Advertisement

“ಶ್ರೀ ಕೃಷ್ಣ ಭಗವಾನ್‌ ಎಂದೇ ಕರೆಯುತ್ತಿದ್ದೆ”

12:33 PM Feb 21, 2023 | Team Udayavani |

ಭಗವಾನ್‌ ಸುಮ್ಮನೆ ಕೂತದ್ದನ್ನು ನೋಡೇ ಇಲ್ಲ. ಇಳಿವಯಸ್ಸಿನಲ್ಲೂ ಕೋಟ್‌, ಟ್ರೌಸರ್ಸ್‌, ಹ್ಯಾಟ್‌, ಶೂ ಹಾಕಿಕೊಂಡು ಅಲ್ಲಿಲ್ಲಿ ಓಡಾಡಿಕೊಂಡು ಸದಾ ಚಟುವಟಿಕೆಯಿಂದ ಇರುತ್ತಿದ್ದರು. ಎಂದಿಗೂ ನಗು ನಗುತ್ತಾ ಇರುವ ವ್ಯಕ್ತಿ. ಯಾವುದೇ ಸಭೆ, ಸಮಾರಂಭಕ್ಕೆ ಬಂದರೆ ಅಲ್ಲಿಗೆ ಕಳೆ ಬಂತು ಎಂದರ್ಥ. ಇಂದಿನ ಯುವಕರೂ ನಾಚುವಂತೆ ತುಂಬ ಎನರ್ಜಿಟಿಕ್‌ ಆಗಿದ್ದ ಅವರಲ್ಲಿ ನಾನು ಶೇ.95ರಷ್ಟು ಸಕಾರಾತ್ಮಕ ಗುಣಗಳನ್ನೇ ನೋಡಿದ್ದೇನೆ.

Advertisement

ಎಸ್‌.ಕೆ. ಭಗವಾನ್‌ ಅವರನ್ನು ನಾನು “ಶ್ರೀ ಕೃಷ್ಣ ಭಗವಾನ್‌’ ಎನ್ನುತ್ತಿದ್ದೆ. ಅವರಂಥ ಒಳ್ಳೆಯ ವ್ಯಕ್ತಿತ್ವ, ನಗು ಮುಖದ, ದೈವತ್ವದ ವ್ಯಕ್ತಿ ನನ್ನ ಗುರುಗಳು ಎಂದು ಹೇಳಲು ಹೆಮ್ಮೆ, ಗರ್ವ. ಚಿತ್ರರಂಗದ ಎಲ್ಲ ವಿಭಾಗಗಳ ಬಗ್ಗೆ ಅವರು ಅರಿತಿದ್ದರು. “ಆದರ್ಶ ಫಿಲಂ ಇನ್‌ಸ್ಟಿಟ್ಯೂಟ್‌” ನಲ್ಲಿ ಪ್ರಿನ್ಸಿಪಾಲ್‌ ಆಗಿ ಸಾಕಷ್ಟು ವಿದ್ಯಾರ್ಥಿಗಳಿಗೆ ಸಿನೆಮಾ ಬಗ್ಗೆ ಪಾಠ ಮಾಡಿದ್ದಾರೆ. ಭಗವಾನ್‌ ಅವರ ಸಾಕಷ್ಟು ಚಿತ್ರಗಳಿಗೆ ರಾಜನ್‌-ನಾಗೇಂದ್ರ ಅವರ ಸಂಗೀತವಿರುತ್ತಿತ್ತು. ಬಹುತೇಕ ಇವರ ಕಾಂಬಿನೇಶನ್‌ನ ಎಲ್ಲ ಚಿತ್ರದ ಹಾಡುಗಳು ಸೂಪರ್‌ ಹಿಟ್‌. ಇದರಿಂದ ಅವರಿಗಿದ್ದ ಸಂಗೀತ ಜ್ಞಾನ ಎಂಥದ್ದು ಎಂಬುದು ತಿಳಿಯುತ್ತದೆ. ಚಿತ್ರರಂಗದ ಆಧಾರಸ್ತಂಭ ಆಗಿದ್ದರು ಭಗವಾನ್‌. ರಾಜಕುಮಾರ್‌, ಜಿ.ವಿ. ಅಯ್ಯರ್‌, ನರಸಿಂಹರಾಜು, ಅಶ್ವಥ್‌, ಬಾಲಣ್ಣ, ದಿನೇಶ್‌, ಮುಸುರಿ ಕೃಷ್ಣಮೂರ್ತಿ ಎಲ್ಲರ ಜತೆ ಅವರಿದ್ದರು.

ನನ್ನ ಪ್ರಕಾರ ಭಗವಾನ್‌ ಓರ್ವ ಅದ್ಭುತ ನಿರ್ದೇಶಕ. ವಿಶೇಷವಾಗಿ ರಾಜಕುಮಾರ್‌ ಜತೆ ಅಧಿಕ ಚಿತ್ರಗಳನ್ನು ಮಾಡಿದ್ದರು. ನನ್ನ ಜತೆ 8-10 ಚಿತ್ರಗಳನ್ನು ಮಾಡಿದ್ದರು. ವಿಷ್ಣುವರ್ಧನ್‌, ಶಂಕರ್‌ನಾಗ್‌, ಅಂಬರೀಶ್‌ ಹೀಗೆ ಅನೇಕರ ಜತೆ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಭಗವಾನ್‌ ಅವರನ್ನು ಮೊದಲು ಭೇಟಿ ಮಾಡಿದ್ದು 1974ರ ಸಮಯದಲ್ಲಿ. “ಬಯಲು ದಾರಿ” ಸಿನೆಮಾದ ಬಗ್ಗೆ ಮಾತನಾಡಲು ಬಂದಿದ್ದರು. ಆಗ ನಾನಿನ್ನೂ ಚಿತ್ರರಂಗಕ್ಕೆ ಹೊಸಬ. ಭಗವಾನ್‌ ಅವರು ಬಂದು “ಬಯಲು ದಾರಿ”ಗೆ ನಿಮ್ಮನ್ನ ಆಯ್ಕೆ ಮಾಡಿದ್ದೇವೆ. ಕಲ್ಪನಾ ಈ ಸಿನೆಮಾದ ನಾಯಕಿ ಅಂದಾಗ ಖುಷಿ ಆಯಿತು. ಆಗ ನನಗೆ ಅದು ಒಂದು ದೊಡ್ಡ ಅವಕಾಶವಾಗಿತ್ತು. ಸಿನೆಮಾದ ಸಾಹಿತ್ಯ, ಸಂಭಾಷಣೆ, ಬರವಣಿಗೆ ಎಲ್ಲವನ್ನೂ ಭಗವಾನ್‌ ನೋಡಿಕೊಳ್ಳುತ್ತಿದ್ದರು. ವಿಶೇಷವಾಗಿ ಕನ್ನಡದ ಬಗ್ಗೆ ಸಾಕಷ್ಟು ಅಭಿಮಾನ ಇದ್ದ ಅವರು, ಜಾಗರೂಕತೆಯಿಂದ ಇರುತ್ತಿದ್ದರು. ಸಿನೆಮಾದಲ್ಲಿ ಕನ್ನಡ ಸಂಭಾಷಣೆಗಳಲ್ಲಿ ಯಾವುದೇ ಹಗುರವಾದ ಮಾತುಗಳನ್ನೂ ಅವರು ಸಹಿಸುತ್ತಿರಲಿಲ್ಲ. ಸ್ಕ್ರಿಪ್ಟ್ನಲ್ಲಿ ಏನು ಸಂಭಾಷಣೆ ಬರೆದಿದ್ದಾರೋ ಅದನ್ನೇ ಕಲಾವಿದರು ಹೇಳಬೇಕಿತ್ತು. “ನಿಮ್ಮದೇ ಯಾವುದೋ ವಾಕ್ಯ ಸೇರಿಸಬೇಡಿ, ಮರೆತರೆ ಮತ್ತೂಂದು ಟೇಕ್‌ ತೆಗೆದುಕೊಳ್ಳೊಣ” ಎಂದು ಎಲ್ಲ ನಟ-ನಟಿಯರಿಗೆ ಖಡಕ್‌ ಆಗಿ ಹೇಳುತ್ತಿದ್ದರು.

ನಾನು 10-12 ವರ್ಷ ಕರಾವಳಿಯಲ್ಲಿ ಬೆಳೆದಿದ್ದೆ. ಅನಂತರ ಮುಂಬಯಿಯ ರಂಗಭೂಮಿಯಿಂದ ಚಿತ್ರರಂಗಕ್ಕೆ ಕಾಲಿಟ್ಟೆ. ಭಗವಾನ್‌ ಹಳೇ ಮೈಸೂರಿನ ಸಂಸ್ಕೃತಿ, ಸಂಪ್ರದಾಯ, ಕನ್ನಡತನದ ಬಗ್ಗೆ ಸಾಕಷ್ಟು ಅರಿತಿದ್ದರು. ಮುಂಬಯಿಯಿಂದ ಬಂದ ನನಗೆ ಮೈಸೂರಿನ ಸಂಸ್ಕೃತಿ ಕುರಿತು ಹೇಳಿ, ಟ್ರೇನ್‌ ಮಾಡಿದ್ದರು. ಅವರ “ಬಯಲು ದಾರಿ”, “ಚಂದನದ ಗೊಂಬೆ”, “ಬೆಂಕಿಯ ಬಲೆ”, “ಬಿಡುಗಡೆಯ ಬೇಡಿ”, “ಸೇಡಿನ ಹಕ್ಕಿ”, ಕೊನೆಯ ಚಿತ್ರ “ಆಡುವ ಬೊಂಬೆ”, ಇದೇ ರೀತಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದೇನೆ.

ನನಗೆ ಕನ್ನಡದ ಚಿತ್ರರಂಗ ಒಂದೇ ಅಲ್ಲ, ಕನ್ನಡದ ನಟನೆ ಬಗ್ಗೆಯೂ ತಿಳಿವಳಿಕೆ ನೀಡಿ ಗುರು ಸ್ಥಾನದಲ್ಲಿದ್ದರು ಭಗವಾನ್‌. ವೈಯಕ್ತಿಕವಾಗಿ ನನ್ನ ಜತೆ
ಉತ್ತಮ ಬಾಂಧವ್ಯ ಹೊಂದಿದ್ದರು. ಅವರ 90 ವಯಸ್ಸಿನವರೆಗೂ ಕೊರೊನಾ ಮುಂಚೆ “ಆಡುವ ಗೊಂಬೆ” ಚಿತ್ರದ ಚಿತ್ರೀಕರಣಕ್ಕೂ ಸ್ವತಃ ಅವರೇ ಕಾರನ್ನು ಚಲಾಯಿಸಿಕೊಂಡು ಬರುತ್ತಿದ್ದರು. ನಾನು ಆಶ್ಚರ್ಯದಿಂದ ನೋಡುತ್ತಿದ್ದೆ. ಕಾರಿನಲ್ಲಿ ಕುರಿಸಿ ನನ್ನ ಕಣ್ಣಿಂದ ದೂರವಾಗುವವರೆಗೂ ಅವರನ್ನು ನೋಡುತ್ತಿದ್ದೆ.
~ಅನಂತನಾಗ್‌, ಹಿರಿಯ ನಟ

Advertisement
Advertisement

Udayavani is now on Telegram. Click here to join our channel and stay updated with the latest news.

Next