇಶದಲ್ಲಿ ಈ ಅತ್ಯಾಧುನಿಕ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗುತ್ತದೆ.

Advertisement

ದೇಶಿಯ ತಂತ್ರಜ್ಞಾನ: “ಪ್ರಚಂಡ’ ಹೆಲಿಕಾಫ್ಟರ್‌ಗಳನ್ನು ಹಿಂದೂಸ್ತಾನ ಏರೋನಾಟಿಕ್ಸ್‌ ಲಿಮಿಟೆಡ್‌ ದೇಶಿಯವಾಗಿ ನಿರ್ಮಿಸಿದೆ. ಎರಡು ಎಂಜಿನ್‌ಗಳನ್ನು ಹೊಂದಿರುವ ಎಲ್‌ಸಿಎಚ್‌, 5.8 ಟನ್‌ ತೂಕವಿದೆ. ಇದರಲ್ಲಿ ಮಿಸೈಲ್‌ಗ‌ಳು, 20ಎಂಎಂ ಟುರ್ರೆಟ್‌ ಗನ್‌, ರಾಕೆಟ್‌ ವ್ಯವಸ್ಥೆ ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಅಳವಡಿಸಲಾಗಿದೆ. ಇವು ರಾತ್ರಿ ಸಮಯದಲ್ಲೂ ಯಶಸ್ವಿಯಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ.

ಹಂತ-ಹಂತವಾಗಿ:
95 ಹೆಲಿಕಾಫ್ಟರ್‌ಗಳು ಭೂಸೇನೆಗೆ, 65 ಭಾರತೀಯ ವಾಯು ಪಡೆಗೆ ಸೇರ್ಪಡೆಯಾಗಲಿವೆ. ಹಂತ-ಹಂತವಾಗಿ ಇವುಗಳನ್ನು ಎಚ್‌ಎಎಲ್‌ ಪೂರೈಸಲಿದೆ.

ಜೋಧಪುರದಲ್ಲಿ ನಡೆದ ಸಮಾರಂಭದಲ್ಲಿ ಐಎಎಫ್ ಮುಖ್ಯಸ್ಥ ಏರ್‌ಚೀಫ್ ಮಾರ್ಷಲ್‌ ವಿ.ಆರ್‌.ಚೌಧರಿ, ರಕ್ಷಣ ಪಡೆಗಳ ಮುಖ್ಯಸ್ಥ ಅನಿಲ್‌ ಚೌಹಾಣ್‌ ಸೇರಿದಂತೆ ಹಿರಿಯ ಮಿಲಿಟರಿ ಅಧಿಕಾರಿಗಳು ಉಪಸ್ಥಿತರಿದ್ದರು.

ಏನೇನು ವಿಶೇಷಗಳು
ರಾತ್ರಿ ಸಮಯದಲ್ಲೂ ಯಶಸ್ವಿಯಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ
ಎಲ್‌ಸಿಎಚ್‌ಗಳಲ್ಲಿ ಮಿಸೈಲ್‌ಗ‌ಳು, 20ಎಂಎಂ ಟುರ್ರೆಟ್‌ ಗನ್‌, ರಾಕೆಟ್‌ ವ್ಯವಸ್ಥೆ ಅಳವಡಿಕೆ.
ಅತೀ ಎತ್ತರದ ಪ್ರದೇಶದದಲ್ಲಿ ಶತ್ರುಗಳ ಸೇನಾ ಬಲ ಕುಗ್ಗಿಸುವ ಸಾಮರ್ಥ್ಯ ಹೊಂದಿದೆ.

ಎಲ್ಲಿ ನಿಯೋಜನೆ?
ವಿಶೇಷವಾಗಿ ಚೀನ ಜತೆ ಗಡಿತಂಟೆ ಹೊಂದಿರುವ ಲಡಾಖ್‌ನಲ್ಲಿ
ಪಾಕಿಸ್ಥಾನ ಜತೆಗಿನ ಗಡಿ ಪ್ರದೇಶದಲ್ಲಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next