ಬೆಂಗಳೂರು: ನೂತನ ಸಂಸತ್ ಭವನದ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದೇನೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ ಗುರುವಾರ ಹೇಳಿಕೆ ನೀಡಿದ್ದಾರೆ.
ಸುದ್ದಿ ಸಂಸ್ಥೆ ಎಎನ್ ಐ ನೊಂದಿಗೆ ಮಾತನಾಡಿದ ಮಾಜಿ ಪ್ರಧಾನಿ, ದೇಶದ ಜನರ ತೆರಿಗೆ ಹಣದಿಂದ ಆ ಭವ್ಯ ಕಟ್ಟಡ ನಿರ್ಮಾಣವಾಗಿದೆ. ಅದು ದೇಶಕ್ಕೆ ಸೇರಿದ್ದು. ಬಿಜೆಪಿ ಅಥವಾ ಆರೆಸ್ಸೆಸ್ ಕಚೇರಿಯಲ್ಲ,” ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸೇರಿ 20 ವಿರೋಧ ಪಕ್ಷಗಳು ಮೇ 28 ರಂದು ನಡೆಯಲಿರುವ ಐತಿಹಾಸಿಕ ಸಮಾರಂಭವನ್ನು ಬಹಿಷ್ಕರಿಸಲು ನಿರ್ಧರಿಸುವುದರೊಂದಿಗೆ ಹೊಸ ಸಂಸತ್ತಿನ ಕಟ್ಟಡದ ಉದ್ಘಾಟನೆಯ ಕುರಿತಾದ ಗದ್ದಲವು ತೀವ್ರವಾಗುತ್ತಿದೆ. 15 ಪಕ್ಷಗಳು, ಹೆಚ್ಚಾಗಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಯಿಂದ ಹೊರ ತಾದ ಪಕ್ಷಗಳು ಸಮಾರಂಭದಲ್ಲಿ ಭಾಗಿಯಾಗಲಿವೆ.
ಶಿವಸೇನೆ (ಏಕನಾಥ್ ಶಿಂಧೆ ಬಣ), ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ), ನ್ಯಾಶನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ (ಎನ್‌ಡಿಪಿಪಿ), ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಎಸ್‌ಕೆಎಂ), ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷ (ಆರ್‌ಎಲ್‌ಜೆಪಿ), ಅಪ್ನಾ ದಳ (ಸೋನಿಲಾಲ್), ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆರ್‌ಪಿಐ), ತಮಿಳು ಮಾನಿಲ ಕಾಂಗ್ರೆಸ್, ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ), ಆಲ್ ಜಾರ್ಖಂಡ್ ವಿದ್ಯಾರ್ಥಿ ಸಂಘ (ಎಜೆಎಸ್‌ಯು), ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್‌ಎಫ್), ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷ (YSRCP), ತೆಲುಗು ದೇಶಂ ಪಕ್ಷ (TDP), ಶಿರೋಮಣಿ ಅಕಾಲಿದಳ (SAD), ಮತ್ತು ಬಿಜು ಜನತಾ ದಳ (BJD) ಕೂಡ ಪಾಲ್ಗೊಳ್ಳುತ್ತಿದೆ.