Advertisement

ಕೃಷಿ ಅಂದ್ರೆ ಇಷ್ಟ…ಹೊಲ್ದಾಗ್‌ ಗಳ್ಯಾ ಹೊಡಿಯೋದು ನನಗಿಷ್ಟ! ಸುಧಾಮೂರ್ತಿ

06:10 PM Jan 26, 2023 | Team Udayavani |

ಬಾಗಲಕೋಟೆ: ಇನ್ಫೋಸಿಸ್‌ ಇಡೀ ಪ್ರಪಂಚದಾದ್ಯಂತ ಹೆಸರು ಮಾಡಿರುವ ಪ್ರತಿಷ್ಠಿತ ಸಂಸ್ಥೆ. ಲಕ್ಷಾಂತರ ಕೋಟಿ ವಹಿವಾಟು ನಡೆಸಿದ ದೇಶದ ಸಿರಿವಂತ ಐಟಿ ಕಂಪನಿಗಳಲ್ಲಿ ಇನ್ಫೋಸಿಸ್‌ ಕೂಡ ಒಂದು. ಆದರೆ ಈ ಸಂಸ್ಥೆಯ ಒಡತಿ ಸುಧಾಮೂರ್ತಿ ಮಾತ್ರ ಸರಳತೆಯಿಂದ ಎಲ್ಲರ ಅಚ್ಚುಮೆಚ್ಚುಗೆಗೆ ಕಾರಣರಾಗಿದ್ದಾರೆ.ಸರಳತೆಗೆ ಇನ್ನೊಂದು ಹೆಸರೇ ಸುಧಾಮೂರ್ತಿ ಅಂದರೆ ತಪ್ಪಿಲ್ಲ.

Advertisement

ಹೌದು. ಅವರು ಬುಧವಾರ ನವನಗರದ ಎಂಆರ್‌ಎನ್‌ಎ ಫೌಂಡೆಶನ್‌ನ ತೇಜಸ್‌ ಅಂತಾರಾಷ್ಟ್ರೀಯ ಶಾಲೆಗೆ ಭೇಟಿ ನೀಡಿ ಮಕ್ಕಳ ಜತೆ ಮಕ್ಕಳಾಗಿದ್ದರು. ಅಲ್ಲಿನ ಮಕ್ಕಳೊಂದಿಗೆ ಸಂವಾದ ನಡೆಸಿದರು. ಮಕ್ಕಳು ಸಾಲು ಸಾಲಾಗಿ ಪ್ರಶ್ನೆಗಳ ಸುರಿಮಳೆಗೈದರೆ ಎಲ್ಲ ಪ್ರಶ್ನೆಗಳಿಗೂ ಸುಧಾಮೂರ್ತಿ ಅವರು ನಗು ನಗುತ್ತಾ ಉತ್ತರ ನೀಡಿ ಮಕ್ಕಳನ್ನು ನಗೆಗಡಲಲ್ಲಿ ತೇಲಿಸಿದರು.

ನಿಮಗೆ ರೋಲ್‌ ಮಾಡಲ್‌ ಯಾರು ಎಂದು ವಿದ್ಯಾರ್ಥಿಯೊಬ್ಬ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುಧಾಮೂರ್ತಿ, ವಿವಿಧ ವಯೋಮಾನದಲ್ಲಿ ಒಬ್ಬೊಬ್ಬರು ಎಂದು ನಗುತ್ತಾ ಉತ್ತರಿಸಿದರು. ನಾನು ಚಿಕ್ಕವಳಿದ್ದಾಗ ನಮ್ಮ ಅಜ್ಜ -ಅಜ್ಜಿ, ನಂತರ ಬೆಳೆದಾಗ ನಮ್ಮ ತಂದೆ ನನಗೆ ರೋಲ್‌ ಮಾಡಲ್‌ ಆಗಿದ್ದರು. ಹೀಗೆ ಬೆಳೆದಂತೆ ಒಂದೊಂದು ಕ್ಷೇತ್ರದಲ್ಲಿ ಒಬ್ಬೊಬ್ಬರು ರೋಲ್‌ ಮಾಡಲ್‌ ಆಗಿದ್ದಾರೆ. ಅವರೆಲ್ಲರ ವಿಚಾರಧಾರೆ ಜೀವನ ಶೈಲಿ ಅಳವಡಿಸಿಕೊಂಡು ನಾನು ಬೆಳೆದಿದ್ದೇನೆ ಎಂದರು.

ತನ್ವಿ ಎಂಬ ವಿದ್ಯಾರ್ಥಿನಿ ನೀವು ಜೀವನದಲ್ಲಿ ಏನನ್ನು ಮಿಸ್‌ ಮಾಡಿಕೊಳ್ತಿರಿ ಎಂಬ ಪ್ರಶ್ನೆಗೆ ಉತ್ತರಿಸಿದ ಸುಧಾ ಮೂರ್ತಿ, ನಾನು ಹಳ್ಳಿ ಜೀವನವನ್ನು ಮಿಸ್‌ ಮಾಡಿಕೊಳ್ಳುತ್ತೇನೆ. ನನಗೆ ಕೃಷಿ ಅಂದರೆ ಬಹಳ ಇಷ್ಟ. ನೇಗಿಲು ಹೊಡೆಯಬೇಕೆಂದು ಮನ ಬಯಸುತ್ತದೆ. ಇನ್ನು ಟ್ರಾಕ್ಟರ್‌ ಚಲಾಯಿಸೋದು ಅಂದರೆ ನನಗೆ ತುಂಬಾ ಇಷ್ಟ. ದನಕರುಗಳೆಂದರೆ ತುಂಬಾ ಇಷ್ಟ. ನಾನು ರೈತ ಮಹಿಳೆ ಆಗಲಿಲ್ಲ ಅನ್ನೋದನ್ನು ನಾನು ಮಿಸ್‌ ಮಾಡಿಕೊಳ್ಳುತ್ತೇನೆ ಎಂದರು.

ನಿಮ್ಮ ದಿನಚರಿ ಏನು ಎಂಬ ವಿದ್ಯಾರ್ಥಿನಿ ವಿದ್ಯಾಶ್ರಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಬೆಳಗ್ಗೆ ಐದು ಗಂಟೆಗೆ ಏಳುತ್ತೇನೆ. ಎಲ್ಲ ದಿನಕರ್ಮ ಮುಗಿಸಿ ನಮ್ಮ ನಾಯಿ ಗೋಪಿ ಅಂತಿದೆ. ಅದರ ಜತೆ ಕೆಲ ಹೊತ್ತು ಆಟ ಆಡುತ್ತೇನೆ. ನಂತರ ಪುಸ್ತಕ ಓದೋದು. ನಾನು ಯಾವುದೇ ಹಬ್ಬ ಹರಿದಿನ, ಮದುವೆ ಮುಂಜಿಯಲ್ಲಿ ಜಾಸ್ತಿ ಭಾಗಿಯಾಗೋದಿಲ್ಲ. ಅದು ಸಮಯ ವ್ಯರ್ಥ. ಇ ಮೇಲ್‌ ನೋಡೋದು ವಾಟ್ಸ್‌ ಆ್ಯಪ್‌ ನೋಡೋದು ಮಾಡುತ್ತೇನೆ. ಎಲ್ಲವೂ ಕೆಲಸಕ್ಕೆ ಸಂಬಂಧಿಸಿದ್ದು. ವರ್ಷದ 365 ದಿನ ಬಿಜಿಯಾಗಿರುತ್ತೇನೆ. ಮನುಷ್ಯ ಯಾವಾಗಲು ಬಿಜಿಯಾಗಿರಬೇಕು. ಜೀವನದಲ್ಲಿ ಅತಿ ಮುಖ್ಯವಾದದ್ದು ಸಮಯ. ಅದನ್ನು ವ್ಯರ್ಥ ಮಾಡಬಾರದೆಂದು ಕಿವಿಮಾತು ಹೇಳಿದರು.

Advertisement

ನೀವು ಆರಾಮ ಅದಿರಿ. ದೇಶ ಕೂಡ ಅರಾಮ ಇರಬೇಕು ಎಂದರೆ ನೀವು ಈ ರಾಷ್ಟ್ರದ ರಾಷ್ಟ್ರಪತಿ ಆಗಬೇಕು ಎಂದು ಮಾಧುರಿ ಮುಧೋಳ ಹಾಗೂ ಎಂಎಲ್‌ಸಿ ಹನುಮಂತ ನಿರಾಣಿ ಹೇಳಿದಾಗ, ಏನು ಬೇಡ ನಾನು ನಮ್ಮ ಊರಾಗ ಆರಾಮ ರಾಣಿ ಇದ್ದಂಗ ಅದಿನಿ ಎಂದು ಸುಧಾಮೂರ್ತಿ ಕೈ ಮುಗಿದರು. ಒಟ್ಟಾರೆ ಸುಧಾಮೂರ್ತಿ ಮಕ್ಕಳ ಜತೆ ಮಕ್ಕಳಾಗಿ ತಮ್ಮ ಜೀವನದ ಎಲ್ಲ ಅನುಭವಗಳನ್ನು ಹಂಚಿಕೊಂಡರು.

ಸುಧಾಮೂರ್ತಿ ಅವರು ನಮ್ಮ ದೇಶದ ರಾಷ್ಟ್ರಪತಿ ಆಗಬೇಕು. ನಮ್ಮ ದೇಶದ ಪ್ರೆಸಿಡೆಂಟ್‌ ಆಗಬೇಕೆಂದು ನಾವೆಲ್ಲ ಪ್ರಾರ್ಥನೆ ಮಾಡುತ್ತೇವೆ. ಅಬ್ದುಲ್‌ ಕಲಾಂ ನಂತರ ಇಂತಹ ವ್ಯಕ್ತಿ ರಾಷ್ಟ್ರಪತಿಗಳಾಗಬೇಕು.
ಮಾಧುರಿ ಮುಧೋಳ,
ಮುಖ್ಯಸ್ಥೆ, ತೇಜಸ್‌ ಅಂತಾರಾಷ್ಟ್ರೀಯ ಸ್ಕೂಲ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next