ಆಕೆ, ಎಲ್ಲಿಗೋ ನಡೆದುಕೊಂಡು ಹೋಗುತ್ತಿದ್ದವಳು ಸುಸ್ತಾಗಿ ಮರದ ನೆರಳಿನಲ್ಲಿ ಕುಳಿತಿದ್ದಳು. ಸ್ವಲ್ಪ ಕೆದರಿದ ಕೂದಲು, ಬಳಲಿದ ಮುಖ, ಪಕ್ಕದಲ್ಲಿದ್ದ ಚೀಲವನ್ನೆಲ್ಲ ನೋಡಿ, ನಾನು ಆಕೆಯನ್ನು ಭಿಕ್ಷುಕಿ ಅಂತ ಭಾವಿಸಿಬಿಟ್ಟಿದ್ದೆ!
ನನಗೆ ಮೊದಲಿಂದಲೂ ಅಸಹಾಯಕರು, ಅಂಗವಿಕಲರು, ಬಡವರು ಎಂದರೆ ಕರುಣೆ ಜಾಸ್ತಿ. ಅವರಿಗೆ ಕೈಲಾದ ಮಟ್ಟಿಗೆ ಸಹಾಯ ಮಾಡಲು ಮುಂದಾಗುವುದು ನನ್ನ ಅಭ್ಯಾಸ. ಯಾರೇ ಭಿಕ್ಷುಕರು ಕಾಣಿಸಿದರೂ, ಅವರನ್ನು ಖಾಲಿ ಕೈಯಲ್ಲಂತೂ ಕಳಿಸುವುದಿಲ್ಲ. ಐದೋ, ಹತ್ತೋ ರೂಪಾಯಿಯನ್ನು ಕೊಟ್ಟೇ ಕಳಿಸುತ್ತೇನೆ. ಭಿಕ್ಷುಕರಿಗೆ ಕೊಡಲೆಂದೇ ನಾಣ್ಯಗಳನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳುವುದುಂಟು. “ಅಯ್ಯೋ ಪಾಪ’ ಎನ್ನುವ ಈ ಗುಣದಿಂದಲೇ ನಾನೊಮ್ಮೆ ಫಜೀತಿಗೆ ಸಿಲುಕಿಕೊಳ್ಳಬೇಕಾಯ್ತು. ಅವತ್ತು ಎಂದಿನಂತೆ ಕಾಲೇಜು ಮುಗಿಸಿ, ಬಸ್ ನಿಲ್ದಾಣದ ಕಡೆಗೆ ಬರುತ್ತಿದ್ದೆ. ರಸ್ತೆ ಪಕ್ಕದಲ್ಲಿ ಮುದುಕಿಯೊಬ್ಬಳು ಸಪ್ಪೆ ಮೋರೆ ಹಾಕಿಕೊಂಡು ಕುಳಿತಿರುವುದು ಕಣ್ಣಿಗೆ ಬಿತ್ತು.
ಅವಳ ಪಕ್ಕದಲ್ಲಿ ಹಳೆಯದಾದ ಒಂದು ಬ್ಯಾಗ್ ಕೂಡಾ ಇತ್ತು. ವೇಷಭೂಷಣದಿಂದ ಆಕೆ ಭಿಕ್ಷುಕಿಯಂತೆಯೇ ಕಾಣಿಸುತ್ತಿದ್ದಳು. ಬಿಸಿಲಿನಲ್ಲಿ ಕುಳಿತಿದ್ದ ಮುದುಕಿಯನ್ನು ನೋಡಿ ನನ್ನಲ್ಲಿ ಕರುಣಾರಸ ಉಕ್ಕಿ ಹರಿಯಿತು. “ಅಯ್ಯೋ ಪಾಪ, ಈ ಮುದುಕಿ ಮನೆ ಬಿಟ್ಟು ಬಂದಿರಬೇಕು ಅಥವಾ ಈಕೆಯನ್ನು ಮಗ-ಸೊಸೆಯೇ ಮನೆಯಿಂದ ಆಚೆ ಹಾಕಿರಬೇಕು. ಅದಕ್ಕೇ ಹೀಗೆ ಸಪ್ಪೆ ಮುಖ ಮಾಡ್ಕೊಂಡು ಕುಳಿತಿದ್ದಾಳೆ. ಎಷ್ಟು ದಿವಸ ಆಯ್ತೋ ಏನೋ ಊಟ ಮಾಡಿ? ಇವಳಿಗೆ ಏನಾದರೂ ಸಹಾಯ ಮಾಡಲೇಬೇಕು’ ಅಂತ ನನಗೆ ನಾನೇ ಹೇಳಿಕೊಂಡೆ. ಪರ್ಸ್‌ಗೆ ಕೈ ಹಾಕಿದರೆ, ಬಸ್ ಛಾರ್ಜ್‌ಗಿಂತ ಹತ್ತು ರೂಪಾಯಿ ಮಾತ್ರ ಹೆಚ್ಚಿತ್ತು.
ಸರಿ, ಆ ದುಡ್ಡಿನಲ್ಲೇ ಅವಳು ಏನಾದ್ರೂ ತಿನ್ನಲಿ ಅಂತ, ಅವಳ ಹತ್ರ ಹೋಗಿ “ಅಜ್ಜಿ, ತಗೋಳಿ ಈ ಹತ್ತು ರೂಪಾಯಿ’ ಅಂತ ಕೈ ಚಾಚಿದೆ. ಆಕೆ, ನನಗೆ ಕೈ ಮುಗಿದು, ಹತ್ತು ರೂಪಾಯಿ ತಗೊಂಡಳು ಅಂದುಕೊಂಡ್ರಾ, ಇಲ್ಲ ಇಲ್ಲ. ಅಲ್ಲಿ ಆಗಿದ್ದೇ ಬೇರೆ. ಆ ಅಜ್ಜಿ ಆಕಾಶ-ಭೂಮಿ ಒಂದಾಗುವ ಹಾಗೆ, ಜೋರು ಧ್ವನಿಯಲ್ಲಿ ಬಯ್ಯಲು ಶುರು ಮಾಡಬೇಕೇ? ಆ ಮುದುಕಿಯ ಗಲಾಟೆ ಕೇಳಿ, ಸುತ್ತಮುತ್ತಲಿದ್ದ ಜನರೆಲ್ಲ ನಮ್ಮತ್ತ ಧಾವಿಸಿ ಬಂದರು. “ಯಾಕಮ್ಮಾ ಏನಾಯ್ತು?’ ಅಂತ ಕೇಳುತ್ತಿರುವಾಗ ಆ ಮುದುಕಿ, “ಅಲ್ಲಿ ಏನು ಕೇಳ್ತೀರಿ. ನನಗ ಕೇಳಿ, ನಾನ್ ಹೇಳ್ತೀನಿ ಆಕಿ ಏನ್ ಮಾಡ್ಯಾಳ ಅಂತ ಬಯ್ಯುತ್ತಾ ನನ್ನತ್ತ ನೋಡಿ, “ನೀನೇನ್ ದೊಡ್ಡ ದೊರೆ ಮೊಮ್ಮಗಳಾ?
ಎಷ್ಟೇ ಧೈರ್ಯ ನಿನಗೆ? ನನಗೇ ಹತ್ತು ರೂಪಾಯಿ ಭಿಕ್ಷಾ ಕೊಡಕ್ಕ ಬರಿಯಲ್ಲಾ! ಯಾರೇ ಹೇಳಿದ್ದು ನಾನು ಭಿಕ್ಷುಕಿ ಅಂತ? ನಾನೇನು “ಅಮ್ಮಾ ತಾಯಿ, ಭಿಕ್ಷೆ ಹಾಕು’ ಅಂತ ನಿನ್ನ ಮುಂದ ಕೈಯೊಡ್ಡಿ ಬೇಡಿದೆ°àನಾ? ಇಲ್ಲ ತಾನೇ, ಕಾಲೇಜ್ ಮುಗಿಸ್ಕೊಂಡು ಮನೆಗೆ ಹೊಗೋದು ಬಿಟ್ಟು, ಹಾದಿ ಮ್ಯಾಲ ಕುಂತೋರಿಗೆಲ್ಲ ಭಿಕ್ಷೆ ಹಾಕ್ತಾಳಂತ. ನೀನೇನು ಸಮಾಜಸೇವಕೀನಾ? ನಿಂದ್ ಎಷ್ಟಿದೆಯೋ ಅಷ್ಟು ನೋಡ್ಕೊಂಡು ಸುಮ್ಮನಿರೋದು ಬಿಟ್ಟು…’ ಅಂತ ಬಾಯಿಗೆ ಬಂದ ಹಾಗೆ ಬೈಯ್ದಳು. ನಂಗೆ ಆಗಲೇ ಗೊತ್ತಾಗಿದ್ದು ಅವಳು ಭಿಕ್ಷುಕಿ ಅಲ್ಲ ಅಂತ.
ಆಕೆ ಪಾಪ, ಎಲ್ಲಿಗೋ ನಡೆದುಕೊಂಡು ಹೋಗುತ್ತಿದ್ದವಳು ಸುಸ್ತಾಗಿ ಮರದ ನೆರಳಿನಲ್ಲಿ ಕುಳಿತಿದ್ದಳು. ಸ್ವಲ್ಪ ಕೆದರಿದ ಕೂದಲು, ಬಳಲಿದ ಮುಖ, ಪಕ್ಕದಲ್ಲಿದ್ದ ಚೀಲವನ್ನೆಲ್ಲ ನೋಡಿ, ನಾನು ಆಕೆಯನ್ನು ಭಿಕ್ಷುಕಿ ಅಂತ ಭಾವಿಸಿಬಿಟ್ಟಿದ್ದೆ! ಹಾಗಂದುಕೊಂಡು ಸುಮ್ಮನೆ ಹೋಗಿದ್ದರೆ ಆಗುತ್ತಿತ್ತು. ಪಾಪ ಅಂತ ದುಡ್ಡು ಕೊಡಲು ಹೋಗಿ, ಮುಖಕ್ಕೆ ಚೆನ್ನಾಗಿಯೇ ಮಂಗಳಾರತಿ ಮಾಡಿಸಿಕೊಂಡೆ. ಆ ಕ್ಷಣದಿಂದಲೇ ಒಂದು ನಿರ್ಧಾರ ಮಾಡಿದೆ. ಇನ್ಮುಂದೆ, ಬಾಹ್ಯ ಚಹರೆಗಳನ್ನು ನೋಡಿ ಜನರ ವ್ಯಕ್ತಿತ್ವವನ್ನು ಅಳೆಯುವುದಿಲ್ಲ ಅಂತ.
* ಭಾಗ್ಯ ಎಸ್.