Advertisement
ಪ್ರಮೀಳಾ ಪ್ರೈವೇಟ್ ಬ್ಯಾಂಕೊಂದರಲ್ಲಿ ಉದ್ಯೋಗಿ. ತಿಂಗಳಿಗೆ ಹತ್ತು-ಹನ್ನೆರಡು ಸಾವಿರ ಗಿಟ್ಟುತ್ತದೆ. ಇರುವುದು ವರ್ಕಿಂಗ್ ವುಮೆನ್ ಹಾಸ್ಟೆಲ್‌ನಲ್ಲಿ. ಮೆಸ್‌ನಲ್ಲಿ ಊಟ ರೆಡಿಯಾಗಿರುತ್ತದೆ. ತಿಂದುಂಡ ಬಳಿಕ ಸಾಕಷ್ಟು ಸಮಯ ಉಳಿದಿರುತ್ತದೆ. ಊರಿನಲ್ಲಿ ತಂದೆ ರಿಟೈರ್ಡ್ ಎಲ್‌ಐಸಿ ಆಫೀಸರ್. ಹೇರಳವಾದ ಕೃಷಿಯಿದೆ. ಅಣ್ಣ ಇಂಜಿನಿಯರ್. ಇಂಥ ಸುಖ ಇರುವಾಗ ಮತ್ತೇನು ಬೇಕು ಎಂದು ಮೈಮರೆಯುತ್ತಿರುವಾಗಲೇ ತನಗೆ ವರುಷ 28 ದಾಟುತ್ತದೆ ಎಂದು ಅವಳಿಗೆ ಅರಿವಾಗುತ್ತದೆ. ಮದುವೆಯಾಗಬೇಕೆಂಬ ಆಸೆಯೇನೂ ಇದೆ. ಮದುವೆಯಾಗಲು ಕಾತರಿಸುವ ಹುಡುಗರೂ ಸಿಕ್ಕಿಯಾರು, ಆದರೆ ವೇಳೆ ಕೂಡಿ ಬರುತ್ತಿಲ್ಲ !
ಅಪ್ಪನಿಗೆ ಅವರು ಮೂವರು ಮಕ್ಕಳು. ಅಣ್ಣ ಇಂಜಿನಿಯರ್ ಆಗಿದ್ದರೆ, ಅಕ್ಕ ಪಿಯುಸಿ ಓದಿ ಮನೆಯಲ್ಲಿಯೇ ಇರುವವಳು. ಅವಳಿಗೆ ಮದುವೆಯಾಗಲಿಲ್ಲವೆಂದು ಅಣ್ಣನೂ ಮದುವೆಯಾಗದೆಯೇ ಉಳಿದಿದ್ದಾನೆ. ಗೌರ್ಮೆಂಟ್ ಉದ್ಯೋಗದ ಹುಡುಗನೇ ಬೇಕೆಂಬುದು ಅವಳ ಹಠ. ಆದರೆ ಪಿಯುಸಿ ಕಲಿತು ಮನೆಯಲ್ಲಿರುವವಳಿಗೆ ಸರಕಾರಿ ಉದ್ಯೋಗಿ ವರ ಎಲ್ಲಿ ಸಿಗುತ್ತಾನೆ? ಪ್ರೈವೇಟ್ ಕೆಲಸವೇ ಆದರೇನಂತೆ, ಕೃಷಿ ಕೆಲಸವಾದರೂ ಅಡ್ಡಿಯಿಲ್ಲ ; ಎಲ್ಲ ಕ್ಷೇತ್ರಗಳಲ್ಲಿಯೂ ದುಡಿಯುವ ಮನಸ್ಸಿದ್ದರೆ ಆದಾಯವೂ ಬಂದೇ ಬರುತ್ತದೆ. ಆದರೆ ಅವಳು ಕೇಳಬೇಕಲ್ಲ. ಮದುವೆಯಾಗಲಾರೆ ಎಂದು ಗಟ್ಟಿ ಮನಸ್ಸು ಮಾಡಿ ಕೂತಿದ್ದಾಳೆ. ವರುಷ 30 ದಾಟಿತು. ಹಾಗೆಂದು ಯಾವತ್ತೂ ಮದುವೆಯೇ ಆಗಲಾರೆ ಎಂಬ ಇರಾದೆಯೇನೂ ಅವಳದಲ್ಲ. ಅಕ್ಕ ಮದುವೆಯಾಗದೆ ಉಳಿದ ಮೇಲೆ ತಾನು ಮದುವೆಯಾಗುವುದಾದರೂ ಹೇಗೆ ಎಂದು ಸುಮ್ಮನೆ ಇದ್ದಾಳೆ ಅಷ್ಟೆ. ಬರುವ ವರ್ಷ ಇದೇ ಹೊತ್ತಿಗೆ ತನ್ನ ವಯಸ್ಸಿಗೆ ಇನ್ನೊಂದು ವರ್ಷ ಸೇರ್ಪಡೆಯಾಗುತ್ತದೆ ಎಂಬ ಅರಿವು ಅವಳಿಗಿದ್ದೇ ಇದೆ. ಒಂದೋ ಮನೆಯವರು ಮದುವೆ ಮಾಡಿಸಬೇಕು ಇಲ್ಲವೇ, ತಾನೇ ಮದುವೆಯಾಗಬೇಕು. ಅಕ್ಕನಿಗೆ ಲಗ್ನ ಕೂಡಿ ಬರದೆ ಮನೆಯವರು ತನ್ನ ಮದುವೆ ಪ್ರಸ್ತಾಪವೆತ್ತಲಿಕ್ಕಿಲ್ಲ. ತಾನೇ ಯಾರನ್ನಾದರೂ ಮೆಚ್ಚಿ ಮದುವೆಯಾದರೆ… ಮನೆಯವರಿಗೆ ವೃಥಾ ಬೇಸರ, ಇಲ್ಲದ ಕಿರಿಕಿರಿ. ತನ್ನ ತರಗತಿಯ ಹುಡುಗರು, ಹುಡುಗಿಯರು ಎಲ್ಲೆಲ್ಲೋ ಉದ್ಯೋಗದಲ್ಲಿರುವವರು, ಮದುವೆಯ ಆಮಂತ್ರಣ ಪತ್ರಿಕೆ ಕಳುಹಿಸುತ್ತಲೇ ಇರುತ್ತಾರೆ. ತನಗೆ ಈ ಯೋಗ ಯಾವಾಗ ಬರುತ್ತದೋ ಎಂದು ಪ್ರಮೀಳಾ ಆಗಾಗ ಭಾವುಕಳಾಗಿ ಯೋಚಿಸುತ್ತಲೇ ಇರುತ್ತಾಳೆ.
Related Articles
.
ಹುಡುಗರು ಮದುವೆಯಾಗದಿರುವುದಕ್ಕೆ ಒಂದು ಸಾಮಾನ್ಯ ಕಾರಣವೆಂದರೆ ಅವರ ತಂಗಿಯರು ಮದುವೆಯಾಗದಿರುವುದು. ತನ್ನ ಸ್ವಂತ ತಂಗಿ ಮದುವೆಯ ಪ್ರಾಯಕ್ಕೆ ಬಂದಿದ್ದರೂ ಅವಳಿಗೆ ಸರಿಯಾದ ವರ ಸಿಗದೇ ಹೋದರೆ ಮದುವೆಯಾಗದೇ ಉಳಿಯುವ ಎಷ್ಟೋ ಮಂದಿ ಅಣ್ಣಂದಿರಿದ್ದಾರೆ. ತಮ್ಮ ಅಕ್ಕನ ಮಗಳಿಗೆ ಮದುವೆಯಾಗದಿದ್ದರೂ ಅವಳಿಗೆ ಸೂಕ್ತ ವರ ಸಿಗುವವರೆಗೆ ತಾವೂ ಅವಿವಾಹಿತರಾಗಿಯೇ ಉಳಿಯುವ ಉದಾತ್ತರಿದ್ದಾರೆ. ತಂಗಿಯಲ್ಲ, ಅಕ್ಕನ ಮಗಳಲ್ಲ, ತಮ್ಮ ನಿಕಟ ಸಂಬಂಧಿಕ ವರ್ಗದಲ್ಲಿ ಯಾವುದೇ ಮನೆಯಲ್ಲಿ ಪ್ರಾಯಕ್ಕೆ ಬಂದ ಹೆಣ್ಣು ಮದುವೆಯಾಗದೆ ಉಳಿದಿದ್ದರೂ ತಾವು ಮದುವೆಯನ್ನು ಮುಂದೂಡುವ ಉತ್ತಮ ಸಂಸ್ಕಾರ ಹೆಚ್ಚಿನ ಕುಟುಂಬಗಳ ಪುರುಷರಲ್ಲಿದೆ. ಇದನ್ನು ತ್ಯಾಗವೆಂದು ಕರೆದರೂ ತಪ್ಪಲ್ಲ. ಆದರೆ, ಕಾಲ ಬದಲಾಗಿದೆ. ತ್ಯಾಗ ಮಾಡಬೇಕಾದ ಅನಿವಾರ್ಯತೆ ಹುಡುಗಿಯರ ಮುಂದೆಯೂ ಇದೆ. ಮನೆಯವರಿಗೋಸ್ಕರ ತಮ್ಮ ಮದುವೆಯನ್ನು ಮುಂದೂಡಬೇಕಾದ ಸ್ಥಿತಿ ಕೆಲವು ಹೆಣ್ಣುಮಕ್ಕಳ ಪಾಲಿಗಿದೆ.
Advertisement
.ಪ್ರಮೀಳಾಳಿಗೆ ತನ್ನ ಅಕ್ಕನ ಮದುವೆಯಾಗದಿರುವ ಚಿಂತೆ. ಅಕ್ಕನು ಮದುವೆಯಾಗದಿರುವವರೆಗೆ ತಾನೂ ಮದುವೆಯಾಗಲಾರೆ ಎಂಬ ಹಠ.
.ಸಂಜನಾ ಕಂಪ್ಯೂಟರ್ ಕಂಪೆನಿಯೊಂದರಲ್ಲಿ ಉತ್ತಮ ಸಂಬಳ ಪಡೆಯುವ ಹುಡುಗಿ. ತಂದೆತಾಯಿ ಬಡವರು. ಈಗ ಮಗಳ ಸಂಬಳದಿಂದ ಕೊಂಚ ಸುಧಾರಿಸಿದ್ದಾರೆ. ಸಂಜನಾಳ ತಮ್ಮ ಪಿಯುಸಿ ಓದುತ್ತಿದ್ದಾನೆ. “”ಅವನ ಎಜುಕೇಶನ್ ಆಗುವವರೆಗೆ, ಬಹುಶಃ ಇಂಜಿನಿಯರಿಂಗ್ ಕಲಿಯುವವರೆಗೆ ನೀನು ಮದುವೆಯಾಗುವುದು ಬೇಡ” ಎನ್ನುತ್ತಾರೆ ಮನೆಯವರು. ಒಂದು ವೇಳೆ ಸಂಜನಾಳಿಗೆ ಮದುವೆಯಾದ ಮೇಲೆ ಅವಳ ಗಂಡನ ಮನೆಯವರು ತವರಿಗೆ ಸಹಾಯ ಮಾಡಲು ಒಪ್ಪದಿದ್ದರೆ! ಅವಳ ತಮ್ಮ ಅನಿವಾರ್ಯವಾಗಿ ವಿದ್ಯಾಭ್ಯಾಸವನ್ನು ತೊರೆದು ಹೊಟ್ಟೆಪಾಡಿಗೆ ಯಾವುದಾದರೂ ಉದ್ಯೋಗ ಹಿಡಿಯುವ ಆವಶ್ಯಕತೆ ಒದಗಿದರೆ! ಛೆ, ತನ್ನ ಮನೆಯವರಿಗೆ ತೊಂದರೆಯಾಗಬಾರದೆಂದು ಅವಳು ಮದುವೆಯಾಗದೇ ಇರಲು ಯೋಚಿಸುತ್ತಾಳೆ.
.ಸ್ಮಿತಾ ತಂದೆತಾಯಿಗೆ ಒಬ್ಬಳೇ ಮಗಳು. ಹೇಗೋ ಕಷ್ಟಪಟ್ಟು ಓದಿ ಕಾಲೇಜೊಂದರಲ್ಲಿ ಲೆಕ್ಚರರ್ ಆಗಿ ಸೇರಿಕೊಂಡಳು. ಅವಳ ತಂದೆ ಹಾರ್ಟ್ ಪೇಷಂಟ್. ತಾಯಿಯ ಆರೋಗ್ಯವೂ ಅಷ್ಟಕ್ಕಷ್ಟೇ. ಇಂಥ ಸ್ಥಿತಿಯಲ್ಲಿ ಅವರು ಮದುವೆಯಾಗಿ ಗಂಡನ ಮನೆ ಸೇರುವುದಾದರೂ ಹೇಗೆ? ತಾನು ಹಾಗೆ ಏಕಾಏಕಿ ಹೊರಟುಬಿಟ್ಟರೆ ತಂದೆತಾಯಿಗೆ ಯಾರು ಗತಿ?
.ರೀನಾಳ ತಂದೆ ಫಂಡ್ ನಡೆಸಿ, ನಷ್ಟ ಹೊಂದಿ ಸರ್ವಸ್ವವನ್ನೂ ಕಳೆದುಕೊಂಡು ಸಾಲಗಾರರಿಂದ ಮುಕ್ತನಾಗಲು ಬ್ಯಾಂಕಿನಿಂದ 4 ಲಕ್ಷ ಲೋನ್ ತೆಗೆದ. ಕೊನೆಗೆ ಈ ಲೋನನ್ನೂ ಕಟ್ಟಲಾಗದೆ ಅದು ಬಡ್ಡಿಗೆ ಬಡ್ಡಿ ಸೇರಿ ಐದು ಲಕ್ಷವಾಗಿ ಅವರ ಆಸ್ತಿ ಹರಾಜಾಗುವ ಸ್ಥಿತಿ ಬಂದಿತ್ತು. ಇಂಥ ಪರಿಸ್ಥಿತಿಯಲ್ಲಿ ರೀನಾ ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿ, ಸಂಜೆ ಮುದ್ರಣಾಲಯವೊಂದರಲ್ಲಿ ಪ್ರೂಫ್ ತಿದ್ದುವ ಕೆಲಸಕ್ಕೆ ಸೇರಿ ಹೇಗೋ ತಿಂಗಳಿಗೆ ಎರಡು ಸಾವಿರವನ್ನು ಬ್ಯಾಂಕಿಗೆ ತುಂಬುತ್ತಿದ್ದಾಳೆ. ಮನೆಯ ಸುಖಕಷ್ಟಗಳಿಗೆ ತಲೆಕೊಡದ ಅಣ್ಣನೊಬ್ಬನಿದ್ದಾನೆ. ಈಗ ಮನೆಯನ್ನು ಸಂಕಷ್ಟದಿಂದ ಪಾರುಮಾಡುವ ಜವಾಬ್ದಾರಿ ಸಂಪೂರ್ಣವಾಗಿ ರಜನಿಯ ಮೇಲಿದೆ. “”ನೀನು ಮದುವೆಯಾಗಿ ಹೋದರೆ ಈ ಸಾಲ ಯಾರು ತೀರಿಸುವುದು? ಸಾಲ ಎಲ್ಲ ತೀರಿದ ಮೇಲೆಯೇ ನೀನು ಮದುವೆಯಾಗು” ಎಂದು ಅವಳ ಅಮ್ಮನೇ ಬಾಯಿಬಿಟ್ಟು ಹೇಳಿದ್ದಾಳೆ. ಹಾಗಿರುವಾಗ ಅವಳು ಮದುವೆಯಾಗುವುದಾದರೂ ಹೇಗೆ? ಬ್ಯಾಂಕ್ ಸಾಲವಂತೂ ಫಕ್ಕನೆ ಮುಗಿಯುವ ಲಕ್ಷಣ ಕಾಣುವುದಿಲ್ಲ..
“”ಈಗೀಗ ಉದ್ಯೋಗದಲ್ಲಿರುವ ಹುಡುಗಿಯರು ಮದುವೆಯಾಗುವುದಿಲ್ಲ. ಸ್ವತಂತ್ರವಾಗಿ ಇರ ಬಯಸುತ್ತಾರೆ” ಎಂದು ಆರೋಪಿಸುವ ಮಂದಿ ಉದ್ಯೋಗದಲ್ಲಿರುವ ಹೆಣ್ಣು ಎಂಥ ಸಂದಿಗ್ಧದಲ್ಲಿದ್ದಾಳೆ ಎಂಬ ಬಗ್ಗೆ ಯೋಚನೆ ಮಾಡುವುದಿಲ್ಲ. ಹುಡುಗರಿಗೆ ಮನೆಯ ಜವಾಬ್ದಾರಿ ಇತ್ತು. ಏಕೆಂದರೆ, ಹಣ ಗಳಿಕೆಗೆ ದಾರಿಯಾಗಿರುವ ಉದ್ಯೋಗ ಅವರಿಗೇ ಮೀಸಲಾಗಿತ್ತು. ಆದರೆ, ಯಾವಾಗ ಸ್ತ್ರೀಯು ಈ ಉದ್ಯೋಗ ಕ್ಷೇತ್ರಕ್ಕೆ ಪ್ರವೇಶಿಸಿದಳ್ಳೋ ಅವಳ ಮೇಲೂ ಮನೆ ಪಾಲನೆಯ ಗುರುತರವಾದ ಹೊಣೆ ಬಿತ್ತು. ಹಾಗಾಗಿ ಇದರೊಂದಿಗೆ ಬರುವ ಬದ್ಧತೆಗಳೆಲ್ಲ ಅವಳಿಗೂ ಅಂಟಿಕೊಂಡವು. ಹೆಚ್ಚಿನ ಹುಡುಗಿಯರಲ್ಲಿ ಮದುವೆಯಾಗದಿರುವುದಕ್ಕೆ ಅಥವಾ ಮದುವೆ ತಡವಾಗುವುದಕ್ಕೆ ಮನೆಯ ಜವಾಬ್ದಾರಿಯ ಬದ್ಧತೆಯೂ ಒಂದು ಪ್ರಮುಖ ಕಾರಣವಾಗುತ್ತದೆ. ಇಂಥ ಸಂಕೀರ್ಣ ಸ್ಥಿತಿಯನ್ನು ಸರಿಯಾಗಿ ವಿವೇಚಿಸದೆ ಪ್ರಮೀಳಾ, ಸಂಜನಾ, ಸ್ಮಿತಾ, ರೀನಾ ಮುಂತಾದ ಅವಿವಾಹಿತ ಮಹಿಳೆಯರ ಬಗ್ಗೆ ತೀರಾ ಸರಳವಾಗಿ ಮಾತನಾಡುತ್ತೇವೆ.
.
ಹುಡುಗರು ಬೆಳೆದರೆ ಬಾರ್, ಕ್ಲಬ್‌ಗಳೆಂದು ಅಲೆದಾಡುತ್ತಾರೆ, ಹುಡುಗಿಯರಾದರೆ ನೇರವಾಗಿ ಮನೆ ಸೇರುತ್ತಾರೆ ಎಂದು ಭಾವಿಸಲಾಗುತ್ತಿರುವ ಕಾಲದಲ್ಲಿ ತಂದೆತಾಯಿಗಳಿಗೆ ತಮ್ಮ ಮಗಳಂದಿರ ಮೇಲೆಯೇ ಹೆಚ್ಚಿನ ಪ್ರೀತಿ-ವಿಶ್ವಾಸ ಮೂಡುತ್ತಿದೆ. ಮಗಳಂದಿರು ಉದ್ಯೋಗಕ್ಕೆ ಸೇರಿ ಹಣ ಸಂಪಾದಿಸಿ ತಂದು ಕುಟುಂಬವನ್ನು ಹೊರೆಯುವುದರಿಂದ ಅವರ ಬಗ್ಗೆ ಅಭಿಮಾನ ಹೆಚ್ಚುತ್ತಿದೆ. ಇದು ಉತ್ತಮ ಬೆಳವಣಿಗೆಯೇ ಆಗಿದೆ. ಆದರೆ, ಹೆಣ್ಣನ್ನು ಮದುವೆ ಮಾಡಿಕೊಟ್ಟರೆ ಅವಳು ಮನೆಯ ಸಂಬಂಧವನ್ನು ಕಡಿದುಕೊಳ್ಳುತ್ತಾಳೆ ಎಂಬ ಆತಂಕಮಿಶ್ರಿತ ಭಾವನೆ ಆಳವಾಗಿ ತಳ ಊರಿರುವುದ ರಿಂದಾಗಿ ಮನೆಗೆ ಆಧಾರವಾಗಿರುವ ಹೆಣ್ಣಿಗೆ ಮದುವೆ ಮಾಡಿಸುವುದರಲ್ಲಿ ಹಿಂದೇಟಿಗೆ ಕಾರಣವಾಗುತ್ತಿದೆ. ಆದರೆ ಇತ್ತೀಚಿಗಿನ ವರ್ಷಗಳಲ್ಲಿ ಮನೆಗೆ ಒಬ್ಬಳು ಮಗಳು, ಒಬ್ಬ ಮಗ, ಹೆಚ್ಚೆಂದರೆ ಮೂವರು ಮಕ್ಕಳು. ತೀರಾ ಇತ್ತೀಚೆಗಂತೂ ಗಂಡಾಗಲಿ, ಹೆಣ್ಣಾಗಲಿ ಒಂದೇ ಮಗು ಎಂಬ ನಿರ್ಧಾರ ಬಲವಾಗುತ್ತಿದೆ. ಇಂಥ ಸನ್ನಿವೇಶದಲ್ಲಿ ಹೊಸ ಮನೋಸ್ಥಿತಿಗೆ ಎಲ್ಲರೂ ತಯಾರಾಗಬೇಕಿದೆ. ಒಬ್ಬಳೇ ಮಗಳಾದರೂ ಮದುವೆಮಾಡಿಕೊಡಲೇಬೇಕಲ್ಲ ಎಂಬ ಪೂರ್ವತಯಾರಿ ಅವರಲ್ಲಿ ಸಹಜವಾಗಿ ಮೂಡುತ್ತದೆ. ಹೆಣ್ಣನ್ನು ಮದುವೆ ಮಾಡಿಕೊಡುವುದೆಂದರೆ ಅವಳನ್ನು ಅವಳ ತವರು ಮನೆಯ ಸಂಬಂಧದಿಂದ ಬೇರ್ಪಡಿಸುವುದಲ್ಲ ಎಂಬ ಭಾವನೆ ಸಮಾಜದಲ್ಲಿ ಮೂಡುವವರೆಗೆ ಉದ್ಯೋಗದಲ್ಲಿರುವ ಹೆಣ್ಣುಮಕ್ಕಳ ಮದುವೆ ಒಂದು ಸಮಸ್ಯೆಯಾಗಿಯೇ ಉಳಿಯುತ್ತದೆ. ಹಾಗಾಗದಿರಬೇಕಾದರೆ ಗಂಡುಗಳಲ್ಲಿ ವಿಶಾಲ ಭಾವನೆ ಮೂಡಬೇಕು. ಹೆಣ್ಣಾದವಳು ಅತ್ತೆಮಾವಂದಿರನ್ನು ತನ್ನ ತಂದೆತಾಯಿಗಳಂತೆ ಕಾಣಬೇಕೆಂಬ ಮಾತಿದೆ. ಅದೇ ರೀತಿ ಪ್ರತಿಯೊಬ್ಬ ವಿವಾಹಿತ ಯುವಕನೂ ತನ್ನ ಹೆಂಡತಿಯ ತಂದೆತಾಯಿಗಳನ್ನೂ ತನ್ನ ಹೆತ್ತವರೆಂದೇ ಭಾವಿಸಿ ಗೌರವಿಸಬೇಕು. ತನ್ನ ಹೆಂಡತಿಯ ಮನೆಯ ಸುಖದಲ್ಲೂ ದುಃಖ ದಲ್ಲೂ ಸಮಭಾಗಿಯಾಗಬೇಕು. ಅಂಥ ಮನಸ್ಸು ಎಲ್ಲರಲ್ಲೂ ಮೂಡುವಂತಾಗಲಿ. ಜಯಲಕ್ಷ್ಮೀ ಗಾಂವ್ಕರ