ಕಲಬುರಗಿ: ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೇಳಿದ್ದೇವೆ. ಆದರೆ ಕಾರಣಾಂತರಗಳಿಂದ ಸಭೆ ರದ್ದಾಗಿದೆ. ಹೀಗಾಗಿ ತದನಂತರ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಸಿಎಂ ಅವರಿಗೆ ಪತ್ರ ಬರೆದು ವಿನಂತಿ ಮಾಡಿಕೊಂಡಿದ್ದೇವೆ ಎಂದು ಆಳಂದ ಕ್ಷೇ ಶಾಸಕ ಬಿ.ಆರ್ ಪಾಟೀಲ್ ಹೇಳಿದರು.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಿಎಂ ಅವರಿಗೆ ಪತ್ರ ಬರೆದಿದ್ದು ನಿಜ, ಮತ್ತೆ ಬೇರೆಯವರು ಸಹಿ ಮಾಡಿರಬಹುದು. ಶಾಸಕಾಂಗ ಸಭೆ ಕರೆಯುವಂತೆ ಕೇಳುವುದು ನಮ್ಮ ಹಕ್ಕು ಎಂದರು.
ವರ್ಗಾವಣೆ ಸಂಬಂಧ ಪತ್ರ ಬರೆದಿಲ್ಲ: ಬಿಜೆಪಿಯಿಂದ ಸೃಷ್ಟಿ ಶಂಕೆ: ಮಾಧ್ಯಮದಲ್ಲಿ ಊಹಾ ಪೋಹ ಸುದ್ದಿ ಹರಿದಾಡುತ್ತಿದೆ. ವರ್ಗಾವಣೆ ವಿಚಾರಕ್ಕೆ ಸಂಬಂಧ ಪಟ್ಟಂತೆ ನಾವು ಯಾವುದೇ ಪತ್ರ ಸಿಎಂಗೆ ಬರೆದಿಲ್ಲ. ಸಿಎಂ ಗೆ ಪತ್ರ ಬರೆದಿದ್ದಾರೆ ಅಂತ ಹೇಳಲಾಗುತ್ತಿರೋ ಪತ್ರ ನಕಲಿಯಾಗಿದೆ. ಯಾರೋ ನನ್ನ ನಕಲಿ ಲೆಟರ್ ಹೆಡ್ ನ್ನು ಬಳಸಿ ಪತ್ರ ವೈರಲ್ ಮಾಡಿದ್ದಾರೆ. ನನ್ನ ಲೆಟರ್ ಹೆಡ್ ನಲ್ಲಿ ಸೀರಿಯಲ್ ನಂಬರ್ ಇದೆ. ನಾನು ಈ ಹಿಂದೆ ಶಾಸಕನಾಗಿದ್ದಾಗ ಇದ್ದಿದ್ದ ಲೆಟರ್ ಪ್ಯಾಡ್ ನ ಪ್ರತಿಯಾಗಿದೆ. ಅದರಲ್ಲಿ ಶಾಂತಿ ನಗರ ಮನೆ ವಿಳಾಸವಿದೆ. ಹೊಸ ಲೆಟರ್ ಹೆಡ್ ನಲ್ಲಿ ಅಕ್ಕ ಮಹಾದೇವಿ ಕಾಲೋನಿ ನಿವಾಸದ ವಿಳಾಸವಿದೆ. ತಮ್ಮ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ನಡುವೆ ಬೇದ ಮೂಡಿಸಲು ಈ ಪತ್ರ ಸೃಷ್ಟಿ ಮಾಡಿದ್ದಾರೆ. ಈ ಬಗ್ಗೆ ಎಸ್ಪಿ ಅವರಿಗೆ ದೂರು ನೀಡುತ್ತೇನೆ. ಬಿಜೆಪಿಯವರು ಈ ರೀತಿ ಮಾಡಿರಬಹುದು ಎಂದು ಬಿ.ಆರ್.ಪಾಟೀಲ್ ಗಂಭೀರ ಆರೋಪ ಮಾಡಿದರು.
ಸರ್ಕಾರ ಅಸ್ಥಿರಗೋಳಿಸುವ ತಂತ್ರ ನಡೆಯುತ್ತಿದೆ ಎಂಬುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅನೇಕ ಮಟ್ಟದ ಮಾಹಿತಿ ಕಲೆ ಹಾಕಿ ಹೇಳಿದ್ದಾರೆ. ಡಿಕೆಶಿ ಅವರು ಹೇಳಿರುವುದು ನಿಜ ಇದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಯಾರು ನಂಬುವುದಿಲ್ಲ ಎಂದರು.
ನಾವು ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಟ ಮಾಡಿದ್ದೇವೆ. ಮುಂಬರುವ 2024 ರ ಲೋಕಸಭಾ ಚುನಾವಣೆಯಲ್ಲಿ ನಾವು ಮೋದಿ ಅವರನ್ನ ಸೋಲಿಸಲು ಪಣ ತೊಟ್ಟಿದ್ದೇವೆ. ಇವತ್ತಿನ ಸಂದರ್ಭದಲ್ಲಿ ಈ ಸರ್ಕಾರ ಅಸ್ಥಿರಗೊಳಿಸುವ ಶಕ್ತಿ ಯಾರಿಗೂ ಇಲ್ಲ. ನಮ್ಮಲ್ಲಿ ಯಾವುದೇ ಅಸಮಾಧಾನ ಇಲ್ಲ ಎಂದು ಬಿ.ಆರ್.ಸ್ಪಷ್ಟಪಡಿಸಿದರು.
ಅಸಮಾಧಾನ ಮೊದಲು ನನಗೆ ಗೊತ್ತಾಗುತ್ತದೆ: ಮತ್ತೊಂದೆಡೆ ಕಲಬುರಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಹಕಾರ ಸಚಿವ ಕೆ.ಎನ್. ರಾಜಣ್ಣ, ಶಾಸಕರಾದ ಬಿ.ಆರ್ ಪಾಟೀಲ್ , ಬಸವರಾಜ ರಾಯರೆಡ್ಡಿ ನನ್ನ ಆತ್ಮೀಯ ಸ್ನೇಹಿತರು ಅವರಿಗೆ ಅಸಮಾಧಾನ ಇದ್ದರೆ ಮೊದಲು ನನಗೆ ಗೊತ್ತಾಗುತ್ತದೆ ಎಂದು ತಿಳಿಸಿದರು.
ವಿಧಾನ ಪರಿಷತ್ತಿನ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು ಸಮಾಜದ ಸಭೆಯಲ್ಲಿ ಮಾತನಾಡಿದ್ದಾರೆ. ನಮ್ಮೆಲ್ಲರಿಗಿಂತ ಹರಿಪ್ರಸಾದ ಶಿಸ್ತಿನ ಸಿಪಾಯಿ ಇದ್ದಾರೆ.
ಸರ್ಕಾರ ಕೆಡವಲು ಸಿಂಗಾಪುರದಲ್ಲಿ ಪ್ಲ್ಯಾನ್ ಮಾಡುತ್ತಿದ್ದಾರೆ ಎನ್ನುವ ಡಿ.ಕೆ ಶಿವಕುಮಾರ್ ಹೇಳಿಕೆಯನ್ನು ತಾವು ಒಪ್ಪುವುದಲ್ಲಾ, ಅಲ್ಲಗಳೆಯುವುದೂ ಇಲ್ಲ ಎಂದು ಇದೇ ಸಂದರ್ಭದಲ್ಲಿ ಹೇಳಿದರು.