Advertisement

ಮತದಾರನ ತೀರ್ಪನ್ನು ಗೌರವಯುತವಾಗಿ ಒಪ್ಪುತ್ತೇವೆ, ನಾನೇ ಸೋಲಿನ ಹೊಣೆ ಹೊರುತ್ತೇನೆ: ಡಿಕೆಶಿ

06:49 PM Nov 10, 2020 | keerthan |

ಬೆಂಗಳೂರು: ಎರಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮತದಾರ ಕೊಟ್ಟ ತೀರ್ಪನ್ನು ನಾವು ಗೌರವಯುತವಾಗಿ ಒಪ್ಪುತ್ತೇವೆ. ಪಕ್ಷದ ಅಧ್ಯಕ್ಷನಾಗಿ ಈ ಸೋಲಿನ ಹೊಣೆ ನಾನು ಹೊರುತ್ತೇನೆಯೇ ಹೊರತು, ಬೇರೆಯವರ ಮೇಲೆ ಹಾಕುವುದಿಲ್ಲ. ಮುಂದಿನ ದಿನಗಳಲ್ಲಿ ಪಕ್ಷ ಸಂಘಟಿಸಿ ಸರ್ಕಾರದ ವೈಫಲ್ಯದ ವಿರುದ್ಧ ಹೋರಾಟ ಮುಂದುವರಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.

Advertisement

ಉಪಚುನಾವಣೆ ಸೋಲಿನ ನಂತರ ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಈ ಫಲಿತಾಂಶ ಹೇಗಾಯಿತು, ಯಾಕಾಯಿತು ಎಂಬುದನ್ನು ಮುಂದಿನ ದಿನಗಳಲ್ಲಿ ಚರ್ಚೆ ಮಾಡುತ್ತೇವೆ. ಎಲ್ಲಿ ಏನೇನು ಸರಿ ಮಾಡಿಕೊಳ್ಳಬೇಕೋ ಅದನ್ನು ಮಾಡುತ್ತೇವೆ ಎಂದರು.

ಈ ಚುನಾವಣೆಯಲ್ಲಿ ಸೋತಿದ್ದೇವೆ ಎಂದು ನಾನಾಗಲಿ, ಪಕ್ಷವಾಗಲಿ ಹಿಂಜರಿಯುವ ಅಗತ್ಯವಿಲ್ಲ. ಉಪಚುನಾವಣೆಯಲ್ಲಿ ಅಧಿಕಾರದಲ್ಲಿರುವ ಪಕ್ಷಕ್ಕೆ ಶೇ.15ರಷ್ಟು ಅನುಕೂಲವಾಗುವ ಅನುಭವ ನಮಗಿದೆ. ನಾವೂ ಹಿಂದೆ ಬಳ್ಳಾರಿ, ಗುಂಡ್ಲುಪೇಟೆ, ನಂಜನಗೂಡು ಉಪಚುನಾವಣೆಯಲ್ಲಿ ಗೆದ್ದರೂ ನಂತರ ಚುನಾವಣೆಯಲ್ಲಿ ಸೋತಿದ್ದೆವು. ಹೀಗಾಗಿ ಯಾರೂ ಬೇಸರವಾಗುವುದು ಬೇಡ ಅಂತಾ ಹೇಳಲು ಬಯಸುತ್ತೇನೆ. ಈ ಚುನಾವಣೆಯಲ್ಲಿ ನಮ್ಮ ಕ್ಷೇತ್ರದಲ್ಲಿರುವ ಕಾರ್ಯಕರ್ತರು ಹಾಗೂ ರಾಜ್ಯದ ಕಾರ್ಯಕರ್ತರು ತಮ್ಮ ಶಕ್ತಿ ಮೀರಿ ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಶ್ರಮಿಸಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ:ಬಿಜೆಪಿ ಸರ್ಕಾರ ಜನತೆಗೆ ಸ್ಪಂದಿಸಿದ ಕಾಳಜಿಗೆ ಉಪಚುನಾವಣೆಯಲ್ಲಿ ಗೆಲುವು: ಕುಮಾರಸ್ವಾಮಿ

ರಾಜರಾಜೇಶ್ವರಿ ನಗರದಲ್ಲಿ ಇಷ್ಟು ಅಂತರ ನಿರೀಕ್ಷೆ ಮಾಡಿರಲಿಲ್ಲ. ಈ ಕ್ಷೇತ್ರದಲ್ಲಿ ತೀವ್ರ ಪೈಪೋಟಿಯಿಂದ ಕೆಲವು ಸಾವಿರ ಮತಗಳ ಅಂತರದಲ್ಲಿ ಫಲಿತಾಂಶ ಬರಬಹುದು ಎಂದು ಭಾವಿಸಿದ್ದೆ. ಭವಿಷ್ಯದ ಲೆಕ್ಕಾಚಾರದೊಂದಿಗೆ ನಾವು ನಮ್ಮ ಅಭ್ಯರ್ಥಿಯನ್ನು ಸೂಚಿಸಿದ್ದೆವು. ಒಳ್ಳೆಯ ಅಭ್ಯರ್ಥಿಗೆ ಜನ ಕೂಡ ಸಹಕಾರ ನೀಡಿದ್ದಾರೆ. ಕುಸುಮಾ ಅವರು ಉತ್ತಮ ಹೋರಾಟ ಮಾಡಿದ್ದಾರೆ. ನಮಗೆ ಸಿಕ್ಕಿರುವ ಮತ ಕೇವಲ ನಮ್ಮ ಪಕ್ಷದ ಮತ ಮಾತ್ರ ಅಲ್ಲ. ಬೇರೆ ಪಕ್ಷದ ಮತದಾರರು ಮತ ಹಾಕಿದ್ದಾರೆ. ಅವರು ಕೊಟ್ಟ ತೀರ್ಪನ್ನು ನಾವು ಒಪ್ಪುತ್ತೇವೆ ಎಂದು ಡಿ ಕೆ ಶಿವಕುಮಾರ್ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next