Advertisement

ವೈದ್ಯೆಯಾಗಬೇಕು ಎಂಬ ಕನಸು ಹೊತ್ತಿದ್ದೆ :ಡಾ. ಸಂಧ್ಯಾ ಪೈ ನೆನಪಿನೋಕುಳಿ

01:32 AM Feb 24, 2019 | |

ಬೆಂಗಳೂರು: “ಬಾಲ್ಯದಲ್ಲಿ ನಾನು ವೈದ್ಯೆಯಾಗಬೇಕು ಎಂಬ ಕನಸು ಕಂಡಿದ್ದೆ, ಆದರೆ ಕಥೆ, ಕಾದಂಬರಿ ಮತ್ತು ಪುಸ್ತಕಗಳ ಓದು ನನ್ನನ್ನು ಸಾಹಿತಿಯಾಗಿ, ಪತ್ರಕರ್ತೆಯಾಗಿ ರೂಪಿಸಿತು’ ಎಂದು ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ. ಸಂಧ್ಯಾ ಎಸ್‌.ಪೈ ಹೇಳಿದರು.

Advertisement

ಕನ್ನಡ ಸಾಹಿತ್ಯ ಪರಿಷತ್ತು ಶನಿವಾರ ಹಮ್ಮಿಕೊಂಡಿದ್ದ “ಸಾಧಕರೊಡನೆ ಸಂವಾದ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಾವು ನಡೆದು ಬಂದ ದಾರಿಯನ್ನು ಅವರು ಮೆಲುಕು ಹಾಕಿದರು. ಶಾಲಾ ದಿನಗಳಲ್ಲಿ ಚಿಕ್ಕಮಗಳೂರಿನ ಭಾಗವತ್‌ ವೈದ್ಯರನ್ನು ನೋಡಿ ಅವರ ಹಾಗೇ ವೈದ್ಯರಾಗಬೇಕು ಎಂದು ಕನಸು ಬಿತ್ತಿಕೊಂಡಿದ್ದೆ. ಆದರೆ, ಅದು ಸಾಧ್ಯವಾಗಲಿಲ್ಲ ಎಂದರು.

“ಚಿಕ್ಕಮಗಳೂರಿನಲ್ಲಿ ನಾನು ಬಾಲ್ಯ ಕಳೆದೆ. ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಸಂಪೂರ್ಣ ಸ್ವಾತಂತ್ರ್ಯ ಇರುತ್ತಿತ್ತು. ಆಗ ಮನೆಯಲ್ಲಿ ಅಂಗಡಿಗಳಿಂದ ಅಕ್ಕಿ, ಬೇಳೆ ಸೇರಿ ಇನ್ನಿತರ ವಸ್ತುಗಳನ್ನು ತರುವಾಗ ಕಾಗದಗಳಲ್ಲಿ ಅವುಗಳನ್ನು ಅಂಗಡಿ ಮಾಲೀಕರು ಸುತ್ತಿ ಕೊಡುತ್ತಿದ್ದರು. ಆ ಕಾಗದಗಳಲ್ಲಿ ಕಥೆ, ಕಾದಂಬರಿ ಸೇರಿ ಸಾಹಿತ್ಯಕ್ಕೆ ಸಂಬಂಧಿಸಿದ ವಿಷಯಗಳೇ ಇರುತ್ತಿದ್ದವು. ಆ ಕಥೆಗಳೇ ನನ್ನೊಳಗೆ ಸಾಹಿತ್ಯ ಅಭಿರುಚಿಯನ್ನು ಹೆಚ್ಚಿಸಿದವು’ ಎಂದು ತಿಳಿಸಿದರು.

“ಓದು ನನ್ನ ಹವ್ಯಾಸ. ಕಾದಂಬರಿಕಾರ ಶಿವರಾಂ ಕಾರಂತ, ಎಂ.ಕೆ.ಇಂದಿರಾ ಸೇರಿ ನಾಡಿನ ಎಲ್ಲಾ ಸಾಹಿತಿಗಳ ಕೃತಿಗಳನ್ನು ಓದಿದ್ದೇನೆ. ಅವುಗಳು ನನ್ನಲ್ಲಿ ಸಾಹಿತ್ಯಾಸಕ್ತಿಯನ್ನು ಕೆರಳಿಸಿದವು. ಬದುಕಿನಲ್ಲಿ ಯಾವುದೇ ಗುರಿಯಿಲ್ಲದೆ ನಡೆದು ಬಂದ ನಾನು, ಮುಂದೊಂದು ದಿನ ಬರಹಗಾರ್ತಿ ಆಗುತ್ತೇನೆ ಅಂತ ಅಂದುಕೊಂಡಿರಲಿಲ್ಲ. ಹೀಗಾಗಿಯೇ, ನನ್ನದು ಸಾಧನೆ ಎಂದು ಅಂದುಕೊಳ್ಳುವುದಿಲ್ಲ’ ಎಂದರು.

“ತರಂಗ ಪತ್ರಿಕೆಯ ಸಂಪಾದಕಿಯಾದ ಮೇಲೆ ಕೆಲವೊಂದು ಬದಲಾವಣೆ ತಂದೆ. ಆಧ್ಯಾತ್ಮಿಕ ಮತ್ತು ಈ ನೆಲದ ಸಂಸ್ಕೃತಿಗೆ ಸಂಬಂಧಿಸಿದ ವಿಷಯಗಳಿಗೆ ಪತ್ರಿಕೆಯಲ್ಲಿ ಆದ್ಯತೆ ನೀಡಿದೆ. ತರುಣ ಜನಾಂಗಕ್ಕೆ ಈ ಮಣ್ಣಿನ ಸಂಸ್ಕೃತಿಯ ಆಧ್ಯಾತ್ಮಿಕ ತಿರುಳಿನ ಸಾರವನ್ನು ಹೇಳಬೇಕೆಂಬ ಮಹದಾಸೆ ನನ್ನದಾಗಿತ್ತು. ಇದರ ಜತೆಗೆ “ಪ್ರಿಯ ಓದುಗರೆ’ ಅಂಕಣ ಆರಂಭಿಸಿದೆ. ಇದನ್ನು ಓದುಗರು ಸ್ವೀಕರಿಸಿದರು’ ಎಂದು ಹೇಳಿದರು.

Advertisement

ಹೊಸಪತ್ರಿಕೆ ತರುವುದು ಕಷ್ಟ: ವರ್ಷದಿಂದ ವರ್ಷಕ್ಕೆ ಓದುಗರ ಸಂಖ್ಯೆ ಕ್ಷೀಣಿಸುತ್ತಲೇ ಇದೆ. ಕನ್ನಡ ಭಾಷೆ ಅಷ್ಟೇ ಅಲ್ಲ. ಎಲ್ಲಾ ಭಾಷೆಗಳ ಪತ್ರಿಕೆಗಳ ಕಥೆ ಕೂಡ ಇದೇ ಆಗಿದೆ. ಹೀಗಾಗಿ, ಹೊಸ ಪತ್ರಿಕೆಗಳನ್ನು ಹೊರ ತರುವುದು ಸುಲಭದ ಮಾತಲ್ಲ. ಮಕ್ಕಳಲ್ಲಿ ಓದುವ ಹವ್ಯಾಸ ಕಡಿಮೆಯಾಗಿದ್ದು ಪುಸ್ತಕ, ಸಾಹಿತ್ಯ ಕೃತಿಗಳನ್ನು ಓದುವವರ ಸಂಖ್ಯೆ ಕಡಿಮೆ ಯಾಗುತ್ತಿದೆ. ಇದಕ್ಕೆ ಈಗಿನ ಕಲಿಕೆಯೂ ಒಂದು ರೀತಿಯಲ್ಲಿ ಕಾರಣವಾಗಿದೆ ಎಂದು ಸಂವಾದಕರೊಬ್ಬರಿಗೆ ಉತ್ತರಿಸಿದರು.

ಯೋಗ್ಯರು ರಾಜಕೀಯಕ್ಕೆ ಬರಬೇಕು: “ಧಾರ್ಮಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ವಿಕೃತಿ ಈಗ ಕಾಲಿಟ್ಟಿದೆ. ಮಾರ್ಗ ದರ್ಶನ ನೀಡಬೇಕಾದವರೂ ಕೂಡ ದಾರಿ ತಪ್ಪಿದ್ದಾರೆ. ಇದು ನನ್ನನ್ನು ಬಹುವಾಗಿ ಕಾಡುತ್ತಿದೆ. ಯೋಗ್ಯರನ್ನು ಗುರುತಿಸಿ ಆಯ್ಕೆ ಮಾಡುತ್ತಿಲ್ಲ. ಆ ಹಿನ್ನೆಲೆಯಲ್ಲಿಯೇ ಯೋಗ್ಯರು ಯಾರೂ ರಾಜಕೀಯಕ್ಕೆ ಬರುತ್ತಿಲ್ಲ’ ಎಂದು ವಿಷಾದಿಸಿದರು. ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್‌, ಲೇಖಕಿಯರ ಸಂಘದ ಅಧ್ಯಕ್ಷೆ ವನಮಾಲ ಸಂಪನ್ನಕುಮಾರ್‌, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ವ.ಚ ಚನ್ನೇಗೌಡ, ಪಿ. ಮಲ್ಲಿಕಾರ್ಜುನಪ್ಪ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next