Advertisement
ಸಂಬಂಧಿಕರೆಲ್ಲ ಆಕೆಗೆ ಹೇಳಿದರು: “ಅರಮನೆಯಂಥ ಬಂಗಲೆ, ಮನೆ ತುಂಬಾ ಆಳು-ಕಾಳು, ದೊಡ್ಡ ಹೆಸರು, ಸಾಕಷ್ಟು ಹಣ-ಆಸ್ತಿ… ಎಲ್ಲವೂ ಆ ಕುಟುಂಬಕ್ಕೆ ಇದೆ. ಎರಡನೇ ಯೋಚನೆ ಮಾಡೋದ್ಯಾಕೆ? ಈ ಸಂಬಂಧವನ್ನು ಕಣ್ಮುಚ್ಚಿಕೊಂಡು ಒಪ್ಪಿಕೋ…’ ಹಣ, ಅಂತಸ್ತು, ಆಳು-ಕಾಳು, ಸ್ಟೇಟಸ್ ಇದೆಲ್ಲ ಇರುವ ಜಾಗ ನನಗೆ ಉಸಿರು ಕಟ್ಟಿಸುತ್ತದೆ. ಅರಮನೆಯಂಥ ಬಂಗಲೆಯಲ್ಲಿ ಪಂಜರದ ಗಿಳಿಯಾಗಿ ಉಳಿಯಲು ನನಗೆ ಇಷ್ಟವಿಲ್ಲ. ನನ್ನಿಷ್ಟದಂತೆ ಹಾರಾಡಿಕೊಂಡು ಸ್ವತಂತ್ರ ಹಕ್ಕಿಯಾಗಿ ಬದುಕಲು ಇಷ್ಟ ನನಗೆ ಎಂದ ಅವಳು, ಆ ಸಂಬಂಧವನ್ನು ಒಪ್ಪಲಿಲ್ಲ!
Related Articles
Advertisement
20 ವರ್ಷಗಳ ಹಿಂದೆ ಆಕಸ್ಮಿಕವಾಗಿ ಗಂಡನನ್ನು ಕಳೆದುಕೊಂಡ ಆಕೆ, ಸಮಾಜದ ಕಾಕದೃಷ್ಟಿಯಿಂದ ತಪ್ಪಿಸಿಕೊಳ್ಳಲು ಪಿಯಾನೋ ಖರೀದಿಸಿದ್ದಳು. ಮನದ ನೋವನ್ನೆಲ್ಲ ಅದರ ಮೂಲಕ ಹೊರಹಾಕುತ್ತಾ ಗೆಲುವಾದಳು. ಗಟ್ಟಿಯಾದಳು. ಅನಂತರದಲ್ಲಿ ಆಕೆ ನುಡಿಸಿದ ಹಾಡು, ಗಂಧರ್ವ ಗೀತೆಯಾಗಿ ಕೇಳಿಸಿತ್ತು!
“ನೋಡೂ, ಸ್ವೀಟ್ ತಿನ್ನಬಾರದು. ದಪ್ಪ ಆಗಿಬಿಡ್ತೀಯಾ. ಸ್ವೀಟ್ ಆರೋಗ್ಯಕ್ಕೆ ಒಳ್ಳೆಯದಲ್ಲ’- ಮಗಳನ್ನು ಎಚ್ಚರಿಸಿದ ತಾಯಿ, ಅವಳಿಂದ ಸ್ವೀಟ್ ಪ್ಯಾಕ್ ಕಿತ್ತಿಟ್ಟಳು.
22 ವರ್ಷಗಳ ಅನಂತರ, ಸ್ಟೆತಾಸ್ಕೋಪ್ ಧರಿಸಿದ ಮಗಳು ಅಮ್ಮನಿಗೆ ಗದರುವ ದನಿಯಲ್ಲಿ ಹೇಳುತ್ತಿದ್ದಾಳೆ: “ನಿನಗೆ ಶುಗರ್ ಇದೆ ಮಮ್ಮಿ, ಸ್ವೀಟ್ ತಿನ್ನಬೇಡ ಅಂತ ಎಷ್ಟು ಸರತಿ ಹೇಳ್ಬೇಕೂ..?’
ಟೇಬಲ್ ಒರೆಸೋದು, ಬೆಡ್ ಶೀಟ್ ಮಡಿಚೋದು, ಕಸ ಗುಡಿಸೋದು, ಇಲ್ಲಾಂದ್ರೆ ಬಟ್ಟೆ ಒಗೆಯೋದು-ಇಡೀ ದಿನ ಇಷ್ಟೇ ತಾನೇ ನಿನ್ನ ಕೆಲಸ? ಒಂದು ದಿನ ಆಫೀಸ್‌ಗೆ ಹೋಗಿ ಬಾ, ನನ್ನ ಕಷ್ಟ ಗೊತ್ತಾಗುತ್ತೆ… ಅವನು ಹೆಂಡತಿಯನ್ನು ಛೇಡಿಸುತ್ತಾ ಹೀಗೆಂದ. “ಒಂದೇ ಒಂದು ದಿನ ಮನೆಯಲ್ಲಿದ್ದು ನನ್ನ ಕೆಲ್ಸ ಮಾಡಿ ನೋಡಿ, ಹೆಂಗಸರ ಕಷ್ಟ ನಿಮಗೂ ಅರ್ಥ ಆಗುತ್ತೆ’- ಆಕೆ ತಿರುಗಿಸಿ ಕೊಟ್ಟಳು.
ಆ ಮಗುವಿನ ತಂದೆ ಅವತ್ತು ಜಡೆ ಹೆಣೆದು ಕಳಿಸಿದ್ದ. ಸರಿಯಾಗಿ ಹಾಕಿಲ್ಲದ ಕಾರಣಕ್ಕೆ ಅದು ಪದೇಪದೆ ಬಿಚ್ಚಿಕೊಂಡು ಎಲ್ಲರ ಗೇಲಿಗೆ ಕಾರಣವಾಯಿತು. ಆ ಹುಡುಗಿ ಮಾತ್ರ, ನಮ್ಮಪ್ಪ ಜಡೆ ಹೆಣೆದು ಕೊಟ್ರಾ, ಗೊತ್ತಾ? ಎನ್ನುತ್ತಾ ದಿನವಿಡೀ ಖುಷಿಯಿಂದ ಇದ್ದಳು!
ಮದುವೆಯ ಮಾತುಕತೆ ನಡೆದಿತ್ತು. ಹುಡುಗನ ಮನೆಯವರು ಧಿಮಾಕಿನಿಂದ ಕೇಳಿದರು: ಏನೇನು ಕೊಡ್ತೀರಾ ಹೇಳಿ… “ನಮ್ಮ ಮನೆಯ ಸೌಭಾಗ್ಯಲಕ್ಷ್ಮಿಯಂತಿರುವ ಮಗಳನ್ನು ಕೊಡ್ತೇವೆ. ಅದಕ್ಕಿಂತ ಬೆಲೆ ಯುಳ್ಳದ್ದು ನಮ್ಮಲ್ಲಿ ಬೇರೇನೂ ಇಲ್ಲ’- ಹುಡುಗಿ ತಂದೆ ಉತ್ತರಿಸಿದರು.
“ಅಬ್ಟಾ, ಎಂಥಾ ಕಲ್ಪನೆ, ಎಂಥಾ ವರ್ಣ ಸಂಯೋಜನೆ! ಕಲೆಯನ್ನು ಚಿತ್ರದ ರೂಪದಲ್ಲಿ, ಇಷ್ಟೊಂದು ಭಿನ್ನವಾಗಿ ತೋರ್ಪಡಿಸಬಹುದು ಎಂಬುದೇ ನಮಗೆ ಗೊತ್ತಿರಲಿಲ್ಲ. ಅದ್ಭುತ, ಅದ್ಭುತ!’- ಕಲಾಕೃತಿಯ ಪ್ರದರ್ಶನವನ್ನು ನೋಡಿದವರೆಲ್ಲಾ ಹೀಗೆ ಉದ್ಗರಿಸುತ್ತಿದ್ದರು. ಎಲ್ಲರ ಮಾತು ಕೇಳಿಸಿಕೊಂಡ ಆ ಕಲಾವಿದೆ ಆನಂದಬಾಷ್ಪ ಸುರಿಸಿದಳು. ಅವಳಿಗೆ ಕಣ್ಣು ಕಾಣಿಸುತ್ತಿರಲಿಲ್ಲ!
“ಡಾಕ್ಟರ್ ಏನು ಹೇಳಿದ್ರು?’- ತಾಯಿ ಆತಂಕದಿಂದಲೇ ಕೇಳಿ ದರು. “ಗಾಬರಿ ಆಗುವಂಥಾದ್ದು ಏನೂ ಇಲ್ವಂತೆ ಅಮ್ಮಾ. ಪಥ್ಯ ಅನುಸರಿಸಿದ್ರೆ, ಕರೆಕ್ಟ್ ಟೈಮ್‌ಗೆ ಮಾತ್ರೆ ತಗೊಂಡ್ರೆ ಪೂರ್ತಿ ವಾಸಿ ಆಗುತ್ತೆ ಅಂದ್ರು’- ಮಗಳ ಉತ್ತರ. “ಹೌದಾ? ನಾವು ಸುಮ್ಮನೇ ಹೆದರಿದ್ವಿ. ಡಾಕ್ಟರ್ ಮಾತನ್ನ ತಪ್ಪದೇ ಪಾಲಿಸ್ತೇನೆ, ಬೇಗ ಹುಷಾ ರಾಗ್ತೀನೆ ಬಾ’- ಅಮ್ಮ ವಿಶ್ವಾಸದಿಂದ ಹೇಳಿದಳು. ಡಾಕ್ಟರ್ ರಿಪೋ ರ್ಟನ್ನು ಫೈಲ್‌ನಲ್ಲಿ ತುರುಕಿದ ಮಗಳು ಸ್ವಗತದಲ್ಲಿ ಹೇಳಿಕೊಂಡಳು. ಅಮ್ಮನಿಗೆ ಸುಳ್ಳು ಹೇಳುವುದರಿಂದಲೂ ಲಾಭವುಂಟು!
ನೀನು ಓದಿ ಆಗಬೇಕಿರೋದೇನು? ಶ್ರೀಮಂತ ಕುಟುಂಬದ ಸೊಸೆಯಾಗುವ ಯೋಗ ಒದಗಿ ಬಂದಿದೆ. ಇಂಥಾ ಚಾನ್ಸ್ ಮತ್ತೆ ಮತ್ತೆ ಸಿಗೋದಿಲ್ಲ, ತೆಪ್ಪಗೆ ಒಪ್ಪಿಕೊ’- ಜನ ಆಕೆಗೆ ಸಲಹೆ ಮಾಡಿದರು.
“ಚಾನ್ಸ್ ಬಂದಾಗ ಹೇಗೆ ಅದನ್ನು ಕ್ಯಾಚ್ ಮಾಡಬೇಕು ಅಂತ ನನಗೆ ಗೊತ್ತಿದೆ. ನನ್ನ ಓದು ಮುಗಿಯುವ ತನಕ ಎಲ್ರೂ ಸ್ವಲ್ಪ ಸುಮ್ಮನಿದ್ದು ಬಿಡಿ’- ಆಕೆ ಕಡ್ಡಿ ತುಂಡು ಮಾಡಿದಂತೆ ಉತ್ತರಿಸಿದಳು.
“ದನಿ ಎತ್ತರಿಸಿ ಮಾತಾಡಬೇಡ, ಇದು ಆಫೀಸ್ ಎನ್ನುವುದು ನೆನಪಲ್ಲಿ ಇರಲಿ’- ಮ್ಯಾನೇಜರ್ ಎಚ್ಚರಿಕೆ ನೀಡಿದ.
“ಸರ್, ನೀವೂ ಅಷ್ಟೇ. ಸಭ್ಯತೆ ಮೀರಿ ನಡೆದುಕೊಳ್ಳಬೇಡಿ. ಇದು ನಿಮ್ಮ ಮನೆಯಲ್ಲ, ಆಫೀಸ್ ಅನ್ನುವುದು ನೆನಪಲ್ಲಿರಲಿ’- ಆಕೆ ಉತ್ತರಿಸಿದಳು.
“ನಿನ್ನದು ಅತಿಯಾಯ್ತು… ಕಾಲು ನೆಲದ ಮೇಲೇ ಇರಲಿ…’ “ಭೂಮಿ ಮೇಲೇ ಓಡಾಡು, ಆಕಾಶದಲ್ಲಿ ನಡೆಯುವ ಹುಚ್ಚು ಬೇಡ…’ “ಭುಜ ತಲೆಯ ಮೇಲೇ ಇರಲಿ…’- ಆಕಾಶದಲ್ಲಿ ಹಾರಾಡುವ ಕನಸು ನನ್ನದು ಎಂದು ಆಕೆ ಹೇಳಿದಾಗ, ಜನ ಹೀಗೆಲ್ಲಾ ಚುಚ್ಚಿ ಮಾತಾಡಿದ್ದರು. ಇದಾಗಿ 10 ವರ್ಷ ಕಳೆದಿವೆ. ಆಕೆ ಗಗನಯಾತ್ರಿಯಾಗಿ ಯಾನ ಮುಗಿಸಿ ಬಂದಿದ್ದಾಳೆ. ಆಡಿಕೊಂಡ ವರು ಈಗ ಅವಳನ್ನು ಬೆರಗಿನಿಂದ ನೋಡುತ್ತಾ ನಿಂತಿದ್ದಾರೆ.
– ಎ.ಆರ್.ಮಣಿಕಾಂತ್