Advertisement

“ರಸಗೊಬ್ಬರ ಸಮಸ್ಯೆ ನಿವಾರಣೆಗೆ ಸಾಕಷ್ಟು ಶ್ರಮಿಸಿದ್ದೇನೆ’

06:26 PM Nov 24, 2021 | Team Udayavani |

ರಾಣಿಬೆನ್ನೂರ: ಈ ಹಿಂದೆ ರಸಗೊಬ್ಬರಕ್ಕಾಗಿ ರೈತರು ನಡೆಸಿದ ಪ್ರತಿಭಟನೆ ವೇಳೆ ನಡೆದ ಗೋಲಿಬಾರ್‌ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದಿದೆ. ಹಾಗಾಗಿ, ರಸಗೊಬ್ಬರ ಸಮಸ್ಯೆ ನಿರ್ಮೂಲನೆಗಾಗಿ ನನ್ನ ಅವಧಿಯಲ್ಲಿ ಸಾಕಷ್ಟು ಶ್ರಮಿಸಿದ್ದೇನೆ ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಬಿ. ಹೇಳಿದರು.

Advertisement

ಮಂಗಳವಾರ ಸಂಜೆ ಇಲ್ಲಿನ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಹಾಗೂ ರೂಪಾಂತರ ಸಹಕಾರಿ ಸಂಘದ ವತಿಯಿಂದ “ಸಮರ್ಪಕ ವಹಿವಾಟಿನಲ್ಲಿ ಸಹಕಾರಿ ಸಂಘಗಳ ಪಾತ್ರ’ ಕುರಿತು ಏರ್ಪಡಿಸಿದ್ದ ರೈತರ ಹಾಗೂ ಕೃಷಿ ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯ ನಿರ್ವಾಹಕ ಅ ಧಿಕಾರಿಗಳ ಮತ್ತು ರೈತರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

25 ವರ್ಷಗಳ ಹಿಂದೆ ಮಳೆಯ ಆಗಮನ ನೋಡಿದಾಗ ಮಳೆಯ ಪ್ರಮಾಣ ಕಡಿಮೆ ಇತ್ತು. ಪ್ರಸ್ತುತ 5 ವರ್ಷಗಳಿಂದೀಚೆಗೆ ಮಳೆಯ ಪ್ರಮಾಣ ಹೆಚ್ಚಾಗಿರುವುದರಿಂದ ರಸಗೊಬ್ಬರಗಳ ಕೊರತೆ ಉಂಟಾಗುವುದು ಸಹಜವಾಗಿದೆ. ರಸಗೊಬ್ಬರಗಳ ಪೂರೈಕೆಯಲ್ಲಿ ಸರ್ಕಾರ ಬೆಳೆಯ ಅನುಗುಣವಾಗಿ ದಾಸ್ತಾನು ಮಾಡುತ್ತಿದೆ. ಆದರೂ ಕೆಲವೊಂದು ರಸಾಯನಿಕ ಮಾರಾಟಗಾರರು ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ತಾಲೂಕಿನ ಎಲ್ಲ ಕೃಷಿ ಪತ್ತಿನ ಸಹಕಾರಿ ಸಂಘಗಳ ಮೂಲಕ ರಸಗೊಬ್ಬರ ವಿತರಿಸುವುದರಿಂದ ಅಭಾವ ಕಂಡುಬಾರದ್ದನ್ನು ಮನಗಂಡು ಪ್ರಸ್ತುತ ಒಕ್ಕಲುತನ ಹುಟ್ಟುವಳಿ ಮಾರಾಟ ಹಾಗೂ ರೂಪಾಂತರ ಸಹಕಾರಿ ಸಂಘದ ಮೂಲಕ ವಿತರಿಸಲು ಮುಂದಾಗುವುದು ಅಗತ್ಯವೆನಿಸಿದೆ ಎಂದರು.

ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆಡಳಿತ ಮಂಡಳಿಯವರು ಮುಂಗಡವಾಗಿ ರಸಗೊಬ್ಬರ ದಾಸ್ತಾನು ಮಾಡಿಕೊಂಡು ಸ್ಥಳೀಯ ರೈತರಿಗೆ ವಿತರಣೆ ಮಾಡಿದಲ್ಲಿ ಇಂತಹ ಅಭಾವ ಕಂಡು ಬರುವುದಿಲ್ಲ. ಹಿರೇಕೆರೂರು ತಾಲೂಕಿಗೆ ರಸಗೊಬ್ಬರ ಹೆಚ್ಚಿನ ಪ್ರಮಾಣದಲ್ಲಿ ಸರಬರಾಜಾಗುತ್ತಿವೆ ಎಂಬ ದೂರು ಬಂದ ಕಾರಣ ಅಲ್ಲಿಗೆ ತೆರಳಿ ಪರಿಶೀಲನೆ ನಡೆಸಿದಾಗ, ಅಲ್ಲಿನ ಒಕ್ಕಲುತನ ಹುಟ್ಟುವಳಿ ಮಾರಾಟ ಹಾಗೂ ರೂಪಾಂತರ ಸಹಕಾರಿ ಸಂಘದ
ಆಡಳಿತ ಮಂಡಳಿ ಮಳೆಗಾಲ ಆರಂಭವಾಗುವ 3 ತಿಂಗಳ ಮುಂಗಡವಾಗಿ ತಾಲೂಕಿಗೆ ಬೇಕಾಗುವ ರಸಗೊಬ್ಬರಗಳನ್ನು ದಾಸ್ತಾನು ಮಾಡಿಕೊಳ್ಳುವುದು ಕಂಡು ಬಂದಿತು.

ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕು ಕೃಷಿ ಪತ್ತಿನ ಸಹಕಾರಿ ಸಂಘಗಳ ಮೂಲಕ ವಿತರಿಸಲು ಮುಂದಾಗಿರುವುದರಿಂದ ಇನ್ನು ಮುಂದೆ ಈ ಹಿಂದೆ ಆದಂತಹ ಅವಘಡಗಳಾಗಲಿ ಅಥವಾ ರಸಗೊಬ್ಬರಗಳ ಅಭಾವವಾಗಲಿ ಸೃಷ್ಟಿಯಾವುದಿಲ್ಲ ಎಂದು ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯನಿರ್ವಾಹಕರಿಗೆ ಮತ್ತು ಆಡಳಿತ ಮಂಡಳಿಯವರಿಗೆ ಮಂಜುನಾಥ ಬಿ. ಮನವರಿಕೆ ಮಾಡಿಕೊಟ್ಟರು.

Advertisement

ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಹಾಗೂ ರೂಪಾಂತರ ಸಹಕಾರಿ ಸಂಘದ ಅಧ್ಯಕ್ಷ ಯಲ್ಲರಡ್ಡಿ ರಡ್ಡೇರ ಅಧ್ಯಕ್ಷತೆ ವಹಿಸಿದ್ದರು. ಉಪ ಕೃಷಿ ನಿರ್ದೇಶಕಿ ಸ್ಫೂರ್ತಿ ಜಿ.ಎಸ್‌., ಸಹಾಯಕ ಕೃಷಿ ನಿರ್ದೇಶಕ ಹಿತೇಂದ್ರ ಗೌಡಪ್ಪಳವರ, ಇಫೂ ಕಂಪನಿ ಕ್ಷೇತ್ರಾ ಧಿಕಾರಿ ನಾಗರಾಜ ಕರಿಗಾರ, ಕ್ಷೇತ್ರಾಧಿಕಾರಿ ಕುಮಾರಸ್ವಾಮಿ, ಸ್ಪಿಕ್‌ ಕಂಪನಿ ಕ್ಷೇತ್ರಾಧಿಕಾರಿ ನೆಗಳೂರ, ಫ್ಯಾಕ್ಟ್ ಕಂಪನಿಯ ಕ್ಷೇತ್ರಾಧಿಕಾರಿ ವಿನಾಯಕ ಅಂಗಡಿ, ಸಹಕಾರಿ ಸಂಘದ ಉಪನಿಬಂಧಕ ಯಲ್ಲಪ್ಪ ಹೊಸೂರ, ಸಹಾಯಕ ನಿಬಂಧಕ ದಾನಯ್ಯ ಹಿರೇಮಠ, ಸಹಕಾರಿ ಅಭಿವೃದ್ಧಿ ಅಧಿಕಾರಿ ವಿಕ್ರಮ ಕುಲಕರ್ಣಿ, ಕೃಷಿ ಅಧಿಕಾರಿ ಜಿ.ಎಂ.ಬತ್ತಿಕೊಪ್ಪದ ಹಾಗೂ
ಕೃಷಿ ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next