Advertisement

ಪಂಚೆ ಧರಿಸಿದ್ದ ನನಗೆ ಕ್ಲಬ್‌ಗೆ ಪ್ರವೇಶ ಕೊಟ್ಟಿರಲಿಲ್ಲ; ಸಿಎಂ ಸಿದ್ದರಾಮಯ್ಯ

09:02 AM Feb 13, 2024 | Shreeram Nayak |

ಬೆಂಗಳೂರು: ಊಟ ಮಾಡಲೆಂದು ಬೆಂಗಳೂರಿನ ಕ್ಲಬ್‌ ಒಂದಕ್ಕೆ ಹೋಗಿದ್ದೆ. ಆದರೆ ಆ ಕ್ಲಬ್‌ನವರು ನಾನು ಪಂಚೆ ಧರಿಸಿದ್ದ ಕಾರಣಕ್ಕೆ ಒಳಗೆ ಬಿಟ್ಟಿರಲಿಲ್ಲ. ಆ ಕ್ಷಣವೇ ನಾವು ಕೂಡ ಕ್ಲಬ್‌ ಮಾಡಬೇಕು ಎಂದು ಛಲ ತೊಟ್ಟಿದ್ದೆ. ಆ ಕನಸು ಈಗ ಕರ್ನಾಟಕ ವಿಧಾನ ಮಂಡಲ ಸಂಸ್ಥೆ ಮೂಲಕ ನನಸಾಗಿದೆ. ಅದರಲ್ಲೂ ನಾನೇ ಪಂಚೆಯಲ್ಲಿ ಕಾನ್‌ಸ್ಟಿಟ್ಯೂಷನ್‌ ಕ್ಲಬ್‌ ಉದ್ಘಾಟಿಸುತ್ತಿರುವುದು ಮತ್ತಷ್ಟು ಖುಷಿ ಕೊಟ್ಟಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ಕರ್ನಾಟಕ ವಿಧಾನ ಮಂಡಲ ಸಂಸ್ಥೆ ಸೋಮವಾರ ಬಾಲಬ್ರೂಯಿ ಗೆಸ್ಟ್‌ ಹೌಸ್‌ನಲ್ಲಿ ಕರ್ನಾಟಕ ವಿಧಾನಮಂಡಲ ಸಂಸ್ಥೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಹಳ ವರ್ಷದ ಹಿಂದೆ ಯಾವುದೋ ಒಂದ್‌ ಕ್ಲಬ್‌ಗೆ ಹೋಗಿದ್ದೆ. (ತತ್‌ಕ್ಷಣ ಸಿಎಂ ಎದುರು ಕುಳಿತಿದ್ದ ಬಿ.ಆರ್‌. ಪಾಟೀಲ್‌ ಅವರು ಅದು ಬೌರಿಂಗ್‌ಕ್ಲಬ್‌ ಎಂದು ನೆನಪಿಸಿದರು. ನೀವು, ನಾನು, ಉಗ್ರಪ್ಪ, ಕೋದಂಡ ರಾಮಯ್ಯ ಹೋಗಿದ್ವಿ ಎಂದರು) ಈ ಬಿ.ಆರ್‌. ಪಾಟೀಲ್‌ ಕೂಡ ಇದ್ದ ಅನ್ಸುತ್ತೆ. ಪಂಚೆ ಧರಿಸಿ ಹೋಗಿದ್ದಕ್ಕೆ ನಮ್ಮನ್ನು ಅವರು ಒಳಗೆ ಬಿಡಲಿಲ್ಲ . ಗಾಂಧೀಜಿ ಅರೆ ಬಟ್ಟೆಯಲ್ಲಿದ್ದರು. ಅವರಿಗೆ ರೌಂಡ್‌ ಟೇಬಲ್‌ನಲ್ಲಿ ಕೂರಲು ಅವಕಾಶ ಇತ್ತು. ಆದರೆ ಪಂಚೆ ಉಟ್ಟುಕೊಂಡಿದ್ದರೂ ನಮ್ಮನ್ನು ಒಳಗೆ ಬಿಟ್ಟಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸರಕಾರದ ವಶದಲ್ಲಿದ್ದ ಕಾನ್‌ಸ್ಟಿಟ್ಯೂಷನ್‌ ಕ್ಲಬ್‌ ವಿಧಾನಮಂಡಲ ಸಂಸ್ಥೆಗೆ ವರ್ಗಾವಣೆ ಮಾಡಲಾಗಿದೆ. ಇದು ಪಾರಂಪರಿಕ ಕಟ್ಟಡವಾಗಿದ್ದು ಸಣ್ಣಪುಟ್ಟ ಬದಲಾವಣೆ ಮಾಡಲಾಗಿದೆ. ಶಾಸಕರು, ಮಾಜಿ ಶಾಸಕರು ಸದ್ಬಳಕೆ ಮಾಡಿಕೊಳ್ಳಬೇಕು. ನಾನೂ ಆಗಾಗ ಈ ಕ್ಲಬ್‌ಗೆ ಬರುತ್ತೇನೆ ಎಂದರು.

ಸ್ಪೀಕರ್‌ ಯು.ಟಿ.ಖಾದರ್‌ ಮಾತನಾಡಿ, ಬಾಲಬ್ರೂಯಿ ಪಾರಂಪರಿಕ ಕಟ್ಟಡವಾಗಿದ್ದು, ಅದರ ಸಂಸ್ಕೃತಿಯನ್ನು ಉಳಿಸಿಕೊಂಡು ಹೊಸ ರೂಪ ನೀಡಲಾಗಿದೆ. ಶಾಸಕರು ಮತ್ತು ಅವರ ಕುಟುಂಬದ ಸದಸ್ಯರು ಸ್ವಲ್ಪ ಸಮಯ ಇಲ್ಲಿ ಕಳೆಯಲು ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದರು.

Advertisement

ಸಚಿವ ಕೆ.ಜೆ.ಜಾರ್ಜ್‌, ವಿಪಕ್ಷ ಉಪನಾಯಕ ಅರವಿಂದ್‌ ಬೆಲ್ಲದ್‌, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಸರಕಾರಿ ಮುಖ್ಯ ಸಚೇತಕ ಅಶೋಕ್‌ ಎಂ. ಪಟ್ಟಣ, ಶಾಸಕರಾದ ಶಿವಲಿಂಗೇಗೌಡ, ಬಿ.ಆರ್‌.ಪಾಟೀಲ್‌, ಎನ್‌.ಎ.ಹ್ಯಾರೀಸ್‌, ನಯನ ಮೋಟಮ್ಮ ಇದ್ದರು.

ಚಪ್ಪಲಿ ಹಾಕಿಕೊಂಡಿದ್ದರಿಂದ ನನ್ನನ್ನೂಒಳಗೆ ಬಿಟ್ಟಿರಲಿಲ್ಲ: ಬಸವರಾಜ ಹೊರಟ್ಟಿ
ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಚಪ್ಪಲಿ ಹಾಕಿಕೊಂಡಿದ್ದರಿಂದ ನನ್ನನ್ನೂ ಬೆಂಗಳೂರು ಕ್ಲಬ್‌ನವರು ಒಳಗೆ ಬಿಟ್ಟಿರಲಿಲ್ಲ. ಪೊಲೀಸರಿಗೆ ಕಂಪ್ಲೆಂಟ್‌ ಮಾಡಿ ಒಳಗೆ ಹೋಗಿದ್ದೆವು ಎಂದು ನೆನಪು ಮಾಡಿಕೊಂಡರಲ್ಲದೆ, ಸಂಸದರು, ಶಾಸಕರು, ಮಾಜಿ ಶಾಸಕರು, ಸಚಿವರು ಎಲ್ಲರೂ ಈ ಕ್ಲಬ್‌ ಬಳಸಿಕೊಳ್ಳಬಹುದು. ಇಲ್ಲಿ ಸ್ವಲ್ಪ ಎಣ್ಣೆ ಹಾಕಬಹುದು ತೊಂದರೆ ಇಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next