ಬೆಂಗಳೂರು: ಸಿಎಂ ಬದಲಾವಣೆ ಕುರಿತಂತೆ ಕಾಂಗ್ರೆಸ್ ನ ಟ್ವೀಟ್ ಹೊಸದೇನಲ್ಲ. ಕಾಂಗ್ರೆಸ್ ನವರ ಮನಸ್ಸಲ್ಲಿ ಅತಂತ್ರವಿದೆ. ಆದರೆ ಜನರು ಇದನ್ನು ಒಪ್ಪುವುದಿಲ್ಲ. ನನಗೆ ಸತ್ಯ ಏನೆಂದು ಗೊತ್ತಿದೆ, ಈ ಚರ್ಚೆಯಲ್ಲಿ ಯಾವುದೇ ರೀತಿಯ ಆಧಾರವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದರಿಂದ ನನ್ನ ಒಂದು ನಿರ್ಣಯಗಳು ಗಟ್ಟಿಯಾಗುತ್ತಿವೆ. ಬರುವಂತ ದಿನಗಳಲ್ಲಿ ರಾಜ್ಯದ ಅಭಿವೃದ್ಧಿ ಕಡೆ, ಎರಡು ತಾಸು ಹೆಚ್ಚು ಕೆಲಸ ಮಾಡುತ್ತೇನೆ. ಬರುವಂತಹ ದಿನಗಳಲ್ಲಿ ಪಕ್ಷದ ಬಲವರ್ಧನೆ ಮತ್ತು ಜನರ ಬಳಿಗೆ ಹೋಗುವ ದೊಡ್ಡ ಪ್ರಮಾಣದಲ್ಲಿ ಮಾಡುತ್ತೇನೆ ಎಂದರು.
ಕಾಂಗ್ರೆಸ್ ನವರು ಏನೋ ಎಂದುಕೊಂಡಿದ್ದಾರೆ. ಅವರ ಮನಸ್ಸಿನಲ್ಲಿ ಅತಂತ್ರವಿದೆ. ಅದನ್ನು ರಾಜ್ಯದ ತುಂಬಾ ಹರಡಲು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅದನ್ನು ರಾಜ್ಯದ ಜನರು ನಂಬುವುದಿಲ್ಲ. ನಾನು ಸ್ಥಿತಪ್ರಜ್ಞೆಯವನಾಗಿದ್ದೇನೆ. ಯಾಕೆಂದರೆ ನನಗೆ ಸತ್ಯ ಏನೆಂದು ಗೊತ್ತಿದೆ. ಇದೊಂದು ರಾಜಕೀಯ ಪ್ರೇರಿತ ಎಂಬುದು ನನಗೆ ಗೊತ್ತಿದೆ. ಇದರಿಂದ ಇನ್ನು ಹೆಚ್ಚಿನ ಕೆಲಸವನ್ನು ಜನರಿಗೆ ರಾಜ್ಯದ ಹಿತಾಸಕ್ತಿ ಮಾಡಲು ಪ್ರೇರಣೆ ಬಂದಿದೆ. ಬರುವಂತ ದಿನಗಳಲ್ಲಿ ಇನ್ನೂ ಹೆಚ್ಚಿನ ಸಮಯವನ್ನು ಅಭಿವೃದ್ಧಿ ಕಡೆ ಕೊಡುತ್ತೇನೆ ಎಂದರು.
ಸುರೇಶ್ ಗೌಡ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, ಕೆಲವರ ಮಾತಿಗೆಲ್ಲ ಮಹತ್ವ ಕೊಡುವ ಅವಶ್ಯಕತೆ ಇಲ್ಲ ಎಂದು ಪರೋಕ್ಷವಾಗಿ ಸುರೇಶ್ ಗೌಡ ಮಾತು ನಮಗೇನು ಲೆಕ್ಕಕ್ಕೆ ಇಲ್ಲ ಎಂದರು.
ಇದನ್ನೂ ಓದಿ:ಪ್ರವೀಣ್ ನೆಟ್ಟಾರ್ ಹತ್ಯೆ ಮಾಡಿದ್ದ ಮೂವರು ಪ್ರಮುಖ ಆರೋಪಿಗಳ ಬಂಧನ
ಚಾಮರಾಜ ಪೇಟೆ ಮೈದಾನ ಕಂದಾಯ ಇಲಾಖೆಗೆ ಸೇರಿದೆ. ಸರ್ಕಾರದ ನೀತಿ ನಿಯಮದ ಪ್ರಕಾರ ಅಲ್ಲಿ ಕಾರ್ಯಕ್ರಮ ನಡೆಯುವ ಬಗ್ಗೆ ಸರ್ಕಾರ ತೀರ್ಮಾನ ಮಾಡಲಿದೆ ಎಂದರು.
ಜಮೀರ್ ಹೇಳಿಕೆ ವಿಚಾರಕ್ಕೆ ತಿರುಗೇಟು ನೀಡಿ, ಯಾರು ಏನೇ ಹೇಳಿದರೂ ಅದು ನನಗೆ ಮುಖ್ಯವಲ್ಲ. ಕಾನೂನಿನ ಪ್ರಕಾರ ಏನು ಮಾಡಬೇಕು ಅದು ಆಗಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.