ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ನಾನ್ಯಾಕೆ ರಾಜೀನಾಮೆ ಕೊಡಲಿ..ಇದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ. ಈ ಮೂಲಕ ಅತೃಪ್ತ ಶಾಸಕರ ರಾಜೀನಾಮೆ ಪರ್ವದ ನಡುವೆಯೂ ಸರ್ಕಾರವನ್ನು ಉಳಿಸಿಕೊಳ್ಳುವ ಪ್ರಯತ್ನ ಮುಂದುವರಿದಂತಾಗಿದೆ.
ಶುಕ್ರವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಹಿಂದೆ ಬಿಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ 17 ಶಾಸಕರು ರಾಜೀನಾಮೆ ನೀಡಿದ್ದಾರಲ್ಲ, ಆಗ ಅವರು ರಾಜೀನಾಮೆ ನೀಡಿದ್ದಾರಾ ಎಂದು ತಿರುಗೇಟು ನೀಡಿದರು.
2009ರಲ್ಲಿ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಸಂಪುಟದಿಂದ ಕೈಬಿಡಬೇಕು, ಕೆಲವು ಶಾಸಕರಿಗೆ ಸಚಿವ ಸ್ಥಾನ ನೀಡಬೇಕು..ಹೀಗೆ ಹಲವು ಬೇಡಿಕೆಗಳನ್ನು ಮುಂದಿಟ್ಟು ಜನಾರ್ದನ ರೆಡ್ಡಿ ನೇತೃತ್ವದ ಬಣ ಬಂಡಾಯ ಸಾರಿತ್ತು.
ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು 17 ಮಂದಿ ಶಾಸಕರು ಪಟ್ಟು ಹಿಡಿದಿದ್ದರು. ಆದರೆ ಅಂದು ಸ್ಪೀಕರ್ ಆಗಿದ್ದ ಕೆಜಿ ಬೋಪಯ್ಯ ಐವರು ಪಕ್ಷೇತರರು ಸೇರಿದಂತೆ 17 ಮಂದಿ ಶಾಸಕರನ್ನು ಅನರ್ಹಗೊಳಿಸಿದ್ದರು.
2009ರ ಅಕ್ಟೋಬರ್ ನಲ್ಲಿ ವಿಧಾನಸಭೆಯಲ್ಲಿ ನಡೆದ ಗದ್ದಲ, ಕೋಲಾಹಲ ಇಡೀ ದೇಶದ ಗಮನವನ್ನೇ ಸೆಳೆದು ಶಾಸಕರ ವರ್ತನೆಗೆ ಸಾರ್ವತ್ರಿಕವಾಗಿ ಖಂಡನೆ ವ್ಯಕ್ತವಾಗಿತ್ತು. ಆದರೆ ಈ ಗದ್ದಲದ ನಡುವೆಯೇ ಬಿಎಸ್ ವೈ ಧ್ವನಿ ಮತದ ಮೂಲಕ ವಿಶ್ವಾಸಮತ ಗೆದ್ದಿದ್ದರು.
ಏತನ್ಮಧ್ಯೆ ಈ ವಿಶ್ವಾಸಮತ ಕಾನೂನುಬಾಹಿರ ಎಂದು ರಾಜ್ಯಪಾಲರಾದ ಎಚ್.ಆರ್ ಭಾರದ್ವಾಜ್ ಅವರು ಆದೇಶ ನೀಡಿ, ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿದ್ದರು.