Advertisement
ನಿಮ್ಮ ಜೀವನದಲ್ಲೇ ಮೊದಲ ಬಾರಿಗೆ ಚುನಾವಣ ಕಣಕ್ಕಿಳಿದಿದ್ದೀರಿ. ಏನನ್ನಿಸುತ್ತಿದೆ?ತುಂಬ ಹೆಮ್ಮೆ ಹಾಗೂ ಖುಷಿ ಆಗುತ್ತಿದೆ. ಮೊದಲ ಬಾರಿ ಚುನಾವಣ ಕಣಕ್ಕೆ ಇಳಿದಿರುವುದರಿಂದ ಜನರ ಆಶೀರ್ವಾದ ಬಹಳಷ್ಟಿದೆ. ಜನ ನಮ್ಮ ಕುಟುಂಬ ಮೇಲೆ ಇಟ್ಟಿರುವ ನಂಬಿಕೆ
ಯಿಂದಾಗಿ ಬಹಳ ಸಂತೋಷ ವಾಗುತ್ತಿದೆ.
ಚಿಕ್ಕೋಡಿ ಲೋಕಸಭೆ ಚುನಾವಣೆಗೆ ಅವಕಾಶ ಸಿಕ್ಕ ಬಳಿಕ ಈ ಸುವರ್ಣಾ ವಕಾಶವನ್ನು ಬಿಡಬಾರದು ಎಂಬ ಗಟ್ಟಿ ನಿರ್ಧಾರ ಮಾಡಿದೆ. ಜನಸೇವೆ ಮಾಡಬೇಕೆಂಬ ಅಚಲ ನಿರ್ಧಾರ ಮೊದಲಿನಿಂದಲೂ ಇದೆ. ಇದಕ್ಕೆ ನಮ್ಮ ತಂದೆಯವರಾದ ಸತೀಶ ಜಾರಕಿಹೊಳಿ ಅವರ ಪ್ರೇರಣೆ ಬಹಳಷ್ಟಿದೆ. ರಾಜಕೀಯದಲ್ಲಿ ನಿಮ್ಮ ಗಾಡ್‌ಫಾದರ್ ಯಾರು ಮತ್ತು ಯಾಕೆ?
ತಂದೆಯೇ ನನ್ನ ರಾಜಕಾರಣದ ಗಾಡ್‌ಫಾದರ್. ಅವರ ಜನಪರ ಕಾಳಜಿ, ದೀನ ದಲಿತರ ಬಗೆಗಿನ ಕಳಕಳಿ, ಬಡವರಿಗೆ ಸಲ್ಲಿಸುತ್ತಿರುವ ನಿಸ್ವಾರ್ಥ ಸೇವೆ ಹಾಗೂ ಜನರ ನೋವಿಗೆ ಸ್ಪಂದಿಸುತ್ತಿರುವುದೇ ನಮಗೆ ಮೂಲ ಪ್ರೇರಣೆಯಾಗಿದೆ.
Related Articles
ನನಗೆ ಮೊದಲಿಂದಲೂ ಸಾಮಾಜಿಕ ಸೇವೆ ಮಾಡಬೇಕೆಂಬ ಆಸೆ ಇತ್ತು. ತಂದೆಯವರ ಮೇಲೆ ಹೈಕಮಾಂಡ್ ಹಾಗೂ ಪಕ್ಷದ ವರಿಷ್ಠರು ಇಟ್ಟಿರುವ ವಿಶ್ವಾಸ, ಯುವ ಪೀಳಿಗೆಗೆ ರಾಜಕೀಯದಲ್ಲಿ ಪ್ರಾಮುಖ್ಯ ನೀಡಬೇಕು ಎಂಬ ಕಾರಣಕ್ಕೆ ಚುನಾವಣ ಕಣಕ್ಕೆ ಇಳಿದಿದ್ದೇನೆ.
Advertisement
ನಿಮ್ಮ ಕ್ಷೇತ್ರದ ಜನ ನಿಮಗೆ ಯಾವ ಕಾರಣಕ್ಕಾಗಿ ಮತ ಹಾಕಬೇಕು?ಕಾಂಗ್ರೆಸ್ ಸರಕಾರದ ಪಂಚ ಗ್ಯಾರಂಟಿಗಳು ಜನರ ಮನೆ ಮನೆಗೆ ತಲುಪಿವೆ. ತಂದೆ ಸತೀಶ ಜಾರಕಿಹೊಳಿ ಮಾಡುತ್ತಿರುವ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಇನ್ನಷ್ಟು ಮುಂದುವರಿಸಲು ನನ್ನನ್ನು ಆಶೀರ್ವದಿಸಬೇಕು. ಈ ಚುನಾವಣೆಯನ್ನು ನೀವು ಹೇಗೆ ಗೆಲ್ಲುತ್ತೀರಿ? ಪ್ರಮುಖ ಕಾರಣಗಳನ್ನು ತಿಳಿಸಿ.
ಕ್ಷೇತ್ರದ ಜನರ ಅಶೀರ್ವಾದ ಇದೆ. ತಂದೆಯವರು ಮಾಡಿದ ಅಭಿವೃದ್ಧಿ ಕೆಲಸಗಳು ನನ್ನ ನೆರವಿಗೆ ಬರುತ್ತವೆ. ಮುಖ್ಯವಾಗಿ ಕ್ಷೇತ್ರದ ಜನರ ಜತೆಗೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದೇನೆ. ಭರವಸೆಯನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದ ಸರಕಾರ, ಕಾಂಗ್ರೆಸ್ ಕಾರ್ಯಕರ್ತರ ಸಕ್ರಿಯ ಸಂಘಟನೆ. ನಿಮ್ಮ ಕನಸೇನು? ಗೆದ್ದು ದಿಲ್ಲಿಗೆ ಹೋಗಿ ಏನು ಮಾಡಬೇಕು ಎಂದಿದ್ದೀರಿ?
ಇಡೀ ಕ್ಷೇತ್ರವನ್ನು ಸಂಪೂರ್ಣವಾಗಿ ಅಭಿವೃದ್ಧಿ ಮಾಡುವುದು. ಸಂಪೂರ್ಣವಾಗಿ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸುವುದು. ಹಳ್ಳಿ ಹಳ್ಳಿಗಳಿಗೂ ಸರಕಾರದ ಯೋಜನೆಗಳನ್ನು ತಲುಪಿಸುವುದು. ಗೆದ್ದರೆ ನಿಮ್ಮ ಲೋಕಸಭಾ ಕ್ಷೇತ್ರಕ್ಕೆ ಮಾಡುವ ಮೊದಲ ಕೆಲಸ ಏನು?
ಚಿಕ್ಕೋಡಿ ಕ್ಷೇತ್ರದ ಮಹಿಳಾ ಸ್ವಸಹಾಯ ಸಂಘಗಳನ್ನು ಇನ್ನಷ್ಟು ಬಲಪಡಿಸುವುದು. ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಸುವುದು. ನಿಮ್ಮ ಕ್ಷೇತ್ರದ ಭವಿಷ್ಯಕ್ಕೆ ಇರುವ 5 ಕನಸುಗಳೇನು? ಅವುಗಳನ್ನು ಹೇಗೆ ಈಡೇರಿಸುತ್ತೀರಿ?
ಕ್ಷೇತ್ರದಲ್ಲಿ ಉದ್ಯೋಗ ಅವಕಾಶ ಕಲ್ಪಿಸುವುದು, ರೈತರಿಗೆ ನೀರಾವರಿ ಸೌಲಭ್ಯ ಒದಗಿಸುವುದು, ಶಾಲಾ-ಕಾಲೇಜು ದಿನಗಳಲ್ಲಿಯೇ ಮಕ್ಕಳಿಗೆ ಕ್ರೀಡಾ ಸೌಲಭ್ಯ ನೀಡುವುದು, ಆರೋಗ್ಯ ಸೇವೆಗೆ ಒತ್ತು ನೀಡುವುದು ನನ್ನ ಪ್ರಮುಖ ಗುರಿಗಳು. ಚುನಾವಣೆ ವೇಳೆ ಅನೇಕ ಹಿರಿಯ ನಾಯಕರನ್ನು ನೀವು ಸಂಭಾಳಿಸಬೇಕಾಗುತ್ತದೆ. ಹೇಗೆ ನಿಭಾಯಿಸುತ್ತೀರಿ?
ಎಲ್ಲ ಹಿರಿಯರ ಆಶೀರ್ವಾದ ಪಡೆಯುತ್ತಿದ್ದೇನೆ. ಹಿರಿಯರು ನೀಡಿದ ಜವಾಬ್ದಾರಿಯನ್ನು ವ್ಯವಸ್ಥಿತವಾಗಿ ನಿಭಾಯಿಸುತ್ತೇನೆ. – ಕೇಶವ ಆದಿ