Advertisement

ಯುದ್ಧ ವಿಮಾನಗಳ ಅವಘಡ: ಬೆಳಗಾವಿಯ ಪೈಲಟ್‌ ಹುತಾತ್ಮ

01:16 AM Jan 29, 2023 | Team Udayavani |

ಬೆಳಗಾವಿ/ಹೊಸದಿಲ್ಲಿ: ಮಧ್ಯಪ್ರದೇಶದ ಗ್ವಾಲಿಯರ್‌ ಸಮೀಪ ಸುಖೋಯ್‌ 30 ಎಂಕೆಐ ಹಾಗೂ ಮಿರಾಜ್‌ 2000 ಯುದ್ಧ ವಿಮಾನಗಳ ನಡುವೆ ಶನಿವಾರ ಬೆಳಗ್ಗೆ ಸಂಭವಿಸಿದ ಅಪಘಾತದಲ್ಲಿ ಬೆಳಗಾವಿಯ ಪೈಲಟ್‌ ಹುತಾತ್ಮರಾಗಿದ್ದಾರೆ.

Advertisement

ಬೆಳಗಾವಿಯ ಗಣೇಶಪುರದ ಹನುಮಂತರಾವ್‌ ಸಾರಥಿ (34) ಹುತಾತ್ಮರಾದ ವಿಂಗ್‌ ಕಮಾಂಡರ್‌. ಅವರಿಗೆ ತಂದೆ, ತಾಯಿ, ಪತ್ನಿ, ಪುತ್ರ, ಪುತ್ರಿ ಇದ್ದಾರೆ.

ಹನುಮಂತರಾವ್‌ ಸಾರಥಿ 2009ರಿಂದ ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರ ತಂದೆ ರೇವಣಸಿದ್ದಪ್ಪ ಸೇನೆಯಲ್ಲಿ ಕ್ಯಾಪ್ಟನ್‌ ಆಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಸಹೋದರ ಪ್ರವೀಣ ಕೂಡ ಭಾರತೀಯ ವಾಯುಪಡೆಯಲ್ಲಿ ಗ್ರೂಪ್‌ ಕ್ಯಾಪ್ಟನ್‌ ಆಗಿದ್ದಾರೆ.

ನಡೆದುದೇನು?
ಶನಿವಾರ ಬೆಳಗ್ಗೆ 5.30ರ ವೇಳೆಗೆ ಎರಡೂ ವಿಮಾನಗಳು ದೈನಂದಿನ ತರಬೇತಿ ಹಾರಾಟಕ್ಕೆಂದು ಗ್ವಾಲಿಯರ್‌ನ ವಾಯುನೆಲೆಯಿಂದ ಟೇಕ್‌ಆಫ್ ಆಗಿದ್ದವು. ವಿಂಗ್‌ ಕಮಾಂಡರ್‌ ಹನುಮಂತ ರಾವ್‌ ಅವರು ಮಿರಾಜ್‌ 2000 ವಿಮಾನವನ್ನು ಮುನ್ನಡೆಸುತ್ತಿದ್ದರೆ ಸುಖೋಯ್‌ನಲ್ಲಿ ಇಬ್ಬರು ಪೈಲಟ್‌ಗಳಿದ್ದರು. ಏಕಾಏಕಿ ಎರಡೂ ವಿಮಾನಗಳು ಪತನಗೊಂಡಿದ್ದು, ಸುಖೋಯ್‌ನಲ್ಲಿದ್ದ ಇಬ್ಬರು ಸುರಕ್ಷಿತವಾಗಿ ಹೊರಗೆ ಹಾರಿದ ಕಾರಣ ಸಣ್ಣಪುಟ್ಟ ಗಾಯಗಳೊಂದಿಗೆ ಬದುಕುಳಿದಿದ್ದಾರೆ.

ಮಿರಾಜ್‌ನಲ್ಲಿದ್ದ ಹನುಮಂತ ರಾವ್‌ ಕೊನೆಯುಸಿರೆಳೆದಿದ್ದಾರೆ. ಒಂದು ವಿಮಾನದ ಅವಶೇಷಗಳು ಮಧ್ಯಪ್ರದೇಶದ ಮೊರೆನಾದಲ್ಲಿ ಬಿದ್ದಿದ್ದು, ಮತ್ತೂಂದು ವಿಮಾನದ ಅವಶೇಷ 100 ಕಿ.ಮೀ. ದೂರದಲ್ಲಿ ರಾಜಸ್ಥಾನದ ಭರತ್‌ಪುರದಲ್ಲಿ ಪತ್ತೆಯಾಗಿವೆ.

Advertisement

ರಷ್ಯಾ ನಿರ್ಮಿತ ಸುಖೋಯ್‌-30ಎಂಕೆಐ ಜೆಟ್‌ ಮತ್ತು ಫ್ರಾನ್ಸ್‌ ನಿರ್ಮಿತ ಮಿರಾಜ್‌-2000 ಯುದ್ಧ ವಿಮಾನಗಳು ಹಾರಾಟದ ವೇಳೆ ಪರಸ್ಪರ ಢಿಕ್ಕಿ ಹೊಡೆದು ಈ ದುರಂತ ಸಂಭವಿಸಿರಬಹುದು ಎಂದು ರಕ್ಷಣ ತಜ್ಞರು ಅಂದಾಜಿಸಿದ್ದಾರೆ. ಘಟನೆಗೆ ಕಾರಣವೇನು ಎಂಬ ಕುರಿತು ವಾಯುಪಡೆಯಿಂದ ಅಧಿಕೃತ ಮಾಹಿತಿ ಬಂದಿಲ್ಲ. ವಾಯುಪಡೆಯು ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದೆ. ವಿಂಗ್‌ ಕಮಾಂಡರ್‌ ಹನುಮಂತ ರಾವ್‌ ಅವರ ಸಾವಿಗೆ ರಕ್ಷಣ ಸಚಿವ ರಾಜನಾಥ್‌ ಸಿಂಗ್‌, ಮಧ್ಯಪ್ರದೇಶ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ ಸೇರಿದಂತೆ ಅನೇಕರು ಕಂಬನಿ ಮಿಡಿದಿದ್ದಾರೆ.

ಇಂದು ಹುಟ್ಟೂರಿಗೆ ಪಾರ್ಥಿವ ಶರೀರ
ವಿಂಗ್‌ ಕಮಾಂಡರ್‌ ಹನುಮಂತರಾವ್‌ ಗ್ವಾಲಿಯರ್‌ನಲ್ಲೇ ನೆಲೆಸಿದ್ದರು. ಅವರ ಪಾರ್ಥಿವ ಶರೀರ ರವಿವಾರ ವಿಶೇಷ ವಿಮಾನದಲ್ಲಿ ಗಣೇಶಪುರಕ್ಕೆ ಬರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next