Advertisement

ಕನ್ನಡಿಗರಿಗೆ ರಿಯಾಯಿತಿಗಾಗಿ ಒತ್ತಾಯಿಸುತ್ತೇನೆ : ನೆಲ್ಲಿಕುನ್ನು

06:00 AM May 24, 2018 | |

ಕಾಸರಗೋಡು: ಒಂದು ಭಾಷೆಯನ್ನು ಹೇರುವುದು ಅನ್ಯಾಯ. ಕೇರಳ ಸರಕಾರ ಮಲಯಾಳ ಕಲಿಕೆಯನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎಲ್ಲ ಶಾಲೆಗಳಲ್ಲಿ ಮಲಯಾಳ ಕಲಿಕೆ ಅನಿವಾರ್ಯವಾಗಿದೆ. ಆದರೆ ಭಾಷಾ ಅಲ್ಪಸಂಖ್ಯಾಕ ಪ್ರದೇಶ ವಾಗಿರುವ ಕಾಸರಗೋಡಿನ ಕನ್ನಡಿಗರ ಮೇಲೆ ಮಲಯಾಳ ಹೇರಿಕೆ ಕೂಡದು. ಮಲಯಾಳ ಹೇರಿಕೆಯಿಂದ ಕಾಸರಗೋಡಿನ ಭಾಷಾ ಅಲ್ಪಸಂಖ್ಯಾಕ ಕನ್ನಡಿಗರು ಅನುಭವಿಸುವ ಸಮಸ್ಯೆಗಳ ಬಗ್ಗೆ ಮತ್ತು ಕಾಸರಗೋಡಿನ ಕನ್ನಡಿಗರನ್ನು ಮಲಯಾಳ ಕಲಿಕೆ ಕಡ್ಡಾಯ ದಿಂದ ರಿಯಾಯಿತಿ ನೀಡಬೇಕೆಂದು ಸರಕಾರವನ್ನು ಒತ್ತಾಯಿಸುವುದಾಗಿ ಕಾಸರಗೋಡು ಶಾಸಕ ಎನ್‌.ಎ.ನೆಲ್ಲಿಕುನ್ನು ಅವರು ಭರವಸೆ ನೀಡಿದರು.

Advertisement

ಕೇರಳ ಸರಕಾರ ಜಾರಿಗೆ ತಂದಿರುವ ಒಂದನೇ ತರಗತಿಯಿಂದ ಹತ್ತನೇ ತರಗತಿಯ ವರೆಗೆ ಮಲಯಾಳ ಕಡ್ಡಾಯ ಕಲಿಕೆ ಯನ್ನು ಪ್ರತಿಭಟಿಸಿ ಕನ್ನಡ ಹೋರಾಟ ಸಮಿತಿ ನೇತೃತ್ವ ದಲ್ಲಿ ಕಾಸರಗೋಡು ಹೊಸ ಬಸ್‌ ನಿಲ್ದಾಣ ಪರಿಸರದಲ್ಲಿ ಆಯೋಜಿಸಿದ ಒಂದು ವಾರದ ಧರಣಿ ಸತ್ಯಾಗ್ರಹವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾಸರಗೋಡಿನ ಭಾಷಾ ಅಲ್ಪಸಂಖ್ಯಾಕರಿಗೆ ಸಂವಿಧಾನಬದ್ಧವಾಗಿ ನೀಡಿರುವ ಹಕ್ಕು, ಅವಕಾಶಗಳನ್ನು ಕಸಿದುಕೊಳ್ಳುವುದು ಸಮಂಜಸವಲ್ಲ. ಕಾಸರಗೋಡಿನ ಕನ್ನಡಿಗರ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳು ವುದು ನನ್ನ ಜವಾಬ್ದಾರಿಯೂ ಹೌದು. ಈ ಹಿನ್ನೆಲೆಯಲ್ಲಿ ಕನ್ನಡದ ಪರವಾಗಿ ವಿಧಾನಸಭೆಯಲ್ಲೂ, ಹೊರಗೂ ವಾದಿಸುತ್ತೇನೆ ಎಂದರು. ಹಿಂದಿನ ಯುಡಿಎಫ್‌ ಸರಕಾರ ಮಲಯಾಳ ಕಲಿಕೆ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದಾಗ ಭಾಷಾ ಅಲ್ಪಸಂಖ್ಯಾಕರ  ಪರವಾಗಿ ಸಾಕಷ್ಟು ತಿದ್ದುಪಡಿ ತಂದು ಮಲಯಾಳ ಕಲಿಕೆ ಕಡ್ಡಾಯದಿಂದ ಕಾಸರಗೋಡನ್ನು ಹೊರತುಪಡಿಸಲಾಗಿತ್ತು. 

ಆದರೆ ಇದೀಗ ಎಡರಂಗ ಸರಕಾರ ಮಲಯಾಳ ಕಲಿಕೆ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಭಾಷೆ ಕಲಿಕೆ ಅವರವರಿಗೆ ಸಂಬಂಧಿಸಿದ ವಿಚಾರ. ಭಾಷೆ ಕಲಿಕೆಗೂ ಎಲ್ಲರೂ ಸ್ವತಂತ್ರರು. ಈ ಸ್ವತಂತ್ರವನ್ನು ಕಸಿದುಕೊಳ್ಳುವುದು ಸಂವಿಧಾನಬಾಹಿರವಾಗಿದೆ ಎಂದರು. ಹಿಂದಿನ ಸರಕಾರದ ಸಂದರ್ಭದಲ್ಲಿ ಕಾಸರಗೋಡಿಗೆ ಎಲ್ಲಾ ಸುತ್ತೋಲೆ, ಅರ್ಜಿಗಳನ್ನು ಕನ್ನಡದಲ್ಲಿ ನೀಡುವಂತೆ ಒತ್ತಾಯಿಸಿದ್ದೆ ಎಂದು ಅವರು ಹೇಳಿದರು. ಭಾಷೆ ಎಂದರೆ ಸಂಸ್ಕೃತಿಯ ದ್ಯೋತಕ ವಾಗಿದೆ. ಭಾಷೆ ನಾಶ ಒಂದು ಸಂಸ್ಕೃತಿ ನಾಶವಾಗಲು ಕಾರಣವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಧರಣಿ ಸತ್ಯಾಗ್ರಹದಲ್ಲಿ ಕನ್ನಡ ಹೋರಾಟ ಸಮಿತಿ ಅಧ್ಯಕ್ಷರಾಗಿರುವ ನ್ಯಾಯವಾದಿ ಮುರಳೀಧರ ಬಳ್ಳಕ್ಕುರಾಯ ಅವರು ಅಧ್ಯಕ್ಷತೆ ವಹಿಸಿದರು.

Advertisement

ಕನ್ನಡ ನಮ್ಮ ಹಕ್ಕು : ಮಕ್ಕಳಿಗೆ ಮಲಯಾಳ ಹೇರುವುದು ಸರಿಯಲ್ಲ. ಕನ್ನಡ ಭಾಷೆ, ಸಂಸ್ಕೃತಿಯನ್ನು ನಾಶ ಮಾಡುವ ಉದ್ದೇಶದಿಂದ ಮಲಯಾಳ ಕಲಿಕೆ ಕಡ್ಡಾಯಗೊಳಿಸಿದೆ. ಆದರೆ ಭಾಷಾ ಅಲ್ಪಸಂಖ್ಯಾಕ‌ರಿಗೆ ನೀಡಲಾದ ಎಲ್ಲಾ ಹಕ್ಕು ಸವಲತ್ತುಗಳನ್ನು ಹತ್ತಿಕ್ಕುವುದು ಸಂವಿಧಾನದ ಉಲ್ಲಂಘನೆಯಾಗಿದೆ. ಕೇರಳ ಸರಕಾರದ ಮಲಯಾಳ ಕಡ್ಡಾಯ ಮೂಲಕ ಕನ್ನಡಿಗರ ಹಕ್ಕನ್ನು ತುಳಿಯುತ್ತಿದೆ. ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಸರಕಾರದ ಆದೇಶದ ವಿರುದ್ಧ ಹೋರಾಟ ಅನಿವಾರ್ಯವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ಕೇರಳ ಗಡಿನಾಡ ಘಟಕ ಅಧ್ಯಕ್ಷ ಎಸ್‌.ವಿ. ಭಟ್‌ ಅವರು ಹೇಳಿದರು.

ಒತ್ತಾಯಪೂರ್ವಕ ಪುಸ್ತಕ ರವಾನೆ 
ಎಲ್ಲ ಶಾಲೆಗಳಿಗೆ ಒತ್ತಾಯ ಪೂರ್ವಕವಾಗಿ ಮಲಯಾಳ ಪುಸ್ತಕಗಳನ್ನು ಕಾಸರಗೋಡು ಜಿಲ್ಲಾ ಡಿ.ಡಿ. ಪ್ರಯತ್ನಿಸುತ್ತಿದ್ದಾರೆ. ಇದರ ಹಿಂದೆ ಗೂಢಾಲೋಚನೆ ಇದೆ ಎಂದು ಕೇರಳ ರಾಜ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಮಾಜಿ ಅಧ್ಯಕ್ಷ ಎಂ.ವಿ. ಮಹಾಲಿಂಗೇಶ್ವರ ಭಟ್‌ ಹೇಳಿದರು.

ಕಾನೂನು ಒಳಿತಿಗಾಗಿ : ಕಾನೂನು ಮಾಡುವುದು ಮಾನವನ ಒಳಿತಿಗಾಗಿ. ನಿರ್ಮೂಲನ ಮಾಡುವುದಕ್ಕಲ್ಲ. ಆದರೆ ಕೇರಳ ಸರಕಾರ ಈ ನಿಟ್ಟಿನಲ್ಲಿ ಹೆಜ್ಜೆ ಇರಿಸಿದೆ. ಕನ್ನಡಿಗರು ಯಾವುದೇ ಬೆದರಿಕೆಗೆ ಮಣಿಯುವುದಿಲ್ಲ. ಬೆದರುವವರೂ ನಾವಲ್ಲ. ಸಂವಿಧಾನ ಬದ್ಧ ಹಕ್ಕುಗಳನ್ನು ರಕ್ಷಿಸುವುದು ಸರಕಾರದ ಜವಾಬ್ದಾರಿಯಾಗಿದೆ. ಇನ್ನಾದರೂ ಸರಕಾರ ಕಣ್ಣು ತೆರೆಯಬೇಕು ಎಂದು ಸಾಹಿತಿ ವಿ.ಬಿ.ಕುಳಮರ್ವ ಹೇಳಿದರು.

ಕನ್ನಡದ ಸಮಸ್ಯೆಗೆ ಸ್ಪಂದಿಸಬೇಕು 
ಕನ್ನಡಿಗರಿಗೆ ಎದುರಾಗಿರುವ ಸಮಸ್ಯೆಗಳನ್ನು ಪರಿಹರಿಸಲು ಪ್ರತಿಯೊಬ್ಬ ಕನ್ನಡಿಗ ಸ್ಪಂದಿಸ ಬೇಕು. ಈ ಬಗ್ಗೆ ಆಮಂತ್ರಣಕ್ಕೆ ಕಾಯ ಬಾರದು ಎಂದು ಗೋವಿಂದ ಭಟ್‌ ಬಳ್ಳಮೂಲೆ ಅವರು ಹೇಳಿದರು.

ಎಲ್ಲವನ್ನು ಸರಿಮಾಡುತ್ತಿದೆ
ಎಲ್ಲವನ್ನೂ ಸರಿಮಾಡುವುದಾಗಿ ಭರವಸೆ ನೀಡಿ ಅಧಿಕಾರಿಕ್ಕೇರಿದ ಎಡರಂಗ ಸರಕಾರ ಈಗ ಎಲ್ಲವನ್ನು “ಸರಿ ಮಾಡುತ್ತಿದೆ’ ಎಂದು ತಾರಾನಾಥ ಮಧೂರು ಹೇಳಿದರು. ಸರಕಾರ ಹುಕುಂ ಕಳುಹಿಸದಿದ್ದರೂ ಡಿ.ಡಿ. ಬೆದರಿಕೆಯ ಮೂಲಕ ಮಲಯಾಳ ಹೇರುತ್ತಿದ್ದಾರೆ ಎಂದರು.

ಧರಣಿಯನ್ನು ಉದ್ದೇಶಿಸಿ ರಾಮ್‌ ಪ್ರಸಾದ್‌, ಬಾಲಕೃಷ್ಣ ಅಗ್ಗಿತ್ತಾಯ, ಪ್ರಭಾವತಿ ಕೆದಿಲಾಯ, ಸತೀಶ್‌ ಮಾಸ್ಟರ್‌ ಕೂಡ್ಲು, ಗೋಪಾಲಕೃಷ್ಣ ಭಟ್‌, ಮಂಜೇಶ್ವರ ಪಂಚಾಯತ್‌ ಸದಸ್ಯ ಅಜೀಜ್‌ ಮಣಿಮುಂಡ, ವಿಶ್ವನಾಥ ರಾವ್‌, ಶ್ಯಾಮ್‌ ಭಟ್‌, ಡಾ| ಯು. ಮಹೇಶ್ವರಿ, ಕೇಶವ ಭಟ್‌ ಕೊಡ್ಲಮೊಗರು ಮೊದಲಾದವರು ಮಾತನಾಡಿದರು.

ಧರಣಿಯಲ್ಲಿ ವಾಮನ ರಾವ್‌ ಬೇಕಲ್‌, ಡಾ| ಗಣಪತಿ ಭಟ್‌, ಜೋಗೇಂದ್ರನಾಥ್‌ ವಿದ್ಯಾನಗರ, ಮಹೇಶ್‌ ಬಂಗೇರ, ಟಿ. ಶಂಕರ ನಾರಾಯಣ ಭಟ್‌, ಕುಶಲ ಪಾರೆ ಕಟ್ಟೆ, ಕೆ.ಎನ್‌. ವೆಂಕಟ್ರಮಣ ಹೊಳ್ಳ, ವಿಶ್ವನಾಥ ಮಾಸ್ಟರ್‌, ಪುರುಷೋತ್ತಮ ನಾೖಕ್‌, ಜ್ಯೋತ್ಸಾ$° ಕಡಂ ದೇಲು, ಸುಂದರ ರಾವ್‌, ಸೌಮ್ಯಾ, ಸತ್ಯ ನಾರಾಯಣ ಕಾಸರ ಗೋಡು, ವಿನೋದ್‌ ಮೊದಲಾದವರು ಭಾಗವಹಿಸಿದ್ದರು. 

ಕನ್ನಡ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ. ಭಾಸ್ಕರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಂಚಾಲಕ ಗುರುಪ್ರಸಾದ್‌ ಕೋಟೆಕಣಿ ವಂದಿಸಿದರು. ಇದೇ ಸಂದರ್ಭದಲ್ಲಿ ಸಹಿ ಅಭಿಯಾನ ಆರಂಭಗೊಂಡಿತು.

ಅತ್ಯಂತ ಹಿರಿಯ ಹೋರಾಟಗಾರ ಭಾಗಿ
ಸರಣಿ ಸತ್ಯಾಗ್ರಹದಲ್ಲಿ ಅತ್ಯಂತ ಹಿರಿಯ ಕನ್ನಡ ಹೋರಾಟಗಾರರಾದ ನ್ಯಾಯವಾದಿ ಅಡೂರು ಉಮೇಶ್‌ ನಾೖಕ್‌ ಅವರು ಭಾಗವಹಿಸಿ ಸ್ಫೂರ್ತಿ ತುಂಬಿದರು. ಈ ಹಿಂದೆ ಕಾಸರಗೋಡಿನಲ್ಲಿ ನಡೆದ ಕನ್ನಡ ಪರ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಅಡೂರು ಉಮೇಶ್‌ ನಾೖಕ್‌ ಅವರು ಈ ಹಿಂದಿನ ಹೋರಾಟದ ನೆನಪಿನಲ್ಲಿ ಭಾಗವಹಿಸಿದರು. ಈ ಹಿಂದೆ ನಡೆದ ಹೋರಾಟದಲ್ಲಿ ಭಾಗವಹಿಸಿದ ಅನುಭವವನ್ನು ಹೊಂದಿದ್ದಾರೆ. ಕಯ್ನಾರ ಕಿಞ್ಞಣ್ಣ ರೈ, ಮಹಾಬಲ ಭಂಡಾರಿ. ಯು.ಪಿ.ಕುಣಿಕುಳ್ಳಾಯ ಮೊದಲಾದ ಹಿರಿಯ ಹೋರಾಟಗಾರರೊಂದಿಗೆ ಅಡೂರು ಉಮೇಶ್‌ ನಾೖಕ್‌ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next