Advertisement

ನಾನೇ ಮರಳು ತೆಗೆವೆ, ತಾಕತ್ತಿದ್ರೆ ತಡೆಯಲಿ

05:32 PM Nov 11, 2018 | Team Udayavani |

ದಾವಣಗೆರೆ: ಮರಳು ಸಂಬಂಧ ತೊಘಲಕ್‌ ರೀತಿ ಆಡಳಿತ ನಡೆಸುತ್ತಿದ್ದಾರೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿರುದ್ಧ ಹರಿಹಾಯ್ದಿರುವ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ, ಸೋಮವಾರ ತಮ್ಮ ಕ್ಷೇತ್ರದ ನದಿಪಾತ್ರದಲ್ಲಿ ಸಾರ್ವಜನಿಕರಿಗೆ ಮರಳು ತುಂಬಿ ಕೊಡುವುದಾಗಿ ಹೇಳಿದ್ದಾರೆ.

Advertisement

ಶನಿವಾರ, ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊನ್ನಾಳಿ ತಾಲೂಕಿನ ಮರಳನ್ನು ಬೇರೆಡೆ ಸಾಗಿಸಲಾಗುತ್ತಿದೆ. ಮನೆ ಕಟ್ಟಿಕೊಳ್ಳುವ ಬಡವರು, ದೇವಸ್ಥಾನ ನಿರ್ಮಾಣಕ್ಕೂ ನಮ್ಮ ಕ್ಷೇತ್ರದಲ್ಲಿ ಮರಳು ಸಿಗದಂತಾಗಿದೆ. ಟನ್‌ ಮರಳಿಗೆ ಒಂದೂವರೆಯಿಂದ ಮೂರೂವರೆ ಸಾವಿರ ರೂ. ಕೇಳುತ್ತಾರೆ.

ಮರಳು ಮಾಫಿಯಾ ತಡೆಗೆ ಈಗಾಗಲೇ ಜಿಲ್ಲಾಡಳಿತಕ್ಕೆ ಹಲವಾರು ಗಮನಕ್ಕೆ ತಂದರೂ ಯಾವುದೇ ಪ್ರಯೋಜವಾಗಿಲ್ಲ. ನಾವು ನೀಡಿದ್ದ ಗಡವು ಮುಗಿದ ಹಿನ್ನೆಲೆಯಲ್ಲಿ ನ. 12ರಂದು ನದಿಪಾತ್ರಕ್ಕೆ ನಾನೇ ತೆರಳಿ, ಅವಶ್ಯಕತೆ ಇರುವವರಿಗೆ ಮರಳು ತುಂಬಿ ಕೊಡುವೆ. ನನ್ನನ್ನು ಯಾರು ತಡೆಯುತ್ತಾರೋ ನೋಡೋಣ ಎಂದು ಸವಾಲು ಹಾಕಿದರು. 

ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು 6 ತಿಂಗಳು ಕಳೆದಿದೆ. ಇದುವರೆಗೂ ಸಾಮಾನ್ಯ ಜನರಿಗೆ ಮರಳು ಸಮರ್ಪಕವಾಗಿ ಸಿಗುತ್ತಿಲ್ಲ. ಹೊನ್ನಾಳಿ ತಾಲೂಕಲ್ಲಿ 11 ಮರಳಿನ ಬ್ಲಾಕ್‌ಗಳಿವೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಹರಾಜು ಪ್ರಕ್ರಿಯೆ ನಡೆದಿದ್ದು, ಕೆಲವು ಬ್ಲಾಕ್‌ ಗಳು ಹರಾಜು ಆಗಿಲ್ಲ. ಹೊನ್ನಾಳಿ ತಾಲೂಕು ವ್ಯಾಪ್ತಿಯ ಮರಳನ್ನು ಕೆಲವರು ಮಿತಿ ಮೀರಿ ತುಂಬಿ ಬೇರೆಡೆ ಸಾಗಿಸುತ್ತಿದ್ದಾರೆ. ಬಡವರಿಗೆ ಶೌಚಾಲಯ ಕಟ್ಟಿಕೊಳ್ಳಲು ಮರಳು ಸಿಗುತ್ತಿಲ್ಲ. ಈ ಬಗ್ಗೆ ಈಗಾಗಲೇ ಎಸಿ, ತಹಶೀಲ್ದಾರ್‌ ಹಾಗೂ ಗಣಿ ಮತ್ತು
ಭೂವಿಜ್ಞಾನ ಇಲಾಖೆ ಅಧಿಕಾರಿಗಳ ಗಮನಕ್ಕೆ ಹಲವಾರು ಬಾರಿ ತರಲಾಗಿದೆ. ಈಗ ಹೊಸ ಜಿಲ್ಲಾಧಿಕಾರಿಯೊಂದಿಗೂ
ಮಾತನಾಡಿದ್ದೇನೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಜಿಲ್ಲೆಯಲ್ಲಿ ಒಂದು ರೀತಿ ತೊಘಲಕ್‌ ದರ್ಬಾರ್‌ ನಡೆಯುತ್ತಿದೆ. ಎತ್ತಿನ ಗಾಡಿ, ಬೈಕ್‌ಗಳಲ್ಲಿ ಮರಳು ಕೊಂಡೊಯ್ಯುವ 10 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ತಾಕತ್‌ ಇದ್ದರೆ ನಿಯಮ ಮೀರಿ ರಾತ್ರಿಯೆಲ್ಲಾ ಮರಳು ಸಾಗಿಸುವವರನ್ನು ಹಿಡಿದು, ಕ್ರಮ ಕೈಗೊಳ್ಳಲಿ. ಅದನ್ನ ಬಿಟ್ಟು ಶೌಚಾಲಯ, ಮನೆ ಕಟ್ಟಿಕೊಳ್ಳಲು ಮರಳು ಕೊಂಡೊಯ್ಯುವವರ ವಿರುದ್ಧ ಪ್ರಕರಣ ದಾಖಲಿಸುವುದನ್ನು ನಿಲ್ಲಿಸಲಿ ಎಂದು ತಾಕೀತು ಮಾಡಿದರು. 

Advertisement

ಜಿಲ್ಲೆಗೆ ಡಿಸಿ-ಎಸ್ಪಿ ಸುಪ್ರೀಂ ಅಲ್ಲ. ಕಾನೂನು ಹಾಗೂ ಸಾರ್ವಜನಿಕರ ರಕ್ಷಣೆ ವಿಚಾರದಲ್ಲಿ ಜನಪ್ರತಿನಿಧಿಗಳಿಗೂ ಜವಾಬ್ದಾರಿ ಇದೆ. ಸಾಮಾನ್ಯ ಜನರ ಸಮಸ್ಯೆ ಪರಿಹರಿಸುವ ಸಂಬಂಧ ಕೇಳುವ ನಮಗೆ ಅಧಿಕಾರಿಗಳು ಆವಾಜ್‌ ಹಾಕುತ್ತಾರೆ. ನಾನು 6 ತಿಂಗಳು ಸುಮ್ಮನಿದ್ದೆ. ನಮ್ಮ ತಾಳ್ಮೆ ಪರೀಕ್ಷೆ ಮಾಡಬೇಡಿ ಎಂಬುದಾಗಿ ಹೇಳಿದ್ದೆ. ಈಗ ನಾವು ನೀಡಿದ್ದ ಗಡುವು ಮೀರಿದೆ. ಆದ್ದರಿಂದ ಅವಶ್ಯಕತೆ ಇರುವವರಿಗೆ ನಾನೇ ಮರಳು ತುಂಬಿ ಕೊಡುವೆ. ಯಾರಿಗೆ ಮರಳಿನ ಅವಶ್ಯಕತೆ ಇದೆಯೋ ಅವರು ಸೋಮವಾರ ಎತ್ತಿನ ಗಾಡಿ, ಟ್ರ್ತಾಕ್ಟರ್‌ ನೊಂದಿಗೆ ಹೊನ್ನಾಳಿಗೆ ಬಂದಲ್ಲಿ ಅವರೊಂದಿಗೆ ನದಿ ಪಾತ್ರಕ್ಕೆ ತೆರಳಿ, ಮರಳಿ ತುಂಬಿಸುವೆ. ಮರಳಿಗೋಸ್ಕರ ಅಲ್ಲೆ ಮಲಗುವೆ. ನಮ್ಮನ್ನು ಯಾರು ತಡೆಯುತ್ತಾರೋ ನೋಡೋಣ ಎಂದು ಹೇಳಿದರು.

ಜಿಪಂ ಸದಸ್ಯರಾದ ಎಂ.ಆರ್‌. ಮಹೇಶ್‌, ಸುರೇಂದ್ರ ನಾಯ್ಕ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರಕೆರೆ ನಾಗರಾಜ್‌, ಇತರರು
ಪತ್ರಿಕಾಗೋಷ್ಠಿಯಲ್ಲಿದ್ದರು. 

ಬೇಜವಾಬ್ದಾರಿ ಜಿಲ್ಲಾ ಮಂತ್ರಿ
ಜಿಲ್ಲೆಯಲ್ಲಿ ಬರಗಾಲದಿಂದ ಜನ ತತ್ತರಿಸಿ ಹೋಗಿದ್ದಾರೆ. ಕುಡಿಯುವ ನೀರಿನ ತತ್ವಾರ ಇದೆ. ಮರಳಿನ ಸಮಸ್ಯೆ ತೀವ್ರವಾಗಿದೆ. ಶೌಚಾಲಯ ನಿರ್ಮಿಸಿಕೊಳ್ಳಲು ಸಹ ಬಡವರಿಗೆ ಮರಳು ದೊರೆಯುತ್ತಿಲ್ಲ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಗಮನವನ್ನೇ ಹರಿಸುತ್ತಿಲ್ಲ. ಬರಗಾಲ ಪರಿಸ್ಥಿತಿ ನಿಭಾಯಿಸುವ ಸಂಬಂಧ ಈವರೆಗೂ ಮೀಟಿಂಗ್‌ ಮಾಡಿಲ್ಲ.
ಎಂ.ಪಿ.ರೇಣುಕಾಚಾರ್ಯ, ಹೊನ್ನಾಳಿ ಶಾಸಕ

ಸಿಎಂ ಕುಮಾರಸ್ವಾಮಿ ದ್ವಿಪಾತ್ರ…
ದಾವಣಗೆರೆ: ಟಿಪ್ಪು ಸುಲ್ತಾನ್‌ ಜಯಂತಿ ವಿಚಾರದಲ್ಲಿ ನಾವು ಈಗಲೂ ಹಿಂದಿನ ನಿಲುವಿಗೆ ಬದ್ಧ. ಆದರೆ, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಜಯಂತಿ ಆಚರಣೆ ಸಂಬಂಧ ದ್ವಿಪಾತ್ರ ಮಾಡಿದ್ದಾರೆ ಎಂದು ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ. ಶನಿವಾರ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸ್ವಾರ್ಥಕ್ಕಾಗಿ ಟಿಪ್ಪು ಜಯಂತಿ ಆಚರಣೆ ತೀರ್ಮಾನ ಕೈಗೊಂಡಿತು. ಆದರೆ, ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ರಾಂತಿ ನೆಪದಲ್ಲಿ ಟಿಪ್ಪು ಜಯಂತಿಗೆ ಗೈರು ಹಾಜರಾಗಿದ್ದಾರೆ. ನಾನು ರಾಜಕೀಯ ಉದ್ದೇಶದಿಂದ ಈ ಮಾತು ಹೇಳುತ್ತಿಲ್ಲ. ನಿಜವಾಗಿಯೂ ಅವರ ಆರೋಗ್ಯದಲ್ಲಿ ವ್ಯತ್ಯಾಸವಾಗಿದ್ದಲ್ಲಿ ಬೇಗ ಚೇತರಿಸಿಕೊಳ್ಳಲು ಹಾರೈಸುವೆ ಎಂದರು.

ಬಿಜೆಪಿ ಮುಸ್ಲಿಮರ ವಿರೋಧಿ ಅಲ್ಲ. ಕಾಂಗ್ರೆಸ್‌-ಜೆಡಿಎಸ್‌ನವರಿಗಿಂತ ಮುಸ್ಲಿಂ ಸಮಾಜದ ಅಭಿವೃದ್ಧಿ ಬಗ್ಗೆ ನಮ್ಮ ಪಕ್ಷಕ್ಕೆ ಕಾಳಜಿ ಇದೆ. ಮತಬ್ಯಾಂಕ್‌ ಗಾಗಿ ನಾವು ಒಲೈಸುವುದಿಲ್ಲ. ಆ ಜನಾಂಗಕ್ಕೆ ಮೂಲಭೂತ ಸೌಲಭ್ಯ, ಶಿಕ್ಷಣಕ್ಕೆ ನೆರವು ಕಲ್ಪಿಸಿದರೆ ಅಭಿವೃದ್ಧಿ ಆಗಲು ಸಾಧ್ಯವೇ ಹೊರತು ಟಿಪ್ಪು ಜಯಂತಿ ಆಚರಣೆಯಿಂದಲ್ಲ. ಈ ಹಿಂದೆ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ಮುಸ್ಲಿಂ ಜನಾಂಗದ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿರುವುದೇ ಬಿಜೆಪಿ ಮುಸ್ಲಿಂ ವಿರೋಧಿಯಲ್ಲ ಎಂಬುದಕ್ಕೆ ಸಾಕ್ಷಿ ಎಂದು
ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next