Advertisement

ನಾನಿರೋದೇ ನಿನ್ನ ಕಣ್ಣೀರು ಒರೆಸೋಕೆ…

06:46 PM Jun 03, 2019 | mahesh |

ಹಾಯ್‌ ಮುದ್ದು,
ಅತ್ತು ಅತ್ತು ಆ ನಿನ್ನ ಗಿಣಿಮೂಗು ಕೆಂಪಾಗಿರ್ಬೇಕಲ್ವಾ? ಬಿರುಬೇಸಿಗೇಲಿ ಊರ ಬಾವಿಗೂ ನಿನ್ನ ಕಣ್ಣಿಗೂ ಒಂದು ಪೈಪು ಸಿಕ್ಕಿಸಿದ್ದರೆ ಆಧುನಿಕ ಭಗೀರಥೆ ಅನ್ನೋ ಬಿರುದನ್ನು ನಿಂಗೇ ಕೊಡ್ತಿದ್ದೆ. ಹೋಗಲಿ ಬಿಡು, ಈ ಸಲ ಅಳ್ಳೋವಾಗಾದ್ರೂ ನನ್ನ ನೆನೆಸಿಕೊಂಡ್ರೋ ಇಲ್ವೋ?

Advertisement

ಹಾಗೆ ನೋಡಿದ್ರೆ, ಜಗಳ ಅನ್ನೋದು ಬಿಟ್ರೆ ಅಳುವೇ ನನ್ನ ನಿನ್ನ ಒಟ್ಟಿಗೆ ಕಟ್ಟಿಹಾಕಿದ್ದು. ನೀನೇನಾದ್ರೂ ಸಣ್ಣ ತಪ್ಪು ಮಾಡಿದಾಗ ನಾನು ಅದೇ ಕಾರಣಕ್ಕೆ ಬೈದರೆ ನಿನ್ನ ಅಸ್ತ್ರ ಈ ಅಳು! ಆನೇಲೆ ನಾನು ಸಾವಿರ ಸಲ ಕ್ಷಮೆ ಕೇಳ್ಳೋವರೆಗೂ ನಿನಗೆ ಸಮಾಧಾನವಾಗಲ್ಲ. ಅಷ್ಟಾದ ಮೇಲೆ ಸ್ವಲ್ಪ ತರಲೆ ಕೀಟಲೆ ಮಾಡಿದ್ರೇನೇ, “ಇದೇ ಲಾಸ್ಟ್‌ ಛಾನ್ಸ್‌, ಇನ್ಮೆಲೆ ಹೀಗೆ ಮಾಡಿದ್ರೆ ಕಾಲಿಗೆ ಬಿದ್ರೂ ನಿನ್ಹತ್ರ ಬರಲ್ಲ’ ಅನ್ನೋ ಹುಸಿ ಮಾತನ್ನಾಡಿ ಒಂದು ಕಿರುನಗೆ ನಕ್ಕ ಮೇಲೇನೇ ಪ್ರೀತಿಯ ಬೆಳಕು ನಮ್ಮಲ್ಲಿ.

ನಿಂಗೆ ನೆನಪಿದ್ಯಾ? ಅಳು ಅಂದಾಗೆಲ್ಲ ನಂಗೆ ನೆನಪಾಗೋದು ಆ ದಿನ! ಮೊದಲ ಸಲ ನಾವಿಬ್ರೂ ಒಟ್ಟೊಟ್ಟಿಗೆ ಅತ್ತಿದ್ದು. ನಾ ನಿನ್ನ ಬಿಡಲಾರದೇ, ಇತ್ತ ಫೋನು ಇಡಲಾರದೆ ಭವಿಷ್ಯದ ನೂರೆಂಟು ಸವಾಲು-ಚಿಂತೆಗಳನ್ನೆಲ್ಲ ನೆನೆದು ಆ ದಿನ ದುಃಖ ತಡೀಲಾಗದೆ ಗೋಳ್ಳೋ ಅಂತ ಒಂದೇ ಸಮನೆ ಅತ್ತಿದ್ದೆ. ಅದಾದಮೇಲೆ, ನೀನು ಊರಿಗೆ ತೆರಳ್ಳೋವಾಗ ನಾವಿಬ್ರೂ ತುಂಬಾ ದಿನ ಸಿಗಲ್ಲ ಅಂತ ತಿಳಿದು, ಆ ದೂರ ನೆನೆದು ಬಿಕ್ಕಿ ಬಿಕ್ಕಿ ಅತ್ತಾಗ ನಿನ್ನ ಕಣ್ಣು ನಾನೂ, ನನ್ನ ಕಣ್ಣು ನೀನೂ ಒರೆಸಿ ಸಮಾಧಾನ ಮಾಡಿಕೊಂಡಿದ್ವಿ.

ಪ್ರಪಂಚದಲ್ಲಿ ನಿಂಗೇ ಯಾರೇನೇ ಹೇಳಲಿ, ನಾ ನಿನ್ನ ಕೈ ಬಿಡಲ್ಲ. ನಾ ನಿನ್ನ ಪರ ವಾದಿಸುವ ವಕೀಲ ಅಂದ್ಕೊ. ಹಾಗೇ ನಿನ್ನ ಅಳಿಸೋ ಹಕ್ಕು ಇರೋದು ಕೂಡಾ ನಂಗೆ ಮಾತ್ರ. ನೀನು ಅತ್ತು ನನ್ನ ನೆರಳನ್ನೇ ಹಂಬಲಿಸ್ಬೇಕು, ಪುಟ್ಟ ಪುಟ್ಟ ಕೈಯಿಂದ ಕಣ್ಣುಜ್ಜುತ್ತ ಮೂಗು ಕೆಂಪಗೆ ಮಾಡಿ ನನ್ನತ್ತ ಬರ್ಬೇಕು. ನಾ ನಿನ್ನ ಬಳಿ ಒಂದು ಸವಿಮುತ್ತಿನ ಲಂಚ ಕೇಳ್ಬೇಕು ಅಂತೆಲ್ಲ ಆಸೆ. ನಿನ್ನ ಯಾರೇ ಅಲ್ಸಿದ್ರೂ ಹೆದ್ರಬೇಡ. ನಾ ನಿನ್ನ ಜೊತೆ ಯಾವತ್ತೂ ಇರ್ತೀನಿ. ನೀನು ತಪ್ಪು ಮಾಡೋಕೆ ಸಾಧ್ಯಾನೇ ಇಲ್ಲ. ಅಷ್ಟಕ್ಕೂ ನಾ ನಿನ್ನ ಬದುಕಿಗೆ ಬಂದದ್ದು ನಿನ್ನ ಕಣ್ಣೀರು ಒರೆಸೋಕೆ, ನೆನಪಿರಲಿ.

ಅರ್ಜುನ್‌ ಶೆಣೈ

Advertisement
Advertisement

Udayavani is now on Telegram. Click here to join our channel and stay updated with the latest news.

Next